×
Ad

ರಾಜ್ಯಕ್ಕೆ ಇಂದು ಪ್ರಿಯಾಂಕಾ ಗಾಂಧಿ

Update: 2023-04-25 00:22 IST

ಬೆಂಗಳೂರು, ಎ. 24: ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ರಾಷ್ಟ್ರದ ನಾಯಕರು ರಾಜ್ಯದ ಕಡೆ ಮುಖ ಮಾಡುತ್ತಿದ್ದು, ಎಲ್ಲ ಪಕ್ಷಗಳಿಂದ ರೋಡ್ ಶೋ, ಸಮಾವೇಶಗಳು ಭರ್ಜರಿಯಾಗಿ ನಡೆಯುತ್ತಿದೆ. ಇನ್ನು ಕಾಂಗ್ರೆಸ್ ಪ್ರಚಾರದ ಭರಾಟೆಯಲ್ಲಿ ತೊಡಗಿದ್ದು, ಪಕ್ಷದ ತಾರಾ ಪ್ರಚಾರಕರಲ್ಲಿ ಒಬ್ಬರಾದ ಪ್ರಿಯಾಂಕಾ ಗಾಂಧಿ ಇಂದು (ಎ.25) ಮೈಸೂರು ಜಿಲ್ಲೆಗೆ ಪ್ರವಾಸ ಕೈಗೊಳ್ಳಲಿದ್ದಾರೆ.

ಈಗಾಗಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸಿ ಬಾಗಲಕೋಟೆ, ವಿಜಾಪುರ ಸೇರಿದಂತೆ ಹಲವೆಡೆ ಪ್ರಚಾರ ನಡೆಸಿದ್ದಾರೆ. ಇದರ ಬೆನ್ನಲ್ಲೇ ಪ್ರಿಯಾಂಕ ಗಾಂಧಿ ಅವರ ರಾಜ್ಯ ಪ್ರವಾಸಕ್ಕೆ ವೇಳಾಪಟ್ಟಿ ನಿಗದಿ ಮಾಡಲಾಗಿದೆ. ಎ25ರಂದು ಮೈಸೂರಿಗೆ ಆಗಮಿಸಲಿರುವ ಪ್ರಿಯಾಂಕ ಗಾಂಧಿ ವಿವಿಧ ಕ್ಷೇತ್ರಗಳಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಎ.25ರ ಮಂಗಳವಾರ ಮಧ್ಯಾಹ್ನ 12ರಿಂದ 1ಗಂಟೆಗೆ ಟಿ.ನರಸೀಪುರ ಕ್ಷೇತ್ರದ ಹೆಳವರ ಹುಂಡಿಯಲ್ಲಿ ನಡೆಯುವ ಸಾರ್ವಜನಿಕರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಹನೂರು ಕ್ಷೇತ್ರಕ್ಕೆ ಹೋಗಲಿದ್ದು, ಗೌರಿಶಂಕರ್ ಕನ್ವೆನ್ಷನ್ ಹಾಲ್‍ನಲ್ಲಿ ಮಧ್ಯಾಹ್ನ 3ರಿಂದ 4 ಗಂಟೆಯ ವರೆಗೆ ಮಹಿಳೆಯರೊಂದಿಗೆ ಸಂವಾದ ನಡೆಸಲಿದ್ದಾರೆ.

ಸಂವಾದದ ಬಳಿಕ ಸಂಜೆ 4.15ಕ್ಕೆ ಕೆ.ಆರ್.ನಗರಕ್ಕೆ ಪ್ರಿಯಾಂಕ ಗಾಂಧಿ ತೆರಳಲಿದ್ದು, ಸಂಜೆ 5.30ರಿಂದ 6.30ರ ವರೆಗೆ ನಡೆಯುವ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ. ನಗರದ ತೋಪಮ್ಮನ ದೇವಸ್ಥಾನದಿಂದ ಸುಮಾರು 2 ಕಿ.ಮೀ ದೂರದ ವರೆಗೆ ಬೃಹತ್ ರೋಡ್ ಶೋ ಮಾಡಲು ಯೋಜನೆ ಮಾಡಿಕೊಳ್ಳಲಾಗಿದೆ ಎಂದು ಪಕ್ಷ ತಿಳಿಸಿದೆ.

Similar News