ಶೆಟ್ಟರ್ ಭ್ರಷ್ಟಾಚಾರ ಮಾಡದ ಕಾರಣ ಮಂತ್ರಿಯೂ ಆಗಲಿಲ್ಲ, ಬಿಜೆಪಿಯಲ್ಲಿ ಟಿಕೆಟ್ ಕೂಡ ಸಿಗಲಿಲ್ಲ: ರಾಹುಲ್‌ ಗಾಂಧಿ

''ಬಿಜೆಪಿಗೆ 40ಕ್ಕಿಂತ ಹೆಚ್ಚಿನ ಸೀಟುಗಳನ್ನು ನೀಡಬೇಡಿ''

Update: 2023-04-24 17:39 GMT

ಹಾವೇರಿ, ಎ. 24: ‘ಕಾಂಗ್ರೆಸ್ ಪಕ್ಷ ಕನಿಷ್ಠ 150 ಸ್ಥಾನಗಳನ್ನು ನೀಡಬೇಕು. ಇಲ್ಲದಿದ್ದರೆ ಭ್ರಷ್ಟಾಚಾರದ ಹಣದಲ್ಲಿ ಅವರು(ಬಿಜೆಪಿ) ಶಾಸಕರನ್ನು ಖರೀದಿ ಮಾಡುತ್ತಾರೆ. ಹೀಗಾಗಿ ನೀವು ಬಿಜೆಪಿಯವರಿಗೆ 40ಕ್ಕಿಂತ ಹೆಚ್ಚಿನ ಸೀಟುಗಳನ್ನು ನೀಡಬೇಡಿ’ ಎಂದು ಎಐಸಿಸಿ ಮುಖಂಡ ರಾಹುಲ್ ಗಾಂಧಿ, ಮನವಿ ಮಾಡಿದ್ದಾರೆ.

ಸೋಮವಾರ ಜಿಲ್ಲೆಯ ಹಾನಗಲ್‍ನಲ್ಲಿ ಪಕ್ಷದಿಂದ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ‘ಶೆಟ್ಟರ್‍ರಂತಹ ಹಿರಿಯ ನಾಯಕರಿಗೆ ಬಿಜೆಪಿ ಏಕೆ ಟಿಕೆಟ್ ನೀಡಲಿಲ್ಲ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಶೆಟ್ಟರ್ ರಾಜ್ಯದಲ್ಲಿ ಅವರು ಬಿಜೆಪಿ ಕಟ್ಟಿ ಬೆಳೆಸಿದ್ದಾರೆ. ಅವರು ತಮ್ಮ ಭಾಷಣದಲ್ಲಿ ತಮಗೆ ಯಾಕೆ ಟಿಕೆಟ್ ಸಿಕ್ಕಿಲ್ಲ ಎಂದು ಕಾರಣವನ್ನು ಹೇಳಿದರು. ಅದೇನೆಂದರೆ ಅವರ ವಿರುದ್ಧ ಯಾವುದೇ ಟೇಪ್, ಭ್ರಷ್ಟಾಚಾರ ಪ್ರಕರಣವಾಗಲಿ ಇಲ್ಲ. ಅವರು ಭ್ರಷ್ಟಾಚಾರ ಮಾಡದ ಕಾರಣ ಬಿಜೆಪಿಯಲ್ಲಿ ಟಿಕೆಟ್ ಸಿಕ್ಕಿಲ್ಲ’ ಎಂದು ಲೇವಡಿ ಮಾಡಿದರು. ಅದಕ್ಕೆ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯೂ ಆಗಲಿಲ್ಲ, 

‘ಮೋದಿ, ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡುವಾಗ ರಾಜ್ಯದ ಶೇ.40ರಷ್ಟು ಕಮಿಷನ್ ಕುರಿತು ಮಾತನಾಡುವುದಿಲ್ಲ. ಭ್ರಷ್ಟರೆಲ್ಲರೂ ಅವರ ಸುತ್ತ ಇರುತ್ತಾರೆ. ಮೋದಿ ಯಾರು ಭ್ರಷ್ಟರಲ್ಲವೋ ಅವರನ್ನು ಪಕ್ಷದಿಂದ ಹೊರಹಾಕಿದ್ದಾರೆ. ಆ ಮೂಲಕ  ಭ್ರಷ್ಟಾಚಾರಕ್ಕಾಗಿ ಮೋದಿ ಹೋರಾಡುತ್ತಿದ್ದಾರೆಂಬುದು ಸ್ಪಷ್ಟ’ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ಬಿಜೆಪಿಯವರು ಬಸವಣ್ಣನ ಬಗ್ಗೆ ಮಾತನಾಡುತ್ತಾರೆ, ಬಸವಣ್ಣನ ಪ್ರತಿಮೆ ಮುಂದೆ ಕೈಮುಗಿಯುತ್ತಾರೆ. ಆದರೆ ದೇಶದ ತುಂಬಾ ದ್ವೇಷವನ್ನು ಬಿತ್ತುತ್ತಾರೆ. ಜಾತಿ-ಧರ್ಮಗಳ ನಡುವೆ ಜಗಳ ತಂದಿಡುತ್ತಿದ್ದಾರೆ. ಬಸವಣ್ಣನವರು ಇದರ ವಿರುದ್ಧ ಹೋರಾಟ ಮಾಡಲು ಜೀವನವನ್ನೇ ಕಳೆದರು. ಇವರು ಒಂದೆರಡು ಉದ್ಯಮಿಗಳಿಗೆ ನೆರವು ನೀಡುತ್ತಿದ್ದು, ಸಣ್ಣ ಪುಟ್ಟ ವ್ಯಾಪಾರಸ್ಥರು ಕಣ್ಣೀರು ಹಾಕುತ್ತಿದ್ದರೂ ಅವರ ಬಗ್ಗೆ ಆಲೋಚನೆಯನ್ನೂ ಮಾಡುವುದಿಲ್ಲ ಎಂದು ಅವರು ಟೀಕಿಸಿದರು.

ಬಹಿರಂಗಪಡಿಸಿ: ‘ಯುಪಿಎ ಅವಧಿಯಲ್ಲಿ ಮಾಡಲಾದ ಜಾತಿ ಗಣತಿ ಅಂಕಿ-ಅಂಶಗಳನ್ನು ಪ್ರಧಾನಿ ಬಹಿರಂಗಪಡಿಸುತ್ತಿಲ್ಲ ಯಾಕೆ? ಮೋದಿ ಅವರಿಗೆ ಒಬಿಸಿ ಸಮುದಾಯಗಳ ಬಗ್ಗೆ ಕಾಳಜಿ ಇದ್ದರೆ, ಈ ಸಮುದಾಯಗಳಿಗೆ ರಾಜಕೀಯ, ಆರ್ಥಿಕ ಶಕ್ತಿ ತುಂಬಲಿ. ಒಬಿಸಿ ಸಮುದಾಯಗಳಿಗೆ ಶಕ್ತಿ ತುಂಬಬೇಕಾದರೆ, ಒಬಿಸಿ, ದಲಿತರು, ಆದಿವಾಸಿಗಳು ಎಷ್ಟು ಜನ ಇದ್ದಾರೆ ಎಂದು ತಿಳಿಯಬೇಕು ಎಂದು ಒತ್ತಾಯಿಸಿದರು.  

ಸಾರ್ವಜನಿಕ ಉದ್ದಿಮೆಗಳು ಖಾಸಗಿ ಪಾಲಾಗುತ್ತಿದ್ದು, ಸರಕಾರಿ ಹುದ್ದೆಗಳನ್ನು ಕಡಿತ ಮಾಡುತ್ತಿದ್ದಾರೆ. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸಂಘ ಸಂಸ್ಥೆಗಳನ್ನು ಆರಂಭಿಸಬೇಕಿತ್ತು. ಆದರೆ ಖಾಸಗಿಯವರಿಗೆ ನೀಡುತ್ತಿದ್ದಾರೆ. ಇಂತಹ ಭಾರತ ನಮಗೆ ಬೇಡ. ನಿರುದ್ಯೋಗ ಭಾರತ ಬೇಡ, ಬಡ ಭಾರತ ಬೇಡ, ನಮಗೆ ನ್ಯಾಯ ಬೇಕು. ಬಡವರು, ರೈತರು, ಕರ್ಮಿಕರಿಗಾಗಿ ಸರಕಾರ ಮಾಡುತ್ತೇವೆ’ ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು.

Similar News