ರಾಜ್ಯದಲ್ಲಿ 5.31 ಕೋಟಿ ಮತದಾರರು, ಎ.29ರಿಂದಲೇ ಮನೆಯಿಂದ ಮತದಾನ: ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ

'ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ 673 FIR'

Update: 2023-04-26 15:50 GMT

ಬೆಂಗಳೂರು, ಎ. 26: ರಾಜ್ಯದಲ್ಲಿ ಒಟ್ಟು 5,31,33,054 ಮತದಾರರು ಇದ್ದು, ಈ ಪೈಕಿ 2,66,82,156 ಪುರುಷ, 2,63,9,483 ಮಹಿಳೆ, 4,927 ಇತರ ಸಾಮಾನ್ಯ ಮತದಾರರು ಹಾಗೂ 47,488 ಸೇವಾ ಮತದಾರರಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.

ಬುಧವಾರ ನಗರದ ಶೇಷಾದ್ರಿ ರಸ್ತೆಯಲ್ಲಿರುವ ನಿರ್ವಾಚನ ಸದನ(ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ)ದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪುರುಷ ಸೇವಾ ಮತದಾರರು 45,897, ಮಹಿಳಾ ಸೇವಾ ಮತದಾರರು 1,591 ಮಂದಿ ಇದ್ದಾರೆ. ಯುವ ಮತದಾರರು 11,71,558, ವಿಶೇಷ ಚೇತನ ಮತದಾರರು 5,71,281 ಮಂದಿ ಇದ್ದಾರೆ ಎಂದರು.

80 ವರ್ಷಕ್ಕೂ ಅಧಿಕ ವಯೋಮಾನದ 12,15,920 ಮತದಾರರು, ಅನಿವಾಸಿ ಭಾರತೀಯ ಮತದಾರರು 3,048 ಮಂದಿ ಇದ್ದಾರೆ. ಪ್ರಸಕ್ತ ಸಾರ್ವತ್ರಿಕ ಚುನಾವಣೆಗೆ ಮತದಾರರ ಭಾವಚಿತ್ರ ಪಟ್ಟಿಯನ್ನು ಬಳಸಲಾಗುವುದು. ಮತದಾರರ ಭಾವಚಿತ್ರ ಪಟ್ಟಿಯ ಸಿದ್ಧತಾ ಕಾರ್ಯವು ಶೇ.100ರಷ್ಟು ಆಗಿದೆ. ರಾಜ್ಯದಲ್ಲಿ ಮತದಾರರ ಗುರುತಿನ ಚೀಟಿ(ಇಪಿಕ್ ಕಾರ್ಡ್) ವಿತರಣೆ ಕಾರ್ಯವು ಶೇ.100ರಷ್ಟು ಆಗಿದೆ. 2022ರ ಸೆ.1 ರಿಂದ ಎ.25ರವರೆಗೆ 37,94,517 ಮಂದಿ ಅರ್ಹ ಮತದಾರರಿಗೆ ಇಪಿಕ್ ಕಾರ್ಡ್ ವಿತರಣೆ ಮಾಡಲಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಒಟ್ಟು 58,545 ಮತದಾನ ಕೇಂದ್ರಗಳಿದ್ದು, ಕಳೆದ ವಿಧಾನಸಭಾ ಚುನಾಣೆಗೆ ಹೋಲಿಸಿದಲ್ಲಿ 263 ಹೆಚ್ಚುವರಿ ಮತದಾನ ಕೇಂದ್ರಗಳು ಸ್ಥಾಪಿಸಲಾಗಿದೆ. 1,15,709 ಬ್ಯಾಲೆಟ್ ಯೂನಿಟ್, 82,543 ಸಿಯು ಹಾಗೂ 89,379 ವಿವಿಪ್ಯಾಟ್‍ಗಳು ಸುಸ್ಥಿತಿಯಲ್ಲಿವೆ ಎಂದು ಮನೋಜ್ ಕುಮಾರ್ ಮೀನಾ ತಿಳಿಸಿದರು.

ಅಂಚೆ ಮತಪತ್ರ: ಮನೆಯಿಂದಲೆ ಮತದಾನ ಮಾಡಲು 224 ವಿಧಾನಸಭಾ ಕ್ಷೇತ್ರಗಳಲ್ಲಿ 80 ವರ್ಷಕ್ಕೂ ಅಧಿಕ ವಯೋಮಾನದ 80,250, ವಿಕಲಚೇತನ 19,279, ಅಗತ್ಯ ಸೇವೆಯಲ್ಲಿರುವ 13,771, ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ 1,78,523 ಮಂದಿ ತಮ್ಮ ಹಕ್ಕು ಚಲಾಯಿಸಲು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಎ.29ರಿಂದ ಮೇ6ರ ವರೆಗೆ ಮನೆಯಿಂದ ಮತದಾನ: ಎ.29 ರಿಂದ ಮೇ 6ರ ವರೆಗೆ ಮನೆಯಿಂದ ಮತದಾನ ಮಾಡಲು ನೋಂದಣಿ ಮಾಡಿಸಿಕೊಂಡಿರುವ ಮತದಾರರ ಮನೆಗೆ ತೆರಳಿ ಅಂಚೆ ಮತಪತ್ರದ ಮೂಲಕ ಗೌಪ್ಯವಾಗಿ ಮತದಾನ ಮಾಡಿಸಲಾಗುವುದು. ಈ ಎಲ್ಲ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗುವುದು. ಮತದಾರರ ಮನೆಗೆ ಹೋಗುವ ಮುನ್ನ ಅವರಿಗೆ ದಿನಾಂಕ, ಸಮಯದ ಬಗ್ಗೆ ಮುಂಚಿತವಾಗಿಯೆ ಮಾಹಿತಿ ನೀಡುತ್ತೇವೆ ಎಂದು ಮನೋಜ್ ಕುಮಾರ್ ಮೀನಾ ತಿಳಿಸಿದರು.

ಒಂದು ವೇಳೆ ನಾವು ಮೊದಲ ಬಾರಿಗೆ ಅಂತಹ ಮತದಾರರ ಮನೆಗೆ ಹೋದಾಗ ಅವರು ಸಿಗದೆ ಇದ್ದರೆ, ಮತ್ತೊಂದು ಬಾರಿಯೂ ಹೋಗುತ್ತೇವೆ. ಆಗಲೂ ಸಿಗದಿದ್ದರೆ ಮತದಾನಕ್ಕೆ ಅವಕಾಶ ಇರುವುದಿಲ್ಲ. ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಯಾರು ನೋಂದಣಿ ಮಾಡಿಸಿಕೊಂಡಿರುವವರಿಗೆ ನೇರವಾಗಿ ಮತಕೇಂದ್ರಗಳಿಗೆ ಬಂದು ಮತದಾನ ಮಾಡಲು ಅವಕಾಶ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

673 ಎಫ್‍ಐಆರ್ ದಾಖಲು: ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಈಗಾಗಲೆ 673 ಎಫ್‍ಐಆರ್‍ಗಳನ್ನು ದಾಖಲು ಮಾಡಲಾಗಿದೆ. ನಗದು, ಮದ್ಯ, ಮಾದಕ ದ್ರವ್ಯ, ಬೆಲೆಬಾಳುವ ಲೋಹ ಮತ್ತು ಉಡುಗೊರೆ ವಸ್ತುಗಳನ್ನು ವಶಪಡಿಸಿಕೊಂಡಿರುವ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು 2,036 ಎಫ್‍ಐಆರ್‍ಗಳನ್ನು ದಾಖಲು ಮಾಡಿದ್ದಾರೆ. ಈವರೆಗೆ ಸುಮಾರು 265 ಕೋಟಿ ರೂ.ಮೌಲ್ಯದ ಸೊತ್ತನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮನೋಜ್ ಕುಮಾರ್ ಮಿನಾ ಹೇಳಿದರು.

Similar News