×
Ad

ರಾಜ್ಯದ ಜನರಿಗೆ ಮೋದಿ ಆಶೀರ್ವಾದ ಬೇಡ; ಬಸವಣ್ಣ, ಕುವೆಂಪು ಆಶೀರ್ವಾದ ಸಾಕು: ಪ್ರಿಯಾಂಕಾ ಗಾಂಧಿ ತಿರುಗೇಟು

Update: 2023-04-25 18:37 IST

ಮೈಸೂರು: 'ಬಿಜೆಪಿಗೆ ಮತಹಾಕದಿದ್ದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಶೀರ್ವಾದ ಸಿಗುವುದಿಲ್ಲ' ಎಂಬ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹೇಳಿಕೆಗೆ ತಿರುಗೇಟು ನೀಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ,  'ಇದು ಬಸವಣ್ಣ, ಕುವೆಂಪು ಅವರು ಹುಟ್ಟಿದ ಸ್ಥಳ. ಇಲ್ಲಿಗೆ ಯಾರ ಆಶೀರ್ವಾದವೂ ಬೇಡ, ಬಸವಣ್ಣ, ಕುವೆಂಪು ಅವರ ಆಶೀರ್ವಾದ  ಸಾಕು' ಎಂದು ಹೇಳಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿರುವ ಅವರು ಮಂಗಳವಾರ ಟಿ.ನರಸೀಪುರದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

'ರಾಜ್ಯಕ್ಕೆ ಆಗಮಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ನಾಯಕರು ನನ್ನ ಸಮಾಧಿ ಕಟ್ಟಲು ಬಯಸುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ. ಒಬ್ಬ ಪ್ರಧಾನಿಯಾಗಿ ಇಂತಹ ಹೇಳಿಕೆ ನೀಡಬಾರದು. ಯಾವ ನಾಯಕರು ನಿಮ್ಮ ಸಾವನ್ನು ಬಯಸಿಲ್ಲ, ನೀವು ಇನ್ನಷ್ಟು ವರ್ಷ ಆರೋಗ್ಯದಿಂದ ಇರಿ' ಎಂದು ಹೇಳಿದರು.

'ಚುನಾವಣಾ ಸಂದರ್ಭದಲ್ಲಿ ಚುನಾವಣೆಗೆ ಸಂಬಂಧಿಸಿದ ವಿಚಾರ ಬಿಟ್ಟು ಬೇರೆ ಚರ್ಚೆಗಳನ್ನು ಪ್ರಧಾನಮಂತ್ರಿಗಳು ಮಾತನಾಡುತ್ತಿದ್ದಾರೆ. ಇದು ಅವರಿಗೆ ಗೌರವ ತರುವುದಿಲ್ಲ' ಎಂದು ಕಿಡಿಕಾರಿದರು.

'ಜನಾದೇಶದ ವಿರುದ್ಧ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ನಡೆಸುತ್ತಿದೆ. ಈ ಚುನಾವಣೆ ಮೋದಿ ವಿರುದ್ಧ ನಡೆಯುತ್ತಿರುವ ಚುನಾವಣೆಯಲ್ಲ, ರಾಜ್ಯದ ಜನರ ಬದುಕಿನ ನಡುವೆ ನಡೆಯುತ್ತಿರುವ ಚುನಾವಣೆ,  ನೀವು ಯಾರ ಮಾತನ್ನು  ಕೇಳದೆ ರಾಜ್ಯವನ್ನು ಲೂಟಿ ಮಾಡುತ್ತಿರುವ   ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ' ಎಂದು ಮನವಿ ಮಾಡಿದರು.

'ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅದಾನಿ, ಅಂಬಾನಿ ಅವರ 6 ಲಕ್ಷ ಕೋಟಿ ಸಾಲ ಮನ್ನಾ ಮಾಡುತ್ತಾರೆ. ಆದರೆ ರೈತರ ಸಾಲ ಮನ್ನಾ ಮಾಡುವುದಿಲ್ಲ. ರಾಜ್ಯದ ಕಬ್ಬು ಬೆಳೆಗಾರರ ಬೆಲೆ ಹೆಚ್ಚಳ ಮಾಡುವುದಿಲ್ಲ' ಎಂದು ಕಿಡಿಕಾರಿದರು.

Similar News