ಸರಕಾರಿ ನೌಕರನಿಗೆ ವಿಧಿಸಿದ್ದ ಒಂದು ವರ್ಷದ ಶಿಕ್ಷೆ ಒಂದು ದಿನಕ್ಕೆ ಇಳಿಸಿದ ಹೈಕೋರ್ಟ್
Update: 2023-04-24 22:52 IST
ಬೆಂಗಳೂರು, ಎ.23: ಸರಕಾರಿ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಹಣಕಾಸು ದುರ್ಬಳಕೆ ಮಾಡಿದ್ದ ಆರೋಪದಲ್ಲಿ ಒಂದು ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿದ್ದ 80 ವರ್ಷದ ವೃದ್ಧನ ಶಿಕ್ಷೆಯನ್ನು ಒಂದು ದಿನಕ್ಕೆ ಇಳಿಕೆ ಮಾಡಿ ಹೈಕೋರ್ಟ್ ಆದೇಶ ನೀಡಿದೆ.
ಅಲ್ಲದೇ, ಅರ್ಜಿದಾರರ ವಿರುದ್ಧ ದಾಖಲಾಗಿದ್ದ ಎರಡು ಆರೋಪಗಳಿಗೆ ತಲಾ 10 ಸಾವಿರ ರೂ.ಗಳಂತೆ ದಂಡ ಪಾವತಿಸುವಂತೆ ಆದೇಶಿಸಿದೆ. ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಒಂದು ವರ್ಷಗಳ ಜೈಲು ಶಿಕ್ಷೆಯನ್ನು ಪ್ರಶ್ನಿಸಿ ಮೈಸೂರು ಜಿಲ್ಲೆ ಕೆಆರ್ ನಗರದ ಹನುಮಂತರಾವ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ವಿಚಾರಣಾ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಎತ್ತಿ ಹಿಡಿದಿದೆ.
ಆದರೆ, ಅರ್ಜಿದಾರರಿಗೆ 80 ವರ್ಷ ವಯಸ್ಸಾಗಿದ್ದು, ದುರ್ಬಳಕೆ ಮಾಡಿಕೊಂಡಿರುವ ಮೊತ್ತವನ್ನು ಈಗಾಗಲೇ ಸರಕಾರ ಹಿಂಪಡೆದಿದೆ. ಹೀಗಾಗಿ ದಂಡ ವಿಧಿಸಿ ಶಿಕ್ಷೆಯ ಪ್ರಮಾಣ ಕಡಿಮೆ ಮಾಡಿರುವುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.