ಪಕ್ಷದಲ್ಲಿ ಬಂಡಾಯ ಎದ್ದವರು ಯಾರೂ ಗೆದ್ದಿಲ್ಲ, ಮೇ 13ರಂದು ಶೆಟ್ಟರ್ ಭವಿಷ್ಯ ನಿರ್ಧಾರ: ನಳಿನ್ ಕುಮಾರ್ ಕಟೀಲ್
ಹುಬ್ಬಳ್ಳಿ, ಎ. 26: 'ಬಿಜೆಪಿಯಿಂದ ಬಂಡಾಯ ಎದ್ದವರು ಯಾರೂ ಗೆಲುವು ಸಾಧಿಸಿಲ್ಲ. ಹಲವು ಸ್ಥಾನಮಾನಗಳನ್ನು ಪಡೆದು ಇದೀಗ ಪಕ್ಷ ಬಿಟ್ಟಿರುವ ಜಗದೀಶ್ ಶೆಟ್ಟರ್ ಅವರ ಭವಿಷ್ಯ ಮೇ 13ರಂದು ನಿರ್ಧಾರವಾಗಲಿದೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಾಜೀನಾಮೆ ಅಥವಾ ಬಿಜೆಪಿ ದುರ್ಬಲ ಆಗಿದೆ ಕಾರಣಕ್ಕಾಗಿ ನರೇಂದ್ರ ಮೋದಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಬರುತ್ತಿಲ್ಲ. ಬೇರೆ ಕ್ಷೇತ್ರಗಳಿಗೂ ಮೋದಿ ಭೇಟಿ ನೀಡುತ್ತಿದ್ದಾರೆ. ಅದೇ ರೀತಿ ಇಲ್ಲಿಯೂ ಬರುತ್ತಾರೆ. ನಿನ್ನೆ ಅಮಿತ್ ಶಾ ರೋಡ್ ಶೋ ನಡೆಸಿದ್ದರು ಎಂದು ತಿಳಿಸಿದರು
‘ಹಳೆ ಮೈಸೂರಲ್ಲಿ ಜೆಡಿಎಸ್ ಭದ್ರಕೋಟೆ ಛಿದ್ರವಾಗಲಿದೆ, ಕಾಂಗ್ರೆಸ್ ಸ್ಥಾನಗಳು ಕುಸಿಯಲಿದೆ. ಅಲ್ಲದೆ ಬಿಜೆಪಿ ಬಹುಮತ ಪಡೆದು ರಾಜ್ಯದಲ್ಲಿ ಮತ್ತೆ ಆಡಳಿತ ನಡೆಸಲಿದೆ’ ಎಂದರು.
ಜೆಡಿಎಸ್ ಭದ್ರಕೋಟೆಯಾಗಿರುವ ಹಳೆ ಮೈಸೂರಲ್ಲಿ ಹೆಚ್ಚು ಸೀಟು ಗೆಲ್ಲಲು ಬಿಜೆಪಿ ವಿವಿಧ ಪ್ರಯತ್ನಗಳನ್ನು ಪಡುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ಕಾರ್ಯ, ಸ್ಟಾರ್ ಪ್ರಚಾರಕರನ್ನೂ ಕರೆಸಿಕೊಳ್ಳುತ್ತಿದೆ. ಹೀಗಾಗಿ ಜೆಡಿಎಸ್ ಭದ್ರಕೊಟೆ ಈ ಬಾರಿ ಛಿದ್ರವಾಗಲಿದೆ ಎಂದರು.
ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ 80 ಸ್ಥಾನಗಳನ್ನು ಗೆಲ್ಲುವುದಿಲ್ಲ. ಬಿಜೆಪಿ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಮತ್ತಿತರ ಪ್ರಮುಖರ ಭೇಟಿಯಿಂದ ಕಾರ್ಯಕರ್ತರ ಉತ್ಸಾಹ ಇಮ್ಮಡಿಯಾಗಿದೆ. ಇದು ಗೆಲುವಿನ ಫಲಿತಾಂಶವನ್ನು ನೀಡಲಿದೆ ಎಂದು ಅವರು ತಿಳಿಸಿದರು.
ಮೀಸಲಾತಿಯಲ್ಲಿಯೂ ಬಿಜೆಪಿ ನ್ಯಾಯ ಕೊಟ್ಟಿದೆ. ಆದರೆ, ಕಾಂಗ್ರೆಸ್ ಜಾತಿ ಹೆಸರಲ್ಲಿ ರಾಜಕಾರಣ ಮಾಡುತ್ತಿದೆ. ವೀರಶೈವ, ಲಿಂಗಾಯತರನ್ನು ವಿಭಜನೆ ಮಾಡಿದರು. ಲಿಂಗಾಯತ ಸಮುದಾಯದ ಬಗ್ಗೆ ಸಿದ್ದರಾಮಯ್ಯ ಹೀನವಾಗಿ ಮಾತನಾಡಿದ್ದಾರೆ. ಸಿದ್ದರಾಮಯ್ಯ ತುಷ್ಠೀಕರಣದ ರಾಜಕಾರಣ ಮಾಡುತ್ತಿದ್ದಾರೆ. ನಾಳೆ(ಎ.27) 50 ಲಕ್ಷ ಕಾರ್ಯಕರ್ತರ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ ಎಂದು ಅವರು ಹೇಳಿದರು.