ಶೆಟ್ಟರ್ ಸೋಲಿಸುವ ಜವಾಬ್ದಾರಿ ನನ್ನದು, ಸವದಿ ಸೋಲಿಸುವ ಹೊಣೆ ನಿಮ್ಮದು: ಅಥಣಿಯಲ್ಲಿ ಯಡಿಯೂರಪ್ಪ

Update: 2023-04-26 15:51 GMT

ಬೆಳಗಾವಿ, ಎ. 26: ‘ಜಗದೀಶ್ ಶೆಟ್ಟರ್ ಸೋಲಿಸುವ ಜವಾಬ್ದಾರಿ ನಾನು ತೆಗೆದುಕೊಂಡಿದ್ದೀನಿ. ಲಕ್ಷ್ಮಣ ಸವದಿ ಮಣಿಸುವ ಹೊಣೆಗಾರಿಕೆಯನ್ನು ಅಥಣಿ ಕ್ಷೇತ್ರದ ಜನತೆ ನೀವು ವಹಿಸಿಕೊಳ್ಳ್ಳಬೇಕು. ಸವದಿ ನಮಗೆ ಮೊಸ ಮಾಡಿ ಪಕ್ಷ ತ್ಯಜಿಸಿ ಹೋಗಿದ್ದಾರೆ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ಜಿಲ್ಲೆಯ ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಹಳ್ಳಿ ಪರವಾಗಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷವು ಮುಳುಗುತ್ತಿರುವ ಹಡಗು. ಇಡೀ ದೇಶದಲ್ಲಿ ಆ ಪಕ್ಷ ನೆಲಸಮವಾಗಿದ್ದು, ಎಐಸಿಸಿ ಮುಖಂಡ ರಾಹುಲ್ ಗಾಂದಿ,ü ಪ್ರಧಾನಿ ಮೋದಿ, ಅಮಿತ್ ಶಾ ಮುಂದೆ ಏನೇನೂ ಅಲ್ಲ’ ಎಂದು ಟೀಕಿಸಿದರು.

ಬಿಜೆಪಿ ಗೆಲುವು: ‘ಸುಡು ಬಿಸಿಲಿನಲ್ಲಿಯೂ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದನ್ನು ನೋಡಿದರೆ ಲಕ್ಷ್ಮಣ ಸವದಿ ಮನೆಗೆ ಹೋಗುವುದು ನಿಶ್ಚಿತ. ನಾನು ಸಿಎಂ ಆಗಿದ್ದಾಗ ಅಥಣಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿದ್ದೇನೆ. ಕುಮಟಳ್ಳಿ 25 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲಿಸಬೇಕು. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು’ ಎಂದು ಬಿಎಸ್‍ವೈ ಮನವಿ ಮಾಡಿದರು.

ರಾಜೀನಾಮೆ ನೀಡುತ್ತೇವೆ: ‘ಮಹೇಶ್ ಕುಮಟಳ್ಳಿ ಮೃದುತನ ಬಿಡಬೇಕು. ಬಸವನಗೌಡ ಪಾಟೀಲ್ ಯತ್ನಾಳ್ ಅವರಂತೆ ನೀವು ಬದಲಾವಣೆ ಆಗಬೇಕು. ಈ ಚುನಾವಣೆ ಮುಗಿದ ಮೇಲೆ ಡಿಸಿಸಿ ಬ್ಯಾಂಕಿಗೆ ರಾಜೀನಾಮೆ ನೀಡುತ್ತೇವೆ. ಸಹಕಾರ ಸಂಘದಲ್ಲಿ ಸವದಿ ದಬ್ಬಾಳಿಕೆ ನಿಲ್ಲಿಸಲು ಮತ್ತೊಮ್ಮೆ ಚುನಾವಣೆ ಎದುರಿಸುತ್ತೇವೆ’ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

‘ಅಥಣಿ ಕ್ಷೇತ್ರದಲ್ಲಿ 2,700 ಕೋಟಿ ರೂ.ಅನುದಾನ ತರಲಾಗಿದೆ. ಸ್ಥಳೀಯ ಶಾಸಕರನ್ನು ಬಿಟ್ಟು ಭೂಮಿ ಪೂಜೆ ಮಾಡುವ ಹೊಸ ವಿಧಾನ ಅಥಣಿಯಲ್ಲಿ ಪ್ರಾರಂಭವಾಗಿತ್ತು. ಲಿಂಗಾಯತ ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ವಿರೋಧ ಮಾಡಿದವರು ಹೊರಗೆ ಹೋಗಿದ್ದಾರೆ. ಮುಸ್ಲಿಮ್ ಸಮುದಾಯ ಮೀಸಲಾತಿಯಲ್ಲಿ ಬದಲಾವಣೆ ಮಾಡಲಾಗಿದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.

Similar News