ಬೇರೆಯವರ ಮೂಲಕ ಟೀಕೆ ಮಾಡಿಸುವ ಬದಲು ಬಹಿರಂಗ ಯುದ್ಧಕ್ಕೆ ಬನ್ನಿ: ಬಿ.ಎಲ್. ಸಂತೋಷ್ ಗೆ ಶೆಟ್ಟರ್ ಸವಾಲು
"ಲಿಂಗಾಯತರನ್ನು ಒಡೆದು ಆಳಲು ಬಿಜೆಪಿ ಯೋಜನೆ"
ಹುಬ್ಬಳ್ಳಿ: ಲಿಂಗಾಯತ ನಾಯಕರನ್ನು ರಾಜಕೀಯವಾಗಿ ಮುಗಿಸಲು ಲಿಂಗಾಯತ ನಾಯಕರನ್ನೇ ಮುಂದೆ ಬಿಡಲಾಗುತ್ತಿದೆ ಎಂಬ ಗಂಭೀರ ಆರೋಪ ಬಿಜೆಪಿ ವಿರುದ್ಧ ಕೇಳಿ ಬಂದಿದೆ. ಜಗದೀಶ್ ಶೆಟ್ಟರ್ ಅನ್ನು ಸೋಲಿಸುವ ಜವಾಬ್ದಾರಿ ನನ್ನದು ಎಂದು ಹಿರಿಯ ಲಿಂಗಾಯತ ನಾಯಕ ಬಿಎಸ್ ಯಡಿಯೂರಪ್ಪ ಬಹಿರಂಗವಾಗಿ ಘೊಷಿಸಿದ ಬೆನ್ನಲ್ಲೇ ಬಿಜೆಪಿಯ ಒಡೆದು ಆಳುವ ನೀತಿಯ ಬಗ್ಗೆ ಶೆಟ್ಟರ್ ಮಾತನಾಡಿದ್ದಾರೆ.
ತನಗೆ ಟಿಕೆಟ್ ತಪ್ಪಲು ಬಿಎಲ್ ಸಂತೋಷ್ ಕಾರಣ ಎಂದಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತೆ ಸಂತೋಷ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಲಿಂಗಾಯತ ಸಮುದಾಯವನ್ನು ಒಡೆದು ಆಳಲು ಲಿಂಗಾಯತ ನಾಯಕರ ವಿರುದ್ಧ ಲಿಂಗಾಯತ ನಾಯಕರಲ್ಲೇ ಹೇಳಿಕೆ ನೀಡಿಸಲಾಗುತ್ತಿದೆ ಎಂದು ಶೆಟ್ಟರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶೆಟ್ಟರ್, "ಯಡಿಯೂರಪ್ಪರ ಮೇಲೆ ನನ್ನ ವಿರುದ್ಧ ಮಾತಾಡುವಂತೆ ಒತ್ತಡ ಹೇರಲಾಗಿದೆ. ಒಬ್ಬ ಲಿಂಗಾಯತ ನಾಯಕನನ್ನು ಮುಗಿಸಲು ಮತ್ತೊಬ್ಬ ಲಿಂಗಾಯತನ ಹೆಗಲ ಮೇಲೆ ಬಂದೂಕು ಇಟ್ಟು ಹೊಡೆಯುವ ಕೆಲಸದಲ್ಲಿ ಬಿಜೆಪಿ ತೊಡಗಿಸಿದೆ. ಲಿಂಗಾಯತರನ್ನು ಒಡೆದು ಆಳುವ ನೀತಿಯನ್ನು ಬಿಜೆಪಿ ಅನುಸರಿಸುತ್ತಿದೆ" ಎಂದು ಶೆಟ್ಟರ್ ಹೇಳಿದ್ದಾರೆ.
ಕೊನೆ ಕ್ಷಣದಲ್ಲಿ ಟಿಕೆಟ್ ವಂಚಿತರಾಗಿದ್ದ ಜಗದೀಶ್ ಶೆಟ್ಟರ್ ಅಸಮಾಧಾನ ಹೊರ ಹಾಕಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು. ಅಲ್ಲದೆ, ತನಗೆ ಟಿಕೆಟ್ ತಪ್ಪಲು ಬಿಎಲ್ ಸಂತೋಷ್ ಕಾರಣ ಎಂದು ನೇರ ಆರೋಪ ಮಾಡಿದ್ದರು. ಆದರೆ, ಇದ್ಯಾವುದಕ್ಕೂ ಬಿಎಲ್ ಸಂತೋಷ್ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದಾರೆ.
ಈ ಮೌನವನ್ನು ಪ್ರಶ್ನಿಸಿರುವ ಶೆಟ್ಟರ್, ನನ್ನ ಆರೋಪಗಳಿಗೆ ಸಂತೋಷ್ ಇದುವರೆಗೂ ಉತ್ತರಿಸಿಲ್ಲ, ಬದಲಾಗಿ ಬೇರೆಯವರ ಮೂಲಕ ನನ್ನ ವಿರುದ್ಧ ಟೀಕೆ ಮಾಡಿಸುತ್ತಿದ್ದಾರೆ. ಯುದ್ಧ ಮಾಡುವುದಿದ್ದರೆ ಬಹಿರಂಗವಾಗಿ ಯುದ್ಧ ಮಾಡಲಿ ಎಂದು ಸವಾಲು ಹಾಕಿದ್ದರು.
ಬೆಳಗಾವಿಯ ಅಥಣಿಯಲ್ಲಿ ಪ್ರಚಾರ ಮಾಡುವ ಸಂದರ್ಭದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಜಗದೀಶ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಹುಬ್ಬಳ್ಳಿಯಲ್ಲಿ ಶೆಟ್ಟರ್ ರನ್ನು ಸೋಲಿಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ, ಅಥಣಿಯಲ್ಲಿ ಸವದಿಯನ್ನು ಸೋಲಿಸುವ ಹೊಣೆಯನ್ನು ನೀವು ತೆಗೆದುಕೊಳ್ಳಿ ಎಂದು ಕ್ಷೇತ್ರದ ಮತದಾರರಿಗೆ ಬಿಎಸ್‌ವೈ ಕರೆ ಕೊಟ್ಟಿದ್ದರು.
ಇದರ ಬೆನ್ನಲ್ಲೇ ಶೆಟ್ಟರ್, "ನಾನು ಅಂತಹ ಅಪರಾಧ ಏನು ಮಾಡಿದ್ದೇನೆ, ಹಲವಾರು ಮಂದಿ ಪಕ್ಷ ತೊರೆದಿದ್ದಾರೆ. ಆದರೆ, ನನ್ನನ್ನು ಸೋಲಿಸಲೇಬೆಕೆಂದು ಲಿಂಗಾಯತ ನಾಯಕರನ್ನು ಮುಂದೆ ಬಿಡಲಾಗುತ್ತಿದೆ. ಅಮಿತ್ ಶಾ, ಜೆಪಿ ನಡ್ಡಾ, ಸ್ಮೃತಿ ಇರಾನಿಯಾದಿ ನಾಯಕರು ನನ್ನನ್ನು ಸೋಲಿಸಬೇಕೆಂದು ಕರೆ ನೀಡುತ್ತಿದ್ದಾರೆʼ ಎಂದು ಹೇಳಿದ್ದರು.
ಇತ್ತೀಚೆಗೆ ಬೆಳಗಾವಿಯಲ್ಲಿ ಲಿಂಗಾಯತ ಮುಖಂಡರೊಂದಿಗೆ ಅಮಿತ್ ಶಾ ನಡೆಸಿದ ಸಭೆಯಲ್ಲಿ ಲಕ್ಷ್ಮಣ್ ಸವದಿ ಹಾಗೂ ಜಗದೀಶ್ ಶೆಟ್ಟರ್ ನಿರ್ಗಮನದಿಂದಾಗಿ ಲಿಂಗಾಯತರಿಗೆ ಪಕ್ಷದ ಬಗ್ಗೆ ಭರವಸೆ ಕಳೆದುಕೊಳ್ಳದಂತೆ ಯೋಜನೆ ರೂಪಿಸಲು ನಿರ್ದೇಶನ ನೀಡಲಾಗಿತ್ತು ಎಂದು ಪಕ್ಷದ ಮೂಲಗಳು ಹೇಳಿದ್ದವು. ಲಿಂಗಾಯತರಿಗೆ ಪಕ್ಷ ದ್ರೋಹ ಮಾಡಿಲ್ಲ ಎನ್ನುವದನ್ನು ಸಮುದಾಯದ ಮತದಾರರಿಗೆ ಮನದಟ್ಟು ಮಾಡಿಕೊಡಬೇಕು, ಶೆಟ್ಟರ್ ರನ್ನು ಸೋಲಿಸಿ, ಪಕ್ಷ ತೊರೆಯುವವರಿಗೆ ಸ್ಪಷ್ಟ ಸಂದೇಶ ನೀಡಬೇಕೆಂದು ಹೈಕಮಾಂಡಿನಿಂದಲೇ ಆದೇಶ ಆಗಿದೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಲಿಂಗಾಯತರನ್ನು ಒಡೆದು ಆಳುವ ಬಗ್ಗೆ ಬಿಜೆಪಿ ವಿರುದ್ಧ ಶೆಟ್ಟರ್ ಮಾಡಿರುವ ಆರೋಪಗಳು ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.