×
Ad

ವೀಸಾ ಅವಧಿ ವಿಸ್ತರಿಸಲು ಕೋರಿ ಚೀನಿ ಮಹಿಳೆ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ ನಿಂದ ವಜಾ

Update: 2023-04-27 18:49 IST

ಬೆಂಗಳೂರು, ಎ.27: ವೀಸಾ ಅವಧಿ ವಿಸ್ತರಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಚೀನಿ ಮಹಿಳೆ ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.   

ಈ ಸಂಬಂಧ ಚೀನಾದ ಲೀ ಡಾಂಗ್(44) ಎಂಬ ಮಹಿಳೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.  

ಕೇಂದ್ರ ಸರಕಾರದ ಪರ ವಾದಿಸಿದ ವಕೀಲರು, ಮೇಲ್ಮನವಿ ಸಲ್ಲಿಸಿರುವ ಲೀ ಡಾಂಗ್ ಅವರು ಮಾ.3ರಂದು ಭಾರತವನ್ನು ಬಿಟ್ಟು ಕೆರೆಬಿಯನ್ ದ್ವೀಪಕ್ಕೆ ತೆರಳಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದವನ್ನು ಆಲಿಸಿದ ನ್ಯಾಯಪೀಠವು ಮೇಲ್ಮನವಿಯನ್ನು ವಜಾಗೊಳಿಸಿ ಆದೇಶಿಸಿತು.  

ರಾಜ್ಯದ ಶ್ರೀರಂಗಪಟ್ಟಣದಲ್ಲಿ ನೆಲೆಸಿದ್ದ ಡಾಂಗ್ ಲೀ ಅವರ ಉದ್ಯಮ ವೀಸಾ ಅವಧಿಯನ್ನು  ಕೊರೋನ ಕಾರಣ ಪರಿಗಣಿಸಿ ಅವಧಿಯನ್ನು ವಿಸ್ತರಿಸಲಾಗಿತ್ತು. ತದನಂತರವೂ ಅವರು ಇಲ್ಲೇ ನೆಲೆಸಲು ವೀಸಾ ವಿಸ್ತರಣೆ ಕೋರಿದ್ದರು.

ಆ ಕೋರಿಕೆ ನಿರಾಕರಿಸಿದ್ದರಿಂದ ಲೀ ಡಾಂಗ್ ಹೈಕೋರ್ಟ್‍ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅದನ್ನು ವಜಾಗೊಳಿಸಿದ್ದ ಏಕಸದಸ್ಯ ಪೀಠವು ಮಹಿಳೆಯನ್ನು ಚೀನಾಗೆ ವಾಪಸ್ ಕಳುಹಿಸುವಂತೆ ಕೇಂದ್ರ ಸರಕಾರಕ್ಕೆ 2021ರ ಡಿ.3ರಂದು ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಲೀ ಡಾಂಗ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

Similar News