×
Ad

ಮೋದಿ ವಿಷದ ಹಾವಿದ್ದಂತೆ: ಮಲ್ಲಿಕಾರ್ಜುನ ಖರ್ಗೆ

Update: 2023-04-27 18:35 IST

ಗದಗ, ಎ. 27: ‘ಪ್ರಧಾನಿ ಮೋದಿ ವಿಷದ ಹಾವಿದ್ದಂತೆ. ಏನಿದು ನೋಡೋಣ ಎಂದು ನೀವು ನೆಕ್ಕಿದರೆ ಸತ್ತು ಹೋದಂತೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಬಿಜೆಪಿ, ಆರೆಸ್ಸೆಸ್‍ನವರ ಮನೆಯಲ್ಲಿ ದೇಶಕ್ಕಾಗಿ ಒಂದೂ ನಾಯಿಯೂ ಸತ್ತಿಲ್ಲ. ದೇಶಕ್ಕೆ ಬಿಜೆಪಿಯವರ ಕೊಡುಗೆ ಏನು ಎಂದು ಹೇಳಲಿ’ ಎಂದು ಸವಾಲು ಹಾಕಿದರು.

‘ರಾಜ್ಯದಲ್ಲಿ ಬಿಜೆಪಿ ಮಾಡಿದ ಸಾಧನೆ ಎಂದರೆ ಶೇ.40ರಷ್ಟು ಕಮಿಷನ್. ಭ್ರಷ್ಟಾಚಾರ ಮಾಡಿದವರನ್ನು ಮೋದಿ ತಮ್ಮ ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾರೆ. ಒಬ್ಬ ಪ್ರಧಾನಿಯಾಗಿ ಹಳ್ಳಿ, ತಾಲೂಕಿಗೆ ಬಂದು ಓಡಾಡುತ್ತಿದ್ದಾರೆ. ಮೋದಿ ಮುಖ ನೋಡಿ ಮತ ಹಾಕಿ ಅಂತೀರಾ. ನಗರಸಭೆ ಅಧ್ಯಕ್ಷ, ಪಾಲಿಕೆ ಮೇಯರ್, ಮುಖ್ಯಮಂತ್ರಿ, ಪ್ರಧಾನಿ ಎಲ್ಲವೂ ನೀವೇ ಆಗ್ತೀರಾ. ಆಸೆ ಬುರುಕ ಮೋದಿ’ ಎಂದು ಖರ್ಗೆ ವಾಗ್ದಾಳಿ ನಡೆಸಿದರು.

‘ವಿದೇಶದಲ್ಲಿನ ಕಪ್ಪುಹಣ ತಂದು 15ಲಕ್ಷ ರೂ.ಕೊಡ್ತೀನಿ ಅಂದಿದ್ದರು ಮೋದಿ. ಆದರೆ, ಇನ್ನೂ ಕೊಟ್ಟಿಲ್ಲ. ಎಲ್ಲ ಹಣ ಅದಾನಿ ಹತ್ತಿರ ಇಟ್ಟಾರೆನೋ. ಉದ್ಯೋಗವನ್ನೂ ಕೊಟ್ಟಿಲ್ಲ. 18 ಕೋಟಿ ಯುವಕರಿಗೆ ನೌಕರಿ ಕೊಡಬೇಕಿತ್ತು. ಮೋದಿ ಒಬ್ಬ ಸುಳ್ಳಿನ ಸರ್ದಾರ್. ಹಗಲಿಗೆ ರಾತ್ರಿ, ರಾತ್ರಿಗೆ ಹಗಲು ಎಂದು ಹೇಳುತ್ತಾರೆ’ ಎಂದು ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

‘ಡಬಲ್ ಇಂಜಿನ್ ಎರಡು ಕಡೆ ಫೇಲ್ ಆಗಿದೆ. ಡಬಲ್ ಇಂಜಿನ್ ಸರಕಾರ ಯಾಕೆ ಉಡ್ಯೋಗ ಕೊಡುತ್ತಿಲ್ಲ. ಮೋದಿ ದೊಡ್ಡ ಸುಳ್ಳುಗಾರ. ನಮ್ಮ ಸರಕಾರ ಇದ್ದಾಗ ದೊಡ್ಡ ದೊಡ್ಡ ಜಲಾಶಯ, ದೊಡ್ಡ ದೊಡ್ಡ ನೀರಾವರಿ ಯೋಜನೆ ಮಾಡಿದ್ದೇವೆ. ಒಂಬತ್ತು ವರ್ಷದಲ್ಲಿ ಮೋದಿ ಏನ್ ಮಾಡಿದ್ದಾರೆ’ ಎಂದು ಖರ್ಗೆ ಪ್ರಶ್ನಿಸಿದರು.

Similar News