ಕೊಲೆ ಪ್ರಕರಣ: ಪತ್ರಕರ್ತ ಮೆಹಬೂಬ್ ಸುಬಾನಿಗೆ ಹೈಕೋರ್ಟ್‍ನಿಂದ ಜಾಮೀನು

Update: 2023-04-26 18:08 GMT

ಬೆಂಗಳೂರು, ಎ.26: ವ್ಯಕ್ತಿಯೊಬ್ಬರ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಪತ್ರಕರ್ತ ಮೆಹಬೂಬ್ ಸುಬಾನಿ ಅವರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. 

ಈ ಸಂಬಂಧ ಆಂಜನೇಯ ಎಂಬುವರ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಮೆಹಬೂಬ್ ಸುಬಾನಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.  

ಅರ್ಜಿದಾರರ ಪರ ವಾದಿಸಿದ ವಕೀಲರು, ಅರ್ಜಿದಾರರಾಗಿರುವ ಮೆಹಬೂಬ್ ಸುಬಾನಿ ಅವರು ಪತ್ರಕರ್ತರಿಗೆ ನೀಡಲಾಗುವ ಪ್ರತಿಷ್ಠಿತ ರಾಮನಾಥ್ ಗೋಯಂಕಾ ಪ್ರಶಸ್ತಿ ಪುರಸ್ಕೃತರು. ಅವರು ಸಾಕ್ಷ್ಯ ನಾಶಪಡಿಸುವ ಯಾವುದೇ ಉದ್ದೇಶವನ್ನೂ ಹೊಂದಿಲ್ಲ ಮತ್ತು ಆರೋಪಿಗಳಿಗೆ ಆಶ್ರಯವನ್ನು ಕೊಟ್ಟಿರುವುದಿಲ್ಲ ಎಂದು ಪೀಠಕ್ಕೆ ತಿಳಿಸಿದರು. 

ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿದಾರರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಪ್ರಕರಣವೇನು?: ಆಂಜನೇಯನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ನ್ಯಾಮತಿ ಪೊಲೀಸ್ ಠಾಣೆಯಲ್ಲಿ 2023ರ ಮಾರ್ಚ್ 15ರಂದು ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. 

ಅಲ್ಲದೆ, ಆರು ಜನರ ಆರೋಪಿಗಳ ಪೈಕಿ 4 ಜನರನ್ನು ಮೆಹಬೂಬ್ ಸುಬಾನಿ ಅವರು ತಮ್ಮ ವಶದಲ್ಲಿ ಇರಿಸಿಕೊಂಡಿದ್ದಾರೆ ಮತ್ತು ಇನ್ನಿಬ್ಬರು ಆರೋಪಿಗಳನ್ನು ಪೊಲೀಸರ ವಶಕ್ಕೆ ಒಪ್ಪಿಸದೇ ಸಾಕ್ಷ್ಯ ನಾಶಪಡಿಸಿರುತ್ತಾರೆ ಎಂದು ಆರೋಪಿಸಿ ಸುಬಾನಿ ಅವರನ್ನು 8ನೆ ಆರೋಪಿ ಎಂದು ಗುರುತಿಸಿದ್ದರು. ಬಳಿಕ ಅವರನ್ನು ಮನೆಯಿಂದ ದಸ್ತಗಿರಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ದಾವಣಗೆರೆ ಸತ್ರ ನ್ಯಾಯಾಲಯ ಅವರಿಗೆ ಜಾಮೀನು ನಿರಾಕರಿಸಿತ್ತು. 

Similar News