ಗೆಲ್ಲುವುದೊಂದೇ ಗುರಿ; ಪ್ರಜಾಪ್ರಭುತ್ವದಲ್ಲಿ ಭ್ರಷ್ಟರು, ಕಳಂಕಿತರದೇ ಆಟ

Update: 2023-04-24 06:06 GMT

ಕರ್ನಾಟಕ ವಿಧಾನಸಭೆಗೆ ಅಖಾಡ ಸಿದ್ಧವಾಗಿದೆ. ನಾಮಪತ್ರ ಸಲ್ಲಿಕೆಯೂ ಮುಗಿದು, ಚುನಾವಣಾ ಕಣದಲ್ಲಿ ಅಭ್ಯರ್ಥಿಗಳ ಅಬ್ಬರ ಕಾಣುತ್ತಿದೆ. ಇನ್ನು ಆಟವಷ್ಟೇ ಬಾಕಿ. ಉಮೇದುವಾರರ ಕಡೆಗೊಮ್ಮೆ ಗಮನ ಹರಿಸಿದರೆ ಕಾಣಿಸುವುದು ಬಹುತೇಕ ಎಲ್ಲರೂ ಕೋಟ್ಯಧಿಪತಿಗಳೇ ಎಂಬ ವಿಚಾರ. ದಶಕೋಟಿ ಇರುವವರೊ, ಶತಕೋಟ್ಯಧಿಪತಿಗಳೊ ಅಥವಾ ಸಾವಿರ ಕೋಟಿಗಳ ಒಡೆಯರೊ ಎಂಬುದಷ್ಟೇ ವ್ಯತ್ಯಾಸ.  

ರಾಜಕಾರಣದಲ್ಲಿರುವವರ ಆಸ್ತಿ ಕೆಲವೇ ವರ್ಷಗಳಲ್ಲಿ ಏರುವುದು, ದುಪ್ಪಟ್ಟಾಗುವುದೂ ಸಾಮಾನ್ಯವೇ ಆಗುತ್ತಿದೆ. ಜನರೆದುರು ಕೈಮುಗಿದು ನಿಂತು ಮತಭಿಕ್ಷೆ ಕೇಳುವ ಇವರೆಲ್ಲ ಕುಬೇರ ಸ್ವರೂಪಿಗಳು.
ಹಣ ಮತ್ತು ಅಪರಾಧ ಎರಡೂ ಸಾಮಾನ್ಯವಾಗಿ ಜೊತೆಜೊತೆಗೇ ಕಾಣಿಸುವ ಅಂಶಗಳಾಗಿದ್ದು, ರಾಜಕಾರಣದಲ್ಲಿ ಕೂಡ ಅವೆರಡರ ಪರಿಣಾಮ ಢಾಳಾಗಿಯೇ ಇದೆ.

ಶಾಸನಸಭೆಗಳು ಶ್ರೀಮಂತರ ಕೇಂದ್ರಗಳಾಗುತ್ತಿವೆ. ಕೋಟಿಗಟ್ಟಲೆ ಮೌಲ್ಯದ ಆಸ್ತಿಪಾಸ್ತಿ ಘೋಷಿಸಿಕೊಳ್ಳುವ ಶಾಸಕರ ಸಂಖ್ಯೆ ಏರುತ್ತಲೇ ಇದೆ. ಕರ್ನಾಟಕದ ಶಾಸಕರೂ ಇದಕ್ಕೆ ಹೊರತಲ್ಲ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಹೇಳುವ ಪ್ರಕಾರ, ಕರ್ನಾಟಕದ ಪ್ರಸ್ತುತ ಶೇ.95 ಶಾಸಕರು ಕೋಟ್ಯಧಿಪತಿಗಳು. ಪ್ರತೀ ಹಾಲಿ ಶಾಸಕರ ಸರಾಸರಿ ಆಸ್ತಿ ಮೌಲ್ಯ 29.85 ಕೋಟಿ ರೂ. ಯಾಗಿದೆ.

ಸರಾಸರಿ ಆಸ್ತಿ ಲೆಕ್ಕದಲ್ಲಿ ಕಾಂಗ್ರೆಸ್ ಶಾಸಕರು ಮುಂದಿದ್ದು, ಶಾಸಕರ ಸರಾಸರಿ ಆಸ್ತಿ 48.58 ಕೋಟಿ ರೂ. 118 ಬಿಜೆಪಿ ಶಾಸಕರ ಪ್ರತೀ ಅಭ್ಯರ್ಥಿಯ ಸರಾಸರಿ ಆಸ್ತಿ 19.6 ಕೋಟಿ ರೂ.ಯಷ್ಟಿದ್ದರೆ, ಜೆಡಿಎಸ್ ಶಾಸಕರ ಸರಾಸರಿ ಆಸ್ತಿ 4.34 ಕೋಟಿ ಮತ್ತು ನಾಲ್ವರು ಪಕ್ಷೇತರ ಶಾಸಕರು 40.92 ಕೋಟಿ ರೂ. ಸರಾಸರಿ ಆಸ್ತಿ ಹೊಂದಿದ್ದಾರೆ ಎಂದು ವರದಿ ಹೇಳುತ್ತದೆ. ಹಾಗೆಯೇ ಶೇ.35 ಶಾಸಕರು ಕ್ರಿಮಿನಲ್ ಆರೋಪಗಳನ್ನು ಹೊಂದಿದ್ದಾರೆ.

ಬಿಜೆಪಿಯ 112 ಶಾಸಕರಲ್ಲಿ 49, ಕಾಂಗ್ರೆಸ್ನ 67 ಶಾಸಕರಲ್ಲಿ 16, ಜೆಡಿಎಸ್ನ 30 ಶಾಸಕರಲ್ಲಿ 9 ಮತ್ತು 4 ಸ್ವತಂತ್ರ ಶಾಸಕರಲ್ಲಿ ಇಬ್ಬರು ತಮ್ಮ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿರುವುದನ್ನು ಎಡಿಆರ್ ವರದಿ ಉಲ್ಲೇಖಿಸಿದೆ. ಅದರಂತೆ, ಬಿಜೆಪಿಯ 35, ಕಾಂಗ್ರೆಸ್ನ 13 ಮತ್ತು ಜೆಡಿಎಸ್ನ 8 ಶಾಸಕರ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳಿವೆ.

ಈ ಸಲವೂ ಪ್ರಮುಖ ರಾಜಕೀಯ ಪಕ್ಷಗಳು ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳಿಗೆ ಮಣೆ ಹಾಕಿವೆ. ರೌಡಿ ಶೀಟರ್ಗಳಾದ ಫೈಟರ್ ರವಿ, ಸೈಲೆಂಟ್ ಸುನೀಲ್ ಇವರೆಲ್ಲ ಬಿಜೆಪಿ ಅಭ್ಯರ್ಥಿಗಳಾಗಲು ತುದಿಗಾಲಲ್ಲಿ ನಿಂತಿದ್ದರು. ಅವರನ್ನು ಕಣಕ್ಕಿಳಿಸಲು ಬಿಜೆಪಿಯೂ ಸಿದ್ಧವಾಗಿತ್ತು. ಫೈಟರ್ ರವಿಯಂತೂ ಪ್ರಧಾನಿ ಮೋದಿ ಬೆಂಗಳೂರಿಗೆ ಬಂದಾಗ ಮಂಡ್ಯದ ಹೆಲಿಪ್ಯಾಡ್ನಲ್ಲಿ ಅವರನ್ನು ಸ್ವಾಗತಿಸಿದ ಬಿಜೆಪಿ ಟೀಂನಲ್ಲಿದ್ದದ್ದು, ಮೋದಿಯವರಿಗೆ ಕೈಮುಗಿದು ನಿಂತಿದ್ದು ದೊಡ್ಡ ಚರ್ಚೆಗೆ ಕಾರಣವಾಗಿತ್ತು.

ಕಡೆಗೆ ಬಿಜೆಪಿ ಈ ಇಬ್ಬರಿಗೂ ಟಿಕೆಟ್ ನಿರಾಕರಿಸಿತ್ತಾದರೂ, ರಾಜ್ಯದ ಕನಿಷ್ಠ 5 ಜಿಲ್ಲೆಗಳಲ್ಲಿ 30ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್ಗಳನ್ನು ಎದುರಿಸುತ್ತಿರುವ ಇನ್ನೊಬ್ಬ ರೌಡಿಶೀಟರ್ ಮಣಿಕಂಠ ರಾಥೋಡ್ಗೆ ಟಿಕೆಟ್ ನೀಡಿದೆ. ಚಿತ್ತಾಪುರದಲ್ಲಿ  ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ರಾಥೋಡ್ ಎದುರಾಳಿ.

ಕಳೆದ ನವೆಂಬರ್ನಲ್ಲಿ ಪ್ರಿಯಾಂಕ್ ಖರ್ಗೆಗೆ ಕೊಲೆ ಬೆದರಿಕೆ ಹಾಕಿದ್ದಕ್ಕಾಗಿ ರಾಠೋಡ್ ಬಂಧನವಾಗಿತ್ತು. ಗುಂಡಿನ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಕಲಬುರ್ಗಿ ಪೊಲೀಸ್ ಕಮಿಷನರ್ ಒಂದು ವರ್ಷ ನಗರದಿಂದ ಹೊರಹಾಕಿದ್ದರು. ಆದರೆ ರಾಥೋಡ್ ಅದಕ್ಕೆ ಕೋರ್ಟ್ನಿಂದ ತಡೆಯಾಜ್ಞೆ ತಂದರು.

ರಾಥೋಡ್ ವಿರುದ್ಧ ಕೊಲೆ ಯತ್ನ, ಮಾದಕ ದ್ರವ್ಯ ಸಾಗಣೆ, ಅಕ್ರಮ ಬಂದೂಕುಗಳನ್ನು ಹೊಂದಿರುವುದು ಮತ್ತು ಅನ್ನ ಭಾಗ್ಯ ಅಕ್ಕಿ ಅಕ್ರಮ ಸಾಗಾಟ ಮೊದಲಾದ ಆರೋಪಗಳಿವೆ. ಕೊಲೆ ಯತ್ನ ಪ್ರಕರಣದ ಆರೋಪಿ ಕಟ್ಟಾ ಜಗದೀಶ್ಗೂ ಬಿಜೆಪಿ ಟಿಕೆಟ್ ಸಿಕ್ಕಿದೆ. ಅಲ್ಲದೆ, ಐಎಂಎ ಹಗರಣದಲ್ಲಿ ಬಂಧಿಸಲ್ಪಟ್ಟಿದ್ದ ಮಾಜಿ ಕೆಎಎಸ್ ಅಧಿಕಾರಿ ಎಲ್. ಸಿ. ನಾಗರಾಜ್ಗೂ ಬಿಜೆಪಿ ಟಿಕೆಟ್ ನೀಡಿದೆ. ಈ ಪ್ರಕರಣದಲ್ಲಿ ಐಎಂಎ ಪರ ವರದಿ ಸಲ್ಲಿಸಲು 4.5 ಕೋಟಿ ರೂ. ಪಡೆದ ಆರೋಪ ನಾಗರಾಜ್ ಮೇಲಿದೆ.

ಇನ್ನು ಕ್ರಿಮಿನಲ್ಗಳ ವಿಚಾರವಾಗಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದ ಕಾಂಗ್ರೆಸ್ ಕೂಡ ಧಾರವಾಡದಲ್ಲಿ ಕೊಲೆ ಆರೋಪಿ ವಿನಯ್ ಕುಲಕರ್ಣಿಯನ್ನು ಕಣಕ್ಕಿಳಿಸಿದೆ. ಕುಲಕರ್ಣಿಗೆ ಧಾರವಾಡ ಪ್ರವೇಶಿಸದಂತೆ ಕೋರ್ಟ್ ನಿರ್ದೇಶನವಿದ್ದು, ಪತ್ನಿಯ ಮೂಲಕ ನಾಮಪತ್ರ ಸಲ್ಲಿಸಲಾಗಿದೆ.

ಪಿಎಸ್ಸೈ ನೇಮಕಾತಿ ಹಗರಣದ ಪ್ರಮುಖ ಆರೋಪಿಯಾಗಿರುವ ರುದ್ರಗೌಡ ಪಾಟೀಲ್ ಅಲಿಯಾಸ್ ಆರ್.ಡಿ. ಪಾಟೀಲ್ ಕಲಬುರ್ಗಿಯ ಅಫಜಲಪುರ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿ. ಎಸ್ಪಿ ಅಭ್ಯರ್ಥಿಯಲ್ಲದೆ ಪಕ್ಷೇತರ ಅಭ್ಯರ್ಥಿಯಾಗಿಯೂ ನಾಮಪತ್ರ ಸಲ್ಲಿಸಿರುವ ಪಾಟೀಲ್ ಘೋಷಿಸಿಕೊಂಡ ಆಸ್ತಿ ಮೌಲ್ಯ 6.5 ಕೋಟಿ ರೂ. ಜೈಲಿನಿಂದ ಪೊಲೀಸ್ ವಾಹನದಲ್ಲಿ ಬಂದು ನಾಮಪತ್ರ ಸಲ್ಲಿಸಿದ್ದ ಪಾಟೀಲ್ಗೆ ಮರುದಿನ ಹೈಕೋರ್ಟ್ ಜಾಮೀನು ನೀಡಿದೆ.

ಹೈಕೋರ್ಟ್ನ ಕಲಬುರ್ಗಿ ಪೀಠ ಪಾಟೀಲ್ ವಿರುದ್ಧದ ಎಲ್ಲಾ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡಿದ್ದು, ದಾಖಲಾಗಿರುವ ಎಲ್ಲಾ 11 ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆ ನಡೆಸುವಂತೆ ಕೆಳ ನ್ಯಾಯಾಲಯಕ್ಕೆ ಸೂಚಿಸಿದೆ.
ಎಡಿಆರ್ ವರದಿಯ ಪ್ರಕಾರ, ಕರ್ನಾಟಕದಲ್ಲಿ 2004ರಿಂದ ಸಂಸತ್ತಿಗೆ ಮತ್ತು ವಿಧಾನಸಭೆಗೆ ಸ್ಪರ್ಧಿಸುತ್ತಿರುವ ಪ್ರತೀ 20 ಅಭ್ಯರ್ಥಿಗಳಲ್ಲಿ ಸುಮಾರು ಮೂವರು ಕಳಂಕಿತ ಹಿನ್ನೆಲೆಯವರು ಮತ್ತು ಆ ಮೂವರಲ್ಲಿ ಒಬ್ಬರು ಚುನಾವಣೆಯಲ್ಲಿ ಗೆಲ್ಲುತ್ತಿದ್ದಾರೆ.

ಕಳೆದ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳ ಪಾಲು ಶೇ.5ರಷ್ಟು ಹೆಚ್ಚಿದೆ. ಅವರಲ್ಲಿ ಗೆಲ್ಲುತ್ತಿರುವವರ ಪ್ರಮಾಣ ನೋಡಿಕೊಂಡರೆ ಶೇ.15ರಷ್ಟು ಏರಿಕೆಯಾಗಿದೆ. 2008ರಲ್ಲಿ ಗೆದ್ದ ಕ್ರಿಮಿನಲ್ ಹಿನ್ನೆಲೆಯವರ ಸಂಖ್ಯೆ ಶೇ.20ರಷ್ಟಿತ್ತು. 2013 ಮತ್ತು 2018ರಲ್ಲಿ ಕ್ರಮವಾಗಿ ಶೇ.34 ಮತ್ತು ಶೇ.35ಕ್ಕೆ ಅಂಥವರ ಸಂಖ್ಯೆ ಏರಿಕೆಯಾಗಿದೆ.

ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ನಲ್ಲಿ ಕಳಂಕಿತ ಶಾಸಕರ ಪಾಲು ಹಿಂದಿನ ಎರಡೂ ವಿಧಾನಸಭಾ ಚುನಾವಣೆಗಳಲ್ಲಿ ಹೆಚ್ಚಿದ್ದು, ಕಾಂಗ್ರೆಸ್ಗಿಂತ ಬಿಜೆಪಿಯಿಂದ ಗೆದ್ದವರ ಸಂಖ್ಯೆ ಹೆಚ್ಚಿದೆ.

2008 ಮತ್ತು 2018ರ ಚುನಾವಣೆಗಳನ್ನು ಹೋಲಿಸಿದರೆ, ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಸ್ಪರ್ಧಿಗಳ ಸಂಖ್ಯೆ ತೀರಾ ಏರಿಲ್ಲವಾದರೂ, ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳ ಗೆಲುವಿನ ಪ್ರಮಾಣ ಹೆಚ್ಚುತ್ತಿರುವುದು ಮಾತ್ರ ಆತಂಕಕಾರಿ ವಿಚಾರ. ಇದು, ರಾಜಕೀಯ ಪಕ್ಷಗಳ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯ ಬಗ್ಗೆಯೂ ಅನುಮಾನಗಳನ್ನು ಹುಟ್ಟುಹಾಕಿದೆ.

ವಾಶಿಂಗ್ಟನ್ನಲ್ಲಿರುವ ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್ನ ಮಿಲನ್ ವೈಷ್ಣವ್ ಪ್ರಕಾರ, ಗೆಲ್ಲುವುದನ್ನೇ ಗುರಿಯಾಗಿಟ್ಟುಕೊಳ್ಳುವ ರಾಜಕೀಯ ಪಕ್ಷಗಳು, ಪ್ರಾಮಾಣಿಕರಿಗೆ ಮಣೆ ಹಾಕದೆ, ಭ್ರಷ್ಟ ಮತ್ತು ಅಪರಾಧಿ ಹಿನ್ನೆಲೆಯವರನ್ನೇ ಜೊತೆಗೆ ಉಳಿಸಿಕೊಳ್ಳುತ್ತವೆ. ಹಣ ನಿರ್ಣಾಯಕ ಅಂಶವಾಗುತ್ತಿದೆ. ಚುನಾವಣೆಗಳು ದುಬಾರಿಯಾಗಿವೆ ಮತ್ತು ಪಕ್ಷಗಳು ದುರ್ಬಲಗೊಂಡಿವೆ. ಹಾಗಾಗಿ ದುಡ್ಡಿರುವವರಿಗೆ ದೊಡ್ಡಮಟ್ಟದ ಸ್ವಾಗತ ಸಿಗುತ್ತಿದೆ. ಕ್ರಿಮಿನಲ್ ಹಿನ್ನೆಲೆಯವರು ಹಣವಂತರೂ ಆಗಿರುವುದರಿಂದ ಅಂಥವರು ರಾಜಕಾರಣಕ್ಕೆ ಬರಲು ಇವತ್ತಿನ ಸನ್ನಿವೇಶ ಸಂಪೂರ್ಣ ಅವಕಾಶ ತೆರೆಯುತ್ತಿದೆ.

ಗೆಲ್ಲುವ ಅಭ್ಯರ್ಥಿಗಳಿಗೆ ಅವಕಾಶ ಎಂದೇ ರಾಜಕೀಯ ಪಕ್ಷಗಳು ಟಿಕೆಟ್ ಅಂತಿಮಗೊಳಿಸುವಾಗ ಹೇಳುವುದನ್ನು ಕೇಳಿಸಿಕೊಳ್ಳುತ್ತಿದ್ದೇವೆ. ಗೆಲುವು ಮಾತ್ರವೇ ಮಾನದಂಡವಾಗಿರುವಾಗ, ಕಳಂಕಿತರು ಗೆಲ್ಲುವ ಸಾಧ್ಯತೆ ಪ್ರಜಾಪ್ರಭುತ್ವದ ಪಾಲಿಗೆ ಒಳ್ಳೆಯ ಲಕ್ಷಣವಂತೂ ಅಲ್ಲ. ಚುನಾವಣೆಗಳು ನ್ಯಾಯಸಮ್ಮತ ಮತ್ತು ನೈತಿಕವಾಗಿ ನಡೆಯಬೇಕಾದರೆ, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಅಗತ್ಯವಿದೆ. ಆದರೆ ಬಗೆಹರಿಯದ ದೊಡ್ಡ ಪ್ರಶ್ನೆಯೆಂದರೆ, ಅಂಥ ಪಾರದರ್ಶಕತೆ ಇಂದಿನ ರಾಜಕಾರಣದಲ್ಲಿ ಯಾರಿಗೆ ಬೇಕಾಗಿದೆ ಎಂಬುದು.