ನಾಗಪುರದಿಂದ ಯಾರೇ ಬಂದರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ: ಜಗದೀಶ್ ಶೆಟ್ಟರ್
''ಬಿಜೆಪಿಯ ಲಿಂಗಾಯತ ಕಡೆಗಣನೆ ಬಗ್ಗೆ ರಾಹುಲ್ ಜತೆ ಚರ್ಚೆ ನಡೆಸಿದೆ''
ಹುಬ್ಬಳ್ಳಿ: 'ನಾಗಪುರದಿಂದ ಯಾರೇ ಬಂದರೂ, ನನ್ನ ವಿರುದ್ಧ ಕೆಲಸ ಮಾಡಿದರೂ ಪ್ರಯೋಜವಾಗುವುದಿಲ್ಲ' ಎಂದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಹೊರಗಿನಿಂದ ಬಂದವರಿಗೆ ಸ್ಥಳೀಯವಾಗಿ ಯಾವ ಜ್ಞಾನವೂ ಇರುವುದಿಲ್ಲ. ಅವರು ಇಲ್ಲಿನ ಸ್ಥಿತಿ ಅಧ್ಯಯನ ಮಾಡುವ ಹೊತ್ತಿಗೆ ಚುನಾವಣೆಯೇ ಮುಗಿದಿರುತ್ತದೆ. ಯಾರೇ ನನಗೆ ಟಾರ್ಗೆಟ್ ಮಾಡಲಿ, ನನ್ನ ಕೆಲಸ ನಾನು ಮಾಡುತ್ತೇನೆ. ಸೆಂಟ್ರಲ್ ಕ್ಷೇತ್ರದ ಜನ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ' ಎಂದು ಹೇಳಿದರು.
'ಆರೆಸ್ಸೆಸ್ ಕೇಂದ್ರ ಸ್ಥಾನವಿರುವ ನಾಗಪುರದಲ್ಲಿಯೇ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಸೋತಿದೆ. ಹಾಗಿದ್ದರೆ ವಿಸ್ತಾರಕರ ತಂತ್ರಗಾರಿಕೆ ಅಲ್ಲೇಕೆ ವಿಫಲವಾಯ್ತು?'' ಎಂದು ಪ್ರಶ್ನಿಸಿದರು.
ಕೂಡಲಸಂಗಮಕ್ಕೆ ಹೋಗುವ ಮಾರ್ಗಮಧ್ಯ ಪಕ್ಷದ ವರಿಷ್ಠ ರಾಹುಲ್ ಹುಬ್ಬಳ್ಳಿಗೆ ಬಂದಿದ್ದರು. ಬಿಜೆಪಿಯವರು ಲಿಂಗಾಯತ ಸಮುದಾಯವನ್ನು ಕಡೆಗಣಿಸುತ್ತಿರುವ ಬಗ್ಗೆ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿದ್ದು, ರಾಜ್ಯ ರಾಜಕೀಯ ಕುರಿತಾಗಿ ಮಾಹಿತಿ ಪಡೆದರು ಜಗದೀಶ ಶೆಟ್ಟರ್ ತಿಳಿಸಿದರು.
ಕಾಂಗ್ರೆಸ್ ಪಕ್ಷ ಲಿಂಗಾಯತರಿಗೆ ಎಲ್ಲ ಸ್ಥಾನಮಾನ ನೀಡಿದೆ. ಈ ಬಾರೀ ಚುನಾವಣೆಯಲ್ಲಿ ಸಮಾಜದ 50ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಹಾನಗಲ್ ಸೇರಿದಂತೆ ಕಿತ್ತೂರು ಕರ್ನಾಟಕ ಭಾಗದಲ್ಲಿ ರಾಹುಲ್ ಗಾಂಧಿ ಪ್ರಚಾರ ಮಾಡಲಿದ್ದಾರೆ. ಹುಬ್ಬಳ್ಳಿ, ಧಾರವಾಡದಲ್ಲೂ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ. ನನಗೂ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಾರಕ್ಕಾಗಿ ಆಹ್ವಾನಿಸುತ್ತಿದ್ದಾರೆ ಎಂದರು.