×
Ad

'ಇಂದಿರಾ ಗಾಂಧಿಗೆ ಬೆಂಬಲ ನೀಡಿದಂತೆ ರಾಹುಲ್‌ಗೂ ನೀಡಿ': ಚಿಕ್ಕಮಗಳೂರು ಜನರೊಂದಿಗಿನ ಒಡನಾಟ ಸ್ಮರಿಸಿದ ಪ್ರಿಯಾಂಕಾ

''ಹೋದಲ್ಲೆಲ್ಲ ನನ್ನನ್ನು ಜನ ಗುರುತಿಸುತ್ತಿದ್ದಾರೆ ಎಂದರೆ ಅದಕ್ಕೆ ನನ್ನ ಅಜ್ಜಿಯೇ ಕಾರಣ''

Update: 2023-04-26 20:16 IST

ಚಿಕ್ಕಮಗಳೂರು: 'ಶಾರದಾಂಬೆ ದೇಗುಲಕ್ಕೆ ಹೋಗಿದ್ದ ವೇಳೆ ಶಂಕರಾಚಾರ್ಯ ಮಠದ ಗುರುಗಳನ್ನು ಭೇಟಿ ಮಾಡಿದ್ದೆ. ಅವರು ನಿಮ್ಮ ಅಜ್ಜಿ ಇಂದಿರಾಗಾಂಧಿ, ರಾಜೀವ್‍ಗಾಂಧಿ ಮಠಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿ ಆಶೀರ್ವಾದ ಮಾಡಿದರು' ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. 

ಬುಧವಾರ ಜಿಲ್ಲೆಯ ಶೃಂಗೇರಿ ವಿಧಾನಸಭೆ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ಅವರ ಪರ ಬಾಳೆಹೊನ್ನೂರು ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಡಿದ ಅವರು, 'ಇಂದಿಗೂ ನನ್ನ ಪರಿವಾರ ಸಸಂಘರ್ಷವನ್ನು ಎದುರಿಸುತ್ತಿದೆ. ಇಂದಿರಾಗಾಂಧಿ ಇಲ್ಲಿಗೆ ಬಂದಿದ್ದ ವೇಳೆಯೂ ಸಂಘರ್ಷ ಎದುರಿಸುತ್ತಿದ್ದರು. ಈಗಲೂ ಸಂಘರ್ಷವನ್ನು ನನ್ನ ಪರಿವಾರ ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ನಾನು ಇಲ್ಲಿಗೆ ಬಂದಿರುವುದು ನನ್ನ ಪುಣ್ಯ. ಅಜ್ಜಿ ಬಂದಿದ್ದ ಸಂದರ್ಭದಲ್ಲಿದ್ದ ವಾತಾವಾರಣ ನಾನೂ ಬಂದಾಗಲೂ ಇದೆ. ಇಂದಿರಾಗಾಂಧಿ ಅವರು ಸಂಘರ್ಷದ ಎದುರಿಸುತ್ತಿದ್ದ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಜನರ ಅವರೊಂದಿಗೆ ನಿಂತು ಆಶೀರ್ವಾದ ಮಾಡಿದ್ದರು. ಇದನ್ನು ನಾನು, ನನ್ನ ಕುಟುಂಬ ಎಂದಿಗೂ ಮರೆಯುವುದಿಲ್ಲ' ಎಂದು ಚಿಕ್ಕಮಗಳೂರು ಜಿಲ್ಲೆಯ ಜನರೊಂದಿಗಿನ ಒಡನಾಟವನ್ನು ಪ್ರಿಯಾಂಕಾ ಗಾಂಧಿ ಸ್ಮರಿಸಿದರು.

'ಅಂದು ಇಂದಿರಾ ಗಾಂಧಿ ವಿರುದ್ಧವೂ ಕೇಸ್ ಹಾಕಲಾಗಿತ್ತು ಮತ್ತು ಸಂಸತ್‍ನಿಂದ ಹೊರಹಾಕಲಾಗಿತ್ತು. ಆಗ ಇಲ್ಲಿನ ಜನ ಮತ್ತೆ ಸಂಸತ್‍ಗೆ ನನ್ನ ಅಜ್ಜಿಯನ್ನು ಕಳುಹಿಸಿಕೊಟ್ಟು, ಅವರಲ್ಲಿ ಆತ್ಮವಿಶ್ವಾಸ  ನೀಡಿದ್ದರು. ಇಂದು ಅವರ ಮೊಮ್ಮಗ ರಾಹುಲ್‍ಗಾಂಧಿ ವಿರುದ್ಧ ಸುಳ್ಳು ಕೇಸ್ ಹಾಕಿ ಸಂಸತ್‍ನಿಂದ ಹೊರಹಾಕಲಾಗಿದೆ. ಆದರೆ ಈ ದೇಶದ ಜನತೆ ರಾಹುಲ್‍ಗಾಂಧಿ ಹಾಗೂ ಅವರ ಕುಟುಂಬದೊಂದಿಗೆ ಸದಾ ಇರುತ್ತೆ ಎಂಬ ವಿಶ್ವಾಸವಿದೆ. ನಾವು ಸತ್ಯಕ್ಕಾಗಿ ಹೋರಾಡುತ್ತಿರುವುದರಿಂದ ದೇವರ ಮತ್ತು ಜನರ ಆಶೀರ್ವಾದ ಸಿಕ್ಕೇ ಸಿಗುತ್ತದೆ. ಸತ್ಯಕ್ಕೆ ತಡವಾದರೂ ಜಯ ಆಗಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

'ಪ್ರಿಯಾಂಕಾ ಗಾಂಧಿಯನ್ನು ಜನ ಇಂದಿಗೂ ಹೋದಲ್ಲೆಲ್ಲ ಗುರುತಿಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ನನ್ನ ಅಜ್ಜಿ ಇಂದಿರಾ. ಅವರ ಮೇಲೆ ದೇಶದ ಜನರು ಇಟ್ಟಿದ್ದ ಭರವಸೆ, ವಿಶ್ವಾಸವನ್ನು ಉಳಿಸಿಕೊಂಡ ಪರಿಣಾಮ ಜನ ನನ್ನನ್ನು ಇಂದಿಗೂ ಗುರುತಿಸುತ್ತಿದ್ದಾರೆ. ಇಂದಿರಾಗಾಂಧಿ ದೇಶದ ಜನರಿಗೆ ಎಂದಿಗೂ ವಿಶ್ವಾಸದ್ರೋಹ ಮಾಡಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಆದರೆ ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಕಳೆದ ಮೂರೂವರೆ ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಪ್ರತೀ ವಿಷಯದಲ್ಲೂ ಜನರಿಗೆ ವಿಶ್ವಾಸದ್ರೋಹ ಮಾಡಿಕೊಂಡು ಬಂದಿದೆ. ಪ್ರತೀ ಹಂತದಲ್ಲೂ ಬಿಜೆಪಿ ಸರಕಾರ ಜನರಿಗೆ ಮೋಸ ಮಾಡುತ್ತಿದೆ. ಜನರು ಬಿಜೆಪಿ ಸರಕಾರದ ಮೇಲೆ ಇಟ್ಟಿದ್ದ ವಿಶ್ವಾಸಕ್ಕೆ ದ್ರೋಹವಾಗಿದೆ' ಎಂದರು.

Similar News