ವಿಧಾನಸಭಾ ಚುನಾವಣೆ: ಪತಿಯರ ಪರ ಪ್ರಚಾರಕ್ಕಿಳಿದ ಮಡದಿಯರು...!
ಬೆಂಗಳೂರು, ಎ. 26: ರಾಜ್ಯದಲ್ಲಿ ಬೇಸಿಗೆ ಬಿರು ಬಿಸಿಲಿನ ನಡುವೆಯೇ ವಿಧಾನಸಭೆ ಚುನಾವಣೆಯ ಕಾವು ಏರುತ್ತಿದೆ. ಈ ಮಧ್ಯೆಯೇ ರಾಮನಗರ ಜಿಲ್ಲೆಯಲ್ಲಿ ಅಖಾಡದಲ್ಲಿರುವ ಪತಿಯರ ಪರವಾಗಿ ಅವರ ಮಡದಿಯರು ಚುನಾವಣಾ ಪ್ರಚಾರದಲ್ಲಿ ತೊಡಗಿರುವುದು ವಿಶೇಷವಾಗಿದೆ.
ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಪರವಾಗಿ ಶಾಸಕಿ ಅನಿತಾ ಕುಮಾರಸ್ವಾಮಿ, ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಅವರ ಪತ್ನಿ ಶೀಲಾ ಯೋಗೇಶ್ವರ್ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ಅತ್ತ ಕನಕಪುರ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪರವಾಗಿ ಪತ್ನಿ ಉಷಾ ಮತಯಾಚನೆ ಮಾಡುತ್ತಿದ್ದರೆ, ಮಾಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಬಾಲಕೃಷ್ಣ ಪರ ಅವರ ಮಡದಿ ರಾಧಾ ಬಾಲಕೃಷ್ಣ ಪ್ರಚಾರದ ಅಖಾಡಕ್ಕಿಳಿದಿದ್ದಾರೆ. ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ ಪರವಾಗಿ ಲಕ್ಷ್ಮಿ ಮನೆ-ಮನೆಗೆ ತೆರಳಿ ಮತದಾರರ ಮನವೊಲಿಕೆಯಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ: ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸಿಎಂ ಬೊಮ್ಮಾಯಿ- ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖಾಮುಖಿ: ಮುಂದೇನಾಯ್ತು?
ಮೇ 10ಕ್ಕೆ ಮತದಾನ ನಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ಇನ್ನೂ ಎರಡು ವಾರ ಬಾಕಿ ಉಳಿದಿದೆ. ಹೀಗಾಗಿ ಮತದಾರರ ಮನೆ-ಮನ ಗೆಲ್ಲಲು ಘಟಾನುಘಟಿ ಅಭ್ಯರ್ಥಿಗಳ ಜೊತೆಗೆ ಅವರ ಪತ್ನಿಯರೂ ಮತಯಾಚನೆಯಲ್ಲಿ ತೊಡಗಿದ್ದಾರೆ. ಪತಿಯರ ಪಾಲಿಗೆ ಪತ್ನಿಯರೇ ‘ತಾರಾ ಪ್ರಚಾರಕ’ರಾಗಿ ಮತಯಾಚನೆ ನಡೆಸುತ್ತಿರುವುದು ವಿಶೇಷವಾಗಿದೆ.