ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನ ಸಂಚಾರ ನಿಷೇಧಕ್ಕೆ ಮುಂದಾದ NHAI
ಬೆಂಗಳೂರು, ಎ.27: ಇತ್ತೀಚೆಗೆ ಉದ್ಘಾಟನೆಗೊಂಡ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು ಮತ್ತು ಕೃಷಿ ವಾಹನಗಳು ಹೆದ್ದಾರಿಯ ಪ್ರವೇಶ ನಿಯಂತ್ರಿತ ಭಾಗದಲ್ಲಿ ಸಂಚರಿಸಲು ಅನುಮತಿಸುವುದಿಲ್ಲ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.
ಎಕ್ಸ್ ಪ್ರೆಸ್ ವೇಯ ಸುರಕ್ಷತಾ ಕಾರಣಗಳಿಂದಾಗಿ ಈ ರೀತಿಯ ವಾಹನಗಳನ್ನು ನಿಷೇಧಿಸುವ ಪ್ರಸ್ತಾವನೆಯು ಪರಿಗಣನೆಯಲ್ಲಿದೆ ಎಂದು ಎನ್‍ಎಚ್‍ಎಐ ತಿಳಿಸಿದ್ದು, ಅತೀ ವೇಗವಾಗಿ ಕಡಿಮೆ ಸಮಯದಲ್ಲಿ ಮೈಸೂರು ಅಥವಾ ಬೆಂಗಳೂರು ನಗರಗಳನ್ನು ತಲುಪುವ ಭರವಸೆ ಮೂಡಿಸಿದ್ದ ಎಕ್ಸ್ ಪ್ರೆಸ್ ವೇ ಸವಾರರಿಗೆ ನಿರಾಸೆಯನ್ನುಂಟು ಮಾಡಿದೆ.
ಇನ್ನು ಸರಕಾರದಿಂದ ಈ ಪ್ರಸ್ತಾವನೆಗೆ ಅನುಮೋದನೆ ದೊರೆತಾಗ ಸರಕಾರದ ಗೆಜೆಟ್ ನೋಟಿಫಿಕೇಶನ್ ಪಟ್ಟಿಯಲ್ಲಿ ಪ್ರಕಟವಾಗುತ್ತದೆ. ಆ ನಂತರ ಎಕ್ಸ್ ಪ್ರೆಸ್ ವೇಯ ಮುಖ್ಯ ಭಾಗದಿಂದ ನಿಷೇಧಿಸಲಾದ ವಾಹನಗಳು ಸೇವಾ ರಸ್ತೆಗಳನ್ನು ಬಳಸಬಹುದು. ಸರಕಾರದಿಂದ ಅನುಮೋದನೆ ಸಿಗುವವರೆಗೆ ದ್ವಿಚಕ್ರ ವಾಹನಗಳು, ಆಟೋರಿಕ್ಷಾಗಳು ಮತ್ತು ಸೈಕಲ್‍ಗಳನ್ನು ಎಕ್ಸ್ ಪ್ರೆಸ್ ವೇಯಲ್ಲಿ ಅನುಮತಿಸಲಾಗುತ್ತಿದ್ದು, ಅಧಿಕೃತ ಅಧಿಸೂಚನೆಯನ್ನು ಪ್ರಕಟವಾದ ನಂತರ ಅವುಗಳನ್ನು ನಿಲ್ಲಿಸಲಾಗುವುದು ಎಂದು ಎನ್‍ಎಚ್‍ಎಐ ಅಧಿಕಾರಿ ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತು ಸಂಸದ ಪ್ರತಾಪ್ ಸಿಂಹ ಮಾತನಾಡಿ, ಎಕ್ಸ್ ಪ್ರೆಸ್ ವೇ ವೇಯಲ್ಲಿ ಟ್ರಕ್‍ಗಳು ಎಡ ಪಥದಲ್ಲಿ ಚಲಿಸಬೇಕು. ಮಧ್ಯದಲ್ಲಿ ಕಾರುಗಳು ಚಲಿಸಬೇಕು. ಬಲಭಾಗದ ಲೇನ್ ಅನ್ನು ಓವರ್ ಟೇಕ್ ಮಾಡಲು ಮುಕ್ತವಾಗಿ ಬಿಡಬೇಕು. ಆದರೆ, ಎಕ್ಸ್ ಪ್ರೆಸ್ ವೇ ಯಲ್ಲಿ ಕ್ರಮಬದ್ಧತೆ, ಶಿಸ್ತು ಮತ್ತು ನಾಗರಿಕ ಪ್ರಜ್ಞೆಯ ಕಾಣದಾಗಿದೆ ಎಂದು ತಿಳಿಸಿದ್ದಾರೆ.