ಉತ್ತರ ಪ್ರದೇಶದಲ್ಲಿ ಕಳೆದ 6 ವರ್ಷಗಳಲ್ಲಿ ಯಾವುದೇ ಗಲಭೆಗಳು ನಡೆದಿಲ್ಲ: ಮಂಡ್ಯದಲ್ಲಿ ಆದಿತ್ಯನಾಥ್
''ರಾಜ್ಯದ ಪ್ರಗತಿಗೆ ಬಿಜೆಪಿ ಬೆಂಬಲಿಸಿ''
ಮಂಡ್ಯ, ಎ.26 : ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಬುಧವಾರ ಮಂಡ್ಯ ನಗರದಲ್ಲಿ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಪರ ಮತಯಾಚಿಸಿದರು.
ಮೈಸೂರಿನಿಂದ ಮಂಡ್ಯದ ಪಿಇಎಸ್ ಕ್ರೀಡಾಂಗಣಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಅವರು, ಅಲ್ಲಿಂದ ಕಾರಿನಲ್ಲಿ ನಗರದ ಸಂಜಯ್ ವೃತ್ತಕ್ಕೆ ಬಂದು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸಿಲ್ವರ್ ಜ್ಯೂಬಿಲಿ ಪಾರ್ಕಿನವರೆಗೆ ಪ್ರಚಾರ ವಾಹನದಲ್ಲಿ ರೋಡ್ ಶೋ ನಡೆಸಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ಆಯೋಜಿಸಿದ್ದ ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 'ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರದಿಂದ ಭಾರತ ವಿಶ್ವದಲ್ಲಿ ಗುರುತಿಸಿಕೊಳ್ಳುವಂತಾಗಿದೆ' ಎಂದರು.
'ಡಬಲ್ ಇಂಜಿನ್ ಸರಕಾರದಿಂದಾಗಿ ಉತ್ತರ ಪ್ರದೇಶದಲ್ಲಿ ಕಳೆದ ಆರು ವರ್ಷಗಳಲ್ಲಿ ಯಾವುದೇ ಗಲಭೆಗಳು ನಡೆದಿಲ್ಲ. ಈ ಡಬಲ್ ಇಂಜಿನ್ ಸರಕಾರದಿಂದ ಉತ್ತರ ಪ್ರದೇಶದಲ್ಲಿ ಆಗಿರುವ ಅಭಿವೃದ್ಧಿಯಂತೆ ಕರ್ನಾಟಕದಲ್ಲೂ ಆಗಿದೆ. ಮತ್ತಷ್ಟು ಅಭಿವೃದ್ಧಿಯನ್ನು ಕೈಗೊಳ್ಳಲು ಈ ಬಾರಿಯೂ ಬಿಜೆಪಿಯನ್ನು ರಾಜ್ಯದ ಜನತೆ ಅತ್ಯಂತ ಬಹುಮತದಿಂದ ಗೆಲ್ಲಿಸಬೇಕು' ಎಂದು ಮನವಿ ಮಾಡಿದರು.
ಉತ್ತರ ಪ್ರದೇಶ ಮತ್ತು ಕರ್ನಾಟಕ ರಾಜ್ಯದ ನಡುವೆ ತೇತ್ರಾಯುಗದಿಂದಲೂ ಅವಿನಾಭಾವ ಸಂಬಂಧವಿದೆ. ಏಕೆಂದರೆ, ಶ್ರೀರಾಮನ ಜನ್ಮಸ್ಥಳ ಉತ್ತರ ಪ್ರದೇಶವಾದರೆ, ಅವನ ಭಂಟ ಆಂಜನೇಯ ಕರ್ನಾಟಕದಲ್ಲಿ ಜನಿಸಿದವರು. ಇದಲ್ಲದೆ ನಾಥ ಪರಂಪರೆಯ ಆದಿಚುಂಚನಗಿರಿಗೂ ಉತ್ತರ ಪ್ರದೇಶಕ್ಕೂ ಸಂಬಂಧವಿದೆ ಎಂದು ಅವರು ಹೇಳಿದರು.
ಭಾರತವನ್ನು 1947 ರಲ್ಲಿ ಧಾರ್ಮಿಕ ಆಧಾರದ ಮೇಲೆ ವಿಭಜಿಸಲಾಯಿತು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಾವು ಮತ್ತೊಂದು ವಿಭಜನೆಗೆ ಅವಕಾಶ ಕೊಡುವುದಿಲ್ಲ. ಹಾಗೆಯೇ ಧರ್ಮಾಧಾರಿತ ಮೀಸಲಾಯಿತಿಯು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದರು.
ಮಂಡ್ಯದ ಅಭಿವೃದ್ಧಿಗೆ ಈ ಬಾರಿ ಏಳು ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಜನತೆಯಲ್ಲಿ ಅವರು ಮನವಿ ಮಾಡಿದರು.