ಆನೇಕಲ್ | ಹೋಮದ ಹೊಗೆಯಿಂದ ಕೆರಳಿದ ಹೆಜ್ಜೇನು ದಾಳಿ: ಇಬ್ಬರ ಸ್ಥಿತಿ ಗಂಭೀರ
ಬೆಂಗಳೂರು, ಎ.23: ದೇವಸ್ಥಾನದಲ್ಲಿ ಹಾಕಿದ ಹೋಮ ಹೊಗೆಯಿಂದ ಕೆರಳಿದ ಹೆಜ್ಜೇನು ದಾಳಿ ನಡೆಸಿದ್ದರಿಂದ ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಆನೇಕಲ್ ಭಾಗದಲ್ಲಿ ನಡೆದಿದೆ.
ಆನೇಕಲ್-ತಮಿಳುನಾಡು ತಳಿ ರಸ್ತೆಯ ಸೋಲೂರು ಗಡಿಯಲ್ಲಿ ನೂತನವಾಗಿ ನಿರ್ಮಿಸಿದ್ದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹೋಮ ಹಾಕಲು ಮುಂದಾದ ಭಕ್ತ ವೃಂದ, ಮರದಲ್ಲಿದ್ದ ಹೆಜ್ಜೇನು ಗಮನಿಸಿರಲಿಲ್ಲ. ಹೀಗಾಗಿ ಹೋಮದ ಹೊಗೆಯಿಂದ ಕೆರಳಿದ ಹೆಜ್ಜೇನು ಭಕ್ತಾಧಿಗಳ ಮೇಲೆ ದಾಳಿ ಮಾಡಿದೆ.
ಸೋಲೂರು ಗಡಿಯ ಆಂಜನೇಯ ದೇವಾಲಯಕ್ಕೆ ಲಾರಿ ಡಿಕ್ಕಿ ಹೊಡೆದು ಭಗ್ನಗೊಂಡಿದ್ದ ಗುಡಿಯನ್ನು ಮರು ನಿರ್ಮಾಣ ಮಾಡಿದ ಹಿನ್ನಲೆ ತಮುಳುನಾಡಿನ ಗೋಪಸಂದ್ರದ ಮುನಿಮಾರಪ್ಪ ಹೋಮ ಹಾಕಿಸಿದ್ದರು. ಇದೇ ಸಂದರ್ಭದಲ್ಲಿ ಎದ್ದ ಹೆಜ್ಜೇನು ಮುನಿಮಾರಪ್ಪನ ಆದಿಯಾಗಿ ನೆರೆದಿದ್ದವರ ಮೇಲೆ ದಾಳಿ ನಡೆಸಿದೆ. ಸ್ಥಳಕ್ಕೆ ಬಂದ ಅಸ್ಸಾಂ ಮೂಲದ ಚಿಂಟು ತಂಡ ಇವರನ್ನು ಜೇನು ದಾಳಿಯಿಂದ ರಕ್ಷಿಸಲು ಮುಂದಾದಾಗ ಅವರ ಮೇಲೂ ಜೇನು ಚುಚ್ಚಿದೆ. ಹೆಜ್ಜೇನು ದಾಳಿಯಿಂದ ಮುನಿಮಾರಪ್ಪ ಮತ್ತು ಚಿಂತು ಪ್ರಜ್ಞೆತಪ್ಪಿ ಬಿದ್ದಿದ್ದರು. ತಕ್ಷಣ ಇಬ್ಬರನ್ನು ಚುನಾವಣಾ ಚೆಕ್ಪೋಸ್ಟ್ ನಲ್ಲಿದ್ದ ಪೊಲೀಸರು ಚುನಾವಣಾಧಿಕಾರಿಗಳು ಆನೇಕಲ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮುನಿಮಾರಪ್ಪನನ್ನು ತಮಿಳುನಾಡಿನ ಆಸ್ಪತ್ರೆಗೆ ಸಾಗಿಸಿ ಅನಂತರ ಹೆಚ್ಚಿನ ಚಿಕಿತ್ಸೆಗೆ ಹೊಸೂರು ಆಸ್ಪತ್ರೆಗೆ ಸಾಗಿಸಲಾಗಿದೆ.