ಓ ಮೆಣಸೇ...!

Update: 2023-04-23 19:00 GMT

ನನ್ನ ಸಂಪೂರ್ಣ ಬದುಕನ್ನು ಬಿಜೆಪಿ ಹಾಗೂ ನರೇಂದ್ರ ಮೋದಿಯವರಿಗೆ ಮೀಸಲಿಟ್ಟಿದ್ದೇನೆ -ಯಡಿಯೂರಪ್ಪ, ಮಾಜಿ ಸಿಎಂ 
ಈಗ ಅವರಿಗೆ ನಿಮ್ಮ ಅಗತ್ಯ ಇದ್ದರೆ ತಾನೇ ಅವರು ಈ ನಿಮ್ಮ ಹೇಳಿಕೆಗೆ ಕಿವಿ ಕೊಡುವುದು?

----------------------------
 
ಬಿಜೆಪಿಯಲ್ಲಿ ವೇಸ್ಟ್ ಬಾಡಿಗಳನ್ನು, ಕಸ ಕಡ್ಡಿಗಳನ್ನು ತೆಗೆಯಲು ಪ್ರಧಾನಿ ಮೋದಿ ಪ್ರಯತ್ನ ಮಾಡಿದ್ದಾರೆ. -ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಆ ಬಳಿಕ ಅವರು, ಕಸಕಡ್ಡಿಯನ್ನು ಮಾತ್ರ ಉಳಿಸಿಕೊಂಡು ಉಳಿದೆಲ್ಲವನ್ನೂ ಪಕ್ಷದಿಂದ ದೂರ ಓಡಿಸಿದ್ದಾರೆಂಬ ಸುದ್ದಿ ಇದೆಯಲ್ಲಾ?

---------------------------- 

ಯಾರೇ ಆದರೂ ತಾಯಿ(ಬಿಜೆಪಿ)ಗೆ ಒದ್ದು ಹೋಗುವುದು ಸರಿಯಲ್ಲ -ಈಶ್ವರಪ್ಪ, ಮಾಜಿ ಸಚಿವ
  ಪ್ರತಿದಿನ ಹಲವು ಬಾರಿ ಸತ್ಯದ ತಲೆಗೆ ಒದ್ದು ರೂಢಿಯಾದವರು ತಾಯಿಗೆ ಒದ್ದರೆ ಅಚ್ಚರಿ ಏನಿದೆ?
----------------------------
  
ನಾನು ಅಂಬೇಡ್ಕರ್‌ವಾದಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವೆ -ಬಸವರಾಜ ಬೊಮ್ಮಾಯಿ, ಸಿಎಂ
 ನೀವು ಅವಕಾಶವಾದಿ ಎಂದೊಪ್ಪಿಕೊಳ್ಳಿ-ಉಳಿದೆಲ್ಲ ವಾದಗಳು ಅದರೊಳಗೆ ಅಡಗಿವೆ.
----------------------------
  ನಾನೇ ಕಟ್ಟಿದ ಮನೆಯಿಂದ ನನ್ನನ್ನು ಹೊರ ಹಾಕಿದ್ದು ತುಂಬಾ ನೋವು ತಂದಿದೆ -ಜಗದೀಶ್ ಶೆಟ್ಟರ್, ಮಾಜಿ ಸಿಎಂ
 ನೀವೀಗ ಆ ಮನೆಯನ್ನು ಕಟ್ಟಿದ್ದೇಕೆ ಎಂದು ಪಶ್ಚಾತ್ತಾಪ ಪಡಬೇಕೇ ಹೊರತು ಅಲ್ಲಿಂದ ನಿಮ್ಮನ್ನು ಹೊರದಬ್ಬಿದ ಬಗ್ಗೆ ರೋದಿಸಬಾರದು.
----------------------------
  
ಕೇಜ್ರಿವಾಲ್ ‘ಶ್ರೀ ಕೃಷ್ಣ’, ಬಿಜೆಪಿ ‘ಕಂಸ’ -ರಾಘವ್ ಛಡ್ಡಾ, ಆಪ್ ನಾಯಕ
ಆದರೂ ಏಕಲವ್ಯನ ಬಗ್ಗೆ ಅವರ ನಡುವೆ ಯಾವುದೇ ಭಿನ್ನಮತವಿಲ್ಲ.

----------------------------
  ಡಬಲ್ ಇಂಜಿನ್ ಸರಕಾರದ ಬಗ್ಗೆ ರಾಜ್ಯದ ಜನರಲ್ಲಿ ಒಳ್ಳೆಯ ಅಭಿಪ್ರಾಯವಿದೆ -ನಳಿನ್ ಕುಮಾರ್ ಕಟೀಲು, ಸಂಸದ
ರೈಲಿಗೆ ಕೆಲವು ಚಕ್ರಗಳೂ ಇದ್ದಿದ್ದರೆ ಚೆನ್ನಾಗಿತ್ತು ಎಂಬುದು ಅವರ ಅನಿಸಿಕೆ.

---------------------------- 
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಜ್ಜನರ ಸಂಗ ತೊರೆದು ದುರ್ಜನರ ಸಂಗಡ ಸೇರಿದ್ದಾರೆ -ಬಸವರಾಜ ಬೊಮ್ಮಾಯಿ, ಸಿಎಂ
 

ತಾನು ನಲ್ವತ್ತು ಪರ್ಸೆಂಟ್ ಬಿಟ್ಟು ಕಡಿಮೆ ಪರ್ಸೆಂಟ್ ಪಕ್ಷಕ್ಕೆ ಹೋಗುತ್ತಿರುವುದು ತನ್ನ ತ್ಯಾಗ ಎಂದು ಅವರು ಹೇಳಿಕೊಳ್ಳುತ್ತಿದ್ದಾರಂತೆ.

----------------------------
 ಕುಟುಂಬ ರಾಜಕಾರಣವು ಈ ದೇಶ ಹಾಗೂ ರಾಜ್ಯಕ್ಕೆ ಅಂಟಿರುವ ಶಾಪ -ಬಿ.ವೈ.ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ
 ನೀವು ಮತ್ತು ನಿಮ್ಮ ಕುಟುಂಬದ ಎಲ್ಲ ಸದಸ್ಯರು ರಾಜಕೀಯ ಬಿಟ್ಟು ದೂರ ಹಿಮಾಲಯದಲ್ಲಿ ತಪೋನಿರತರಾಗಿರುವುದಕ್ಕೆ ಇದುವೇ ಕಾರಣವೇ?
----------------------------
ಮುಂದೊಂದು ದಿನ ಆರೆಸ್ಸೆಸ್ಸೇ ಒಂದು ಸಮಾಜವಾಗಿ ರೂಪುಗೊಳ್ಳಲಿದೆ. ಆಗ ಪ್ರತ್ಯೇಕ ಆರೆಸ್ಸೆಸ್ ಅಗತ್ಯ ಇರುವುದಿಲ್ಲ -ಮೋಹನ್ ಭಾಗವತ್, ಆರೆಸ್ಸೆಸ್ ಸರಸಂಘ ಚಾಲಕ
  ಪೂರ್ಣ ಪ್ರಮಾಣದ ಹುಚ್ಚಾಸ್ಪತ್ರೆ ಇದ್ದರೆ, ಇತರ ಆಸ್ಪತ್ರೆಗಳಲ್ಲಿ ಹುಚ್ಚರಿಗಾಗಿ ಪ್ರತ್ಯೇಕ ವಿಭಾಗದ ಅಗತ್ಯವಿರುವುದಿಲ್ಲ.

----------------------------
  
ಬಿಜೆಪಿ ಜಾತಿ ಆಧಾರಿತ ಪಕ್ಷ ಅಲ್ಲವೇ ಅಲ್ಲ -ಸುನೀಲ್ ಕುಮಾರ್, ಸಚಿವ
 ಜಾತಿಗಳನ್ನು ಮೀರಿದ ಜನಾಂಗವಾದವೇ ಆ ಪಕ್ಷದ ತಳಹದಿ.
----------------------------

ಬದಲಾವಣೆ ಕಾಲದ ಅಗತ್ಯ -ಶೋಭಾ ಕರಂದ್ಲಾಜೆ, ಸಚಿವೆ
 ನೀವು ಪರೋಕ್ಷವಾಗಿ, ಬಿಜೆಪಿ ಸಾಕು, ಕಾಂಗ್ರೆಸ್ ಬೇಕು ಅನ್ನುತ್ತಿಲ್ಲ ತಾನೇ?
----------------------------
  
ಒಂದು ವೇಳೆ ನಾನು ಭ್ರಷ್ಟ ಎಂದಾದಲ್ಲಿ, ಜಗತ್ತಿನ ಯಾವ ವ್ಯಕ್ತಿಯೂ ಪ್ರಾಮಾಣಿಕ ಅಲ್ಲ -ಅರವಿಂದ ಕೇಜ್ರಿವಾಲ್, ದಿಲ್ಲಿ ಸಿಎಂ 
ಅಂದರೆ, ನೀವು ಪ್ರಾಮಾಣಿಕ ಎಂದು ಒಪ್ಪಿಕೊಳ್ಳುವವರು, ಜಗತ್ತಿನ ಯಾವ ವ್ಯಕ್ತಿಯೂ ಭ್ರಷ್ಟನಲ್ಲ ಎಂದು ನಂಬಬೇಕೆ?

----------------------------
  
ಜೆಡಿಎಸ್ ಕಥೆ ಮುಗಿದೇ ಹೋಯಿತು ಎನ್ನುವವರಿಗೆ ಈಗ ಅದರ ಶಕ್ತಿ ಏನು ಎಂಬುದು ಅರ್ಥವಾಗುತ್ತಿದೆ -ಸಿ.ಎಂ.ಇಬ್ರಾಹೀಂ, ಜೆಡಿಎಸ್ ಅಧ್ಯಕ್ಷ
 ಉತ್ತರಕ್ರಿಯೆ ಬಹಳ ಸಕ್ರಿಯವಾಗಿ ನಡೆಯುತ್ತಿರುವುದು ಎದ್ದು ಕಾಣುತ್ತಿದೆ.

----------------------------
  
ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್‌ರಂತಹವರು ಪಕ್ಷ ಬಿಟ್ಟು ಹೋಗುವುದರಿಂದ ಬಿಜೆಪಿ ಸ್ವಚ್ಛವಾಗುತ್ತದೆ -ರಮೇಶ್ ಜಾರಕಿಹೊಳಿ, ಶಾಸಕ
 ನೀವು ಪಕ್ಷ ತೊರೆದಾಗ ಕಾಂಗ್ರೆಸ್ ಕೂಡ ಇದನ್ನೇ ಹೇಳಿತ್ತು.

----------------------------
  
ನಾನು ಬಿಜೆಪಿಗೆ ಹೋಗುವುದಿಲ್ಲ ಎಂಬುದನ್ನು ಬೇಕಿದ್ದರೆ ಸ್ಟಾಂಪ್ ಪೇಪರ್‌ನಲ್ಲಿ ಬರೆದು ಕೊಡುತ್ತೇನೆ -ಅಜಿತ್ ಪವಾರ್, ಎನ್‌ಸಿಪಿ ನಾಯಕ

ಹಾಗೆಂದು ನೀವು ಹಣೆಯಲ್ಲಿ ಕೆತ್ತಿಸಿಕೊಂಡರೂ ಜನ ನಂಬುವುದಿಲ್ಲ-ಏನು ಮಾಡೋಣ.

----------------------------
ಯಾವುದೇ ಮಾಫಿಯಾ ಡಾನ್ ಅಥವಾ ಅಪರಾಧಿ ಉತ್ತರ ಪ್ರದೇಶದಲ್ಲಿ ಉದ್ಯಮಿಗಳಿಗೆ ಬೆದರಿಕೆ ಹಾಕುವಂತಿಲ್ಲ, ಅವರಿಂದ ಹಣ ವಸೂಲು ಮಾಡುವಂತಿಲ್ಲ -ಯೋಗಿ ಆದಿತ್ಯನಾಥ್, ಉ.ಪ್ರ. ಸಿಎಂ 
ಅಪರಾಧ ಕೃತ್ಯಗಳನ್ನು ಮಾಡುವುದಕ್ಕೆ ಮತ್ತು ಎಲ್ಲರಿಂದ ಹಣ ದೋಚುವುದಕ್ಕೆಂದೇ ಒಂದು ಕ್ರಿಮಿನಲ್ ಸರಕಾರವಿರುವ ರಾಜ್ಯದಲ್ಲಿ ಚಿಲ್ಲರೆ ಮಾಫಿಯಾಗಳ ಅಗತ್ಯವೇ ಎಲ್ಲಿದೆ?

----------------------------
 ಪಕ್ಷ ನನಗೆ ಶಾಸಕ, ಸಚಿವ ಸ್ಥಾನ ನೀಡಿದೆ. ಅದೇ ರೀತಿ ನೋವನ್ನೂ ಕೊಟ್ಟಿದೆ -ರಾಮದಾಸ್, ಶಾಸಕ
  ಆ ಪಕ್ಷವು ದೇಶ ಮತ್ತು ಸಮಾಜಕ್ಕೆ ಕೊಟ್ಟ ನೋವಿಗೆ ಹೋಲಿಸಿದರೆ ನನಗೆ ಕೊಟ್ಟ ನೋವು ಸಣ್ಣದು ಎಂದುಕೊಂಡು ಸಮಾಧಾನ ಪಟ್ಟುಕೊಳ್ಳಿ.

----------------------------  
ಅಮುಲ್ ಯಾರ ಮೇಲೆ ಕೂಡಾ ಸವಾರಿ ಮಾಡುವ ಉದ್ದೇಶ ಹೊಂದಿಲ್ಲ. ಆದ್ದರಿಂದ ಅದರ ಉತ್ಪನ್ನವನ್ನು ಬಹಿಷ್ಕರಿಸಬೇಡಿ -ನರೇಂದ್ರ ಮೋದಿ, ಪ್ರಧಾನಿ 
ಹೀಗೆ ಹೇಳಿಯೇ ಕರ್ನಾಟಕದ ಬ್ಯಾಂಕುಗಳ ಕತೆ ಮುಗಿಸಿದಿರಿ.

----------------------------
  ನನ್ನ ಕ್ಷೇತ್ರ ಅಭಿವೃದ್ಧಿ ಆಗಿಲ್ಲ ಎನ್ನುವವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸುತ್ತೇನೆ -ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಸಭಾಧ್ಯಕ್ಷ
 ಅಲ್ಲಿರುವ ನಿಮ್ಮ ಖಾಯಂ ರೂಮ್‌ನಲ್ಲಿ ಅಷ್ಟೊಂದು ಮಂದಿಗೆ ಜಾಗ ಎಲ್ಲಿದೆ?
----------------------------
  ಪ್ರಧಾನಿ ಮೋದಿ ನೇತೃತ್ವದ ಸರಕಾರ ಕೇವಲ 9 ವರ್ಷದಲ್ಲಿ 74 ವಿಮಾನ ನಿಲ್ದಾಣ ನಿರ್ಮಿಸಿ ದಾಖಲೆಯ ಸಾಧನೆ ಮಾಡಿದೆ -ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ
 ದೇಶದ ಬಡವರ ಉದ್ಧಾರಕ್ಕೆ ಇದಕ್ಕಿಂತ ದೊಡ್ಡ ಕ್ರಮ ಏನಿರಲು ಸಾಧ್ಯ?
----------------------------
 ಕೆಲವರು ಗೋರಿಗೆ ಹೋಗುವವರೆಗೂ ಹಾಲಿ ಶಾಸಕನಾಗಿಯೇ ಇರಲು ಬಯಸುತ್ತಾರೆ -ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
 ಇನ್ನೊಬ್ಬರನ್ನು ಗೋರಿಗೆ ಕಳುಹಿಸಿ ಹಾಲಿ ಶಾಸಕರಾಗಿರಲು ಬಯಸುವವರ ಬಗ್ಗೆ ಎಚ್ಚರಿಕೆ ಬೇಕು.

----------------------------
 ತಮಿಳುನಾಡಿನ ರಾಜಕೀಯ ಕರ್ನಾಟಕಕ್ಕಿಂತ ಭಿನ್ನ -ಅಣ್ಣಾಮಲೈ, ತ.ನಾ. ಬಿಜೆಪಿ ಅಧ್ಯಕ್ಷ
 ತಮಿಳುನಾಡಿನಲ್ಲಿ ಸಿಂಗಂ ಎಂದು ಕರೆಸಿಕೊಳ್ಳುವುದು ಅಷ್ಟು ಸುಲಭವಿಲ್ಲ ಅಲ್ಲವೇ?
----------------------------
 
ನಾನು ಆಕಸ್ಮಿಕ ಪ್ರಧಾನಿ ಅಲ್ಲ -ದೇವೇಗೌಡ, ಮಾಜಿ ಪ್ರಧಾನಿ
ಆಕಸ್ಮಿಕ ಮಾಜಿ ಪ್ರಧಾನಿ ಎಂದು ಕರೆಯಬಹುದೇ?

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...