×
Ad

ಮಂಡ್ಯ | ನೀರು ಹಂಚಿಕೆ ವಿಚಾರಕ್ಕೆ ಜಗಳ; ತಾಯಿ, ಮಗನ ಕೊಲೆಯಲ್ಲಿ ಅಂತ್ಯ

Update: 2023-04-26 22:20 IST

ಮಂಡ್ಯ, ಎ.26: ಪಂಪ್‍ಸೆಟ್‍ನಿಂದ ನೀರು ಹಂಚಿಕೊಳ್ಳುವ ವಿಚಾರದಲ್ಲಿ ಅತ್ತಿಗೆ ಮೈದುನನ ನಡುವೆ ನಡೆದ ಜಗಳ ಇಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ  ಘಟನೆ ಪಾಂಡವಪುರ ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ವರದಿಯಾಗಿದೆ.

ಘಟನೆಯಲ್ಲಿ 45 ವರ್ಷದ ಶಾಂತಮ್ಮ ಮತ್ತು ಆಕೆಯ ಮಗ 17 ವರ್ಷದ ಯಶ್ವಂತ್ ಕೊಲೆಗೀಡಾಗಿದ್ದಾರೆ. ಕೊಲೆ ಮಾಡಿದ ಸತೀಶ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

ಘಟನೆ ವಿವರ: ಸತೀಶ ಮತ್ತು ಶಂಕರೇಗೌಡ ಗ್ರಾಮದ ಮಾಯೀಗೌಡರ ಮಕ್ಕಳು. ಇಬ್ಬರ ಜಮೀನು ಹೆಗ್ಗಡಹಳ್ಳಿ ಗ್ರಾಮದಲ್ಲಿ ಅಕ್ಕ ಪಕ್ಕದಲ್ಲಿದೆ. ಜಮೀನಿನಲ್ಲಿರುವ ಒಂದೇ ಒಂದು ಪಂಪ್‍ಸೆಟ್‍ನಿಂದ ನೀರು ಹಾಯಿಸಿಕೊಳ್ಳುವಲ್ಲಿ ಸತೀಶ ಮತ್ತು ತನ್ನ 
ಅತ್ತಿಗೆ ಶಂಕರೇಗೌಡನ ಹೆಂಡತಿ ಶಾಂತಮ್ಮ ಜತೆ ಜಗಳ ಪ್ರಾರಂಭವಾಗಿ ಅದು ವಿಕೋಪಕ್ಕೆ ತಿರುಗಿದೆ.

ಸತೀಶ್ ತನ್ನ ಕೈಯಲ್ಲಿದ್ದ ದೊಣ್ಣೆ ಮತ್ತು ಕುಡಗೋಲಿನಿಂದ ಅತ್ತಿಗೆಯನ್ನು ಪಂಪ್‍ಸೆಟ್ ಮನೆಯಲ್ಲಿಯೇ ಹತ್ಯೆ ಮಾಡಿದ್ದಾನೆ. ಈ ವೇಳೆ ತಾಯಿಯನ್ನು ಬಿಡಿಸಲು ಬಂದ ತನ್ನ  ಅಣ್ಣನ ಮಗ ಯಶ್ವಂತ್ ಮೇಲೂ ಸತೀಶ ಹಲ್ಲೆ ನಡೆಸಿ ಹತ್ಯೆ ಮಾಡಿ ನಂತರ ಮೇಲುಕೋಟೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಾಗಿದ್ದಾನೆ.

ಸ್ಥಳದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಜೋಡಿ ಹತ್ಯೆಯಿಂದಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Similar News