ದೇಶದಲ್ಲಿ ಶೇ.20ರಷ್ಟು ಮಂದಿ ಮಾತ್ರ ಔಪಚಾರಿಕ ವಲಯದ ಉದ್ಯೋಗಿಗಳು: ಕರ್ನಾಟಕ ಉದ್ಯೋಗ ವರದಿ ಬಹಿರಂಗ
ಬೆಂಗಳೂರು, ಎ.27: ಭಾರತದ ಅಂದಾಜು 57 ಕೋಟಿ ದುಡಿಯುವ ಜನಸಂಖ್ಯೆಯಲ್ಲಿ, ಕೇವಲ ಶೇ.20(11.4 ಕೋಟಿ) ಮಾತ್ರ ಔಪಚಾರಿಕ ವಲಯದಲ್ಲಿ ಉದ್ಯೋಗದಲ್ಲಿದ್ದಾರೆ ಎಂದು ಕರ್ನಾಟಕ ಉದ್ಯೋಗ ವರದಿ 2022-23 ಬಹಿರಂಗಪಡಿಸಿದೆ.
ಕ್ವೆಸ್ ಕಾರ್ಪ್ ಮತ್ತು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ(ಎಫ್‍ಐಸಿಸಿಐ) ಸಂಸ್ಥೆಗಳು ಕರ್ನಾಟಕ ಉದ್ಯೋಗ ವರದಿ 2022-23 ಎಂಬ ವರದಿಯನ್ನು ಬಿಡುಗಡೆ ಮಾಡಿದ್ದು, ವಯಸ್ಸು, ವಲಯ, ಲಿಂಗ ಮತ್ತು ರಾಜ್ಯದ ಆಧಾರದ ಮೇಲೆ ಭಾರತದಲ್ಲಿನ ಉದ್ಯೋಗ ಸನ್ನಿವೇಶಗಳ ಸಮಗ್ರ ವಿಶ್ಲೇಷಣೆಯನ್ನು ವರದಿಯು ಒಳಗೊಂಡಿದೆ.
ಇ-ಶ್ರಮ್ ಪೋರ್ಟಲ್‍ನಲ್ಲಿ (ಅಸಂಘಟಿತ ಕಾರ್ಮಿಕರ ಕೇಂದ್ರೀಕೃತ ದತ್ತಾಂಶ) 2022ರ ಡಿಸೆಂಬರ್ ವೇಳೆಗೆ ಗಮನಾರ್ಹ 28.55 ಕೋಟಿ ವ್ಯಕ್ತಿಗಳು ನೋಂದಾಯಿಸಿಕೊಂಡಿದ್ದರೆ, ಸರಿಸುಮಾರು 17.05 ಕೋಟಿ ಅನೌಪಚಾರಿಕ ವಲಯದ ಕಾರ್ಮಿಕರು ಇನ್ನೂ ನೋಂದಾಯಿಸಿಕೊಂಡಿಲ್ಲ ಎಂದು ತಿಳಿಸಿದೆ.
ಉತ್ತರ ಪ್ರದೇಶವು ʻಇ-ಶ್ರಮ್ʼ ಪೋರ್ಟಲ್‍ನಲ್ಲಿ ಅತಿ ಹೆಚ್ಚು ನೋಂದಣಿಗಳನ್ನು ಹೊಂದಿದ್ದು, 8.3 ಕೋಟಿ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ಬಿಹಾರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ನಂತರದ ಸ್ಥಾನದಲ್ಲಿವೆ. ಪೋರ್ಟಲ್‍ನಲ್ಲಿ ಅನೌಪಚಾರಿಕ ಉದ್ಯೋಗ ನೋಂದಣಿಗಳಲ್ಲಿ ಶೇ.52ರಷ್ಟು ಕೃಷಿ ವಲಯದಿಂದ ದಾಖಲಾಗಿದೆ. ಕೃಷಿ ಮತ್ತು ನಿರ್ಮಾಣದ ಹೊರತಾಗಿ, ಪೋರ್ಟಲ್‍ನಲ್ಲಿ ಗೃಹ ಮತ್ತು ಗೃಹ ಕಾರ್ಮಿಕರು ಶೇ.10, ಉಡುಪು ಶೇ.6 ಮತ್ತು ಇತರ ಶೇ.4ರಷ್ಟು ಸೇರಿವೆ ಎಂದು ವರದಿ ತಿಳಿಸಿದೆ.