ನಿನಗೆ ಗೂಟದ ಕಾರು ಕೊಡ್ತೀವಿ, ನಾಮಪತ್ರ ವಾಪಸ್ ತಗೋ: ಸೋಮಣ್ಣರದ್ದು ಎನ್ನಲಾದ ಆಡಿಯೊ ವೈರಲ್
ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನಸ್ವಾಮಿ ಅಲಿಯಾಸ್ ಆಲೂರು ಮಲ್ಲು ಅವರಿಗೆ ನಾಮಪತ್ರ ವಾಪಸ್ ಪಡೆಯುವಂತೆ ಹೇಳುವ ಬಿಜೆಪಿ ಅಭ್ಯರ್ಥಿ,ವಸತಿ ಸಚಿವ ವಿ.ಸೋಮಣ್ಣರದ್ದು ಎನ್ನಲಾದ ಕರೆ ಮಾಡಿ ಆಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
'ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ನಿನಗೆ ಗೂಟದ ಕಾರು ಕೋಡ್ತೀವಿ. ಮೊದಲು ವಾಪಸ್ ತಗೊ' ಎಂದು ಸೋಮಣ್ಣ ಹೇಳುವುದು ಆಡಿಯೊದಲ್ಲಿದೆ.
ಇನ್ನು ಮುಂದುವರಿದು, 'ಯಾರದ್ದೋ ಮಾತು ಕೇಳಿ ಚುನಾವಣೆಗೆ ನಿಂತಿದ್ದೀಯಾ? ಮೊದಲು ತೆಗಿ, ಆಮೇಲೆ ಎಲ್ಲ ಮಾತನಾಡೋಣ. ನಿನ್ನ ಬದುಕಿಗೆ ಏನು ಬೇಕೋ ಅದು ಮಾಡ್ತೇನೆ. ನಿನ್ನ ಹಿತ ಕಾಪಾಡೋದು ನನ್ ಜವಾಬ್ದಾರಿ... ಉಪ್ಪಾರ ದೇವರ ಮುಂದೆ ನಿಂತಿದ್ದೀನಿ... ತಕೋ ಮೊದಲು, ಯಾರನ್ನೂ ಕೇಳೋದಕ್ಕೆ ಹೋಗಬೇಡ. ಜಿ.ಟಿ. ದೇವೇಗೌಡ ನಾನು ಫ್ರೆಂಡ್ಸ್... ನೀನು ವಾಪಾಸ್ ತಕೋ...' ಅಂತ ಹೇಳುವುದು ಆಡಿಯೋದಲ್ಲಿ ದಾಖಲಾಗಿದೆ.
'ನಾಮಪತ್ರ ಹಿಂಪಡೆಯುವಂತೆ ಸಚಿವ ಸೋಮಣ್ಣ ಅವರೇ ಕರೆ ಮಾಡಿ ಆಮಿಷ ಒಡ್ಡಿದ್ದರು. ನನಗೆ ಕ್ಷೇತ್ರದಲ್ಲಿ ಒಳ್ಳೆಯ ಬೆಂಬಲ ಇದೆ, ನಾಮಪತ್ರ ವಾಪಸ್ ಪಡೆದಿಲ್ಲ. ನಾನು ಇನ್ನೂ ಸ್ಪರ್ಧಾ ಕಣದಲ್ಲಿದ್ದೇನೆ' ಎಂದು ಜೆಡಿಎಸ್ ಅಭ್ಯರ್ಥಿ ಆಲೂರು ಮಲ್ಲು 'ವಾರ್ತಾಭಾರತಿ'ಗೆ ತಿಳಿಸಿದರು.