ಪಿಯು ಪರೀಕ್ಷೆ: ವಾಣಿಜ್ಯ ವಿಭಾಗದಲ್ಲಿ ತಿಪಟೂರಿನ ಖುಷಿ ರಾಜ್ಯಕ್ಕೆ ದ್ವಿತೀಯ
ತಿಪಟೂರು, ಎ.23: ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ತಿಪಟೂರು ಮೂಲದ ಖುಷಿ. ವೈ. ಬಾಗಲಕೋಟ್ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 596 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದಾರೆ.
ದ.ಕ. ಜಿಲ್ಲೆಯ ಮೂಡುಬಿದಿರೆಯಲ್ಲಿನ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಇವರು ಎಕನಾಮಿಕ್ಸ್, ಬಿಸಿನೆಸ್ ಸ್ಟಡೀಸ್, ಅಕೌಂಟೆನ್ಸಿ, ಸ್ಟ್ಯಾಟಿಸ್ಟಿಕ್ಸ್ ಹಾಗೂ ಸಂಸ್ಕೃತದಲ್ಲಿ ತಲಾ 100 ಅಂಕಗಳನ್ನು ಗಳಿಸಿದ್ದಾರೆ. ಇಂಗ್ಲಿಷ್ ಭಾಷೆಯಲ್ಲಿ 100ಕ್ಕೆ 96 ಅಂಕ ಗಳಿಸಿದ್ದಾರೆ.
10ನೇ ತರಗತಿಯವರೆಗೆ ತಿಪಟೂರಿನ ವಿವೇಕಾನಂದ ಶಾಲೆಯಲ್ಲಿ ಓದಿರುವ ಖುಷಿ, ಪಿಯುಸಿ ವ್ಯಾಸಂಗಕ್ಕೆ ಮೂಡಬಿದಿರೆಯ ಎಕ್ಸಲೆಂಟ್ ಪಿಯು ಕಾಲೇಜು ಸೇರಿದ್ದರು.
ಇವರ ತಂದೆ ಯೋಗೀಶ್.ಡಿ. ತಿಪಟೂರು ನಗರದಲ್ಲಿ ಪಾದರಕ್ಷೆ ವ್ಯಾಪಾರಿಯಾಗಿದ್ದಾರೆ. ಮಗಳ ಸಾಧನೆಗೆ ತಂದೆ ಯೋಗೇಶ್ ಹಾಗೂ ತಾಯಿ ಶ್ವೇತಾ ಹರ್ಷ ವ್ಯಕ್ತಪಡಿಸಿದ್ದಾರೆ.
ಚಾರ್ಟೆಡ್ ಅಕೌಂಟೆಂಟ್ ಆಗುವ ಕನಸು ಹೊಂದಿರುವ ಖುಷಿ, ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಪದವಿ ಕಾಲೇಜು ಸೇರಿದ್ದಾರೆ. ಸಿಎಗಾಗಿ ವಿಶೇಷ ತರಬೇತಿ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.