×
Ad

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸಿಎಂ ಬೊಮ್ಮಾಯಿ- ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖಾಮುಖಿ: ಮುಂದೇನಾಯ್ತು?

Update: 2023-04-26 12:54 IST

ಬೆಳಗಾವಿ: ರಾಜ್ಯದಲ್ಲಿ ಮತದಾನ ದಿನ ಹತ್ತಿರವಾಗುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳ ಘಟಾನುಘಟಿಗಳು ಪ್ರಚಾರದಲ್ಲಿ ತೊಡಗಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪರಸ್ಪರ ಮುಖಾಮುಖಿಯಾಗಿ ಕೈಕುಲುಕಿ ಕುಶಲೋಪರಿ ವಿಚಾರಿಸಿದ ಘಟನೆ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣ ನಡೆಯಿತು.

ಬುಧವಾರ ಉಭಯ ನಾಯಕರು ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ಭೇಟಿಯಾದರು. ಈ ವೇಳೆ ಬಸವರಾಜ ಬೊಮ್ಮಾಯಿ, ಕೈ ಕುಲುಕಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನಗುತ್ತಲೇ ಅತ್ಯಂತ ಸಲುಗೆಯಿಂದ ಬೊಮ್ಮಾಯಿ ಬೆನ್ನು ತಟ್ಟಿದರು. ನಂತರ ಇಬ್ಬರೂ ಒಟ್ಟಿಗೆ ಸ್ವಲ್ಪ ದೂರು ಸಾಗಿದ್ದು ನಡೆಯಿತು.

ಇಬ್ಬರು ನಾಯಮರು ರಾಜಕೀಯ ಹಾಗೂ ಸೈದ್ಧಾಂತಿಕ ಭಿನ್ನಾಭಿಪ್ರಾಯ ಬದಿಗಿಟ್ಟು ‘ಹೇಗಿದ್ದೀರಿ ಸಾರ್..’ ಎಂದು ಕುಶಲೋಪರಿ ವಿಚಾರಿಸಿದರು. ಬಸವರಾಜ ಬೊಮ್ಮಾಯಿ ಅಲ್ಲಿಂದ ಯಮಕನಮರಡಿ ಕ್ಷೇತ್ರಕ್ಕೆ ಪ್ರಚಾರಕ್ಕೆ ತೆರಳಿದರು. ಇತ್ತ ಸಿದ್ದರಾಮಯ್ಯ ಅವರು ಮಾಜಿ ಸಚಿವ ಡಿ.ಬಿ.ಇನಾಮದಾರ್ ಅಂತಿಮ ನಮನ ಸಲ್ಲಿಸಿ ಬೆಂಗಳೂರಿಗೆ ಹಿಂದಿರುಗಿದರು.

ರಾಜಕೀಯ ಪಕ್ಷಗಳ ಪರವಾಗಿ ತಾರಾ ಪ್ರಚಾರಕರೂ ಆಗಿರುವ ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಎಐಸಿಸಿ ಮುಖಂಡ ರಾಹುಲ್ ಗಾಂಧಿ, ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇನ್ನಿತರರು ಪ್ರಚಾರದ ಅಖಾಡಕ್ಕಿಳಿದಿದ್ದು, ಚುನಾವಣಾ ರಣಕಣ ಮತ್ತಷ್ಟು ರಂಗೇರಲಿದೆ.

ಕರ್ನಾಟಕ ವಿಧಾನಸಭೆಗೆ  224 ಸ್ಥಾನಗಳಿಗೆ ಮೇ 10 ರಂದು ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ. ಅದೇ ದಿನ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆಗಳಿವೆ. 

Similar News