‘ಕಟ್ಟು ಜಾಣ್ಮೆ’ಯ ಕಠಿಣ ಸವಾಲು

Update: 2023-04-27 19:01 GMT

ತಂತ್ರಜ್ಞಾನದಿಂದ ಉತ್ಪಾದಕತೆ ಹೆಚ್ಚುತ್ತದೆ; ಕಾರ್ಮಿಕ ಮಾರುಕಟ್ಟೆ ಪ್ರತಿದಿನ ಬದಲಾಗುತ್ತಿರುತ್ತದೆ ಎಂದು ಸಮಜಾಯಿಷಿ ನೀಡಬಹುದು. ಆದರೆ, ಸೂಕ್ತ ಕೌಶಲಗಳಿಲ್ಲದವರ ಕಥೆ ಏನು? ಡಾ. ಮಾರ್ಟಿನ್ ಲೂಥರ್ ಕಿಂಗ್ 1964ರಲ್ಲೇ ತಾಂತ್ರಿಕ ಮುನ್ನಡೆ ಮತ್ತು ನೈತಿಕತೆ ನಡುವಿನ ಕಂದರ ಹೆಚ್ಚುತ್ತಿರುವ ಬಗ್ಗೆ ಎಚ್ಚರಿಸಿದ್ದರು. ನಾವೀಗ ಗಾಂಧಿ, ಕಿಂಗ್ ಅವರನ್ನು ದಾಟಿ ಬಹುದೂರ ಬಂದಿದ್ದೇವೆ.



‘ಕಟ್ಟು ಜಾಣ್ಮೆ’(ಎಐ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ತಂತ್ರಜ್ಞಾನವು ಉದ್ಯೋಗ ನಷ್ಟ, ಖಾಸಗಿತನದ ಹರಣ ಹಾಗೂ ಏಕಸ್ವಾಮ್ಯಕ್ಕೆ ಕಾರಣವಾಗುವುದಲ್ಲದೆ, ಬಹುರಾಷ್ಟ್ರೀಯ ಕಂಪೆನಿಗಳ ತಿಜೋರಿಯನ್ನು ತುಂಬುತ್ತದೆ. ‘‘ತಾಂತ್ರಿಕ ಬದಲಾವಣೆಗಳು ಉತ್ಪಾದಕತೆಯನ್ನು ಹೆಚ್ಚಿಸುತ್ತವೆ. ಆರ್ಥಿಕತೆ ಬಲಗೊಳ್ಳುತ್ತದೆ. ಎಐ ಎಸೆಯುತ್ತಿರುವ ಸವಾಲುಗಳನ್ನು ಈ ಹಿಂದೆ ಇನ್ನಿತರ ಡಿಜಿಟಲ್ ತಂತ್ರಜ್ಞಾನಗಳೂ ಎಸೆದಿದ್ದವು. ಆದರೆ, ಜಗತ್ತು ಅಂಥ ಸವಾಲುಗಳನ್ನು ಎದುರಿಸಿ ಮುಂದೊತ್ತುತ್ತಿದೆ’’ ಎಂದು ವಾದಿಸುವವರೂ ಇದ್ದಾರೆ.
ಮನುಷ್ಯನ ಮಿದುಳು ವಿಶಿಷ್ಟವಾದುದು ಮತ್ತು ಅಪಾರ ಸಾಮರ್ಥ್ಯವಿರುವಂಥದ್ದು. ಮಿದುಳಿನಲ್ಲಿ 86 ಶತಕೋಟಿ ನ್ಯೂರಾನ್‌ಗಳಿದ್ದು, 2.5 ದಶಲಕ್ಷ ಗಿಗಾಬೈಟ್ ಸ್ಮರಣ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಬಳಕೆಯಾಗುತ್ತಿರುವುದು ಒಂದು ತುಣುಕು ಮಾತ್ರ. ಸವಾಲೊಂದು ಎದುರಾದಾಗ ಮಿದುಳು ಅದನ್ನು ಬಗೆಹರಿಸಲು ಕಾರ್ಯಪ್ರವೃತ್ತವಾಗುತ್ತದೆ. ಆಲೋಚಿಸಬಲ್ಲ, ಅನ್ವೇಷಿಸಬಲ್ಲ, ಆತ್ಮಸಾಕ್ಷಿಯಿರುವ ಮತ್ತು ಬೆಳಗ್ಗೆ ಎದ್ದು ಏನನ್ನಾದರೂ ಮಾಡೋಣ ಎನ್ನುವ ಮನಸ್ಥಿತಿ ಯಂತ್ರಕ್ಕೆ ಇರಲು ಸಾಧ್ಯವಿಲ್ಲ. ಆದರೆ, ಕಟ್ಟು ಜಾಣ್ಮೆಯ ವ್ಯವಸ್ಥೆಗಳು ಜಾಗತಿಕವಾಗಿ ತಲ್ಲಣ ಸೃಷ್ಟಿಸಿವೆ.

ಚಾಟ್‌ಬಾಟ್‌ಗಳ ಆಗಮನ
ಅಲೆಕ್ಸಾ, ಸಿರಿ, ಎಲಿಜಾ, ರೆಪ್ಲಿಕಾ ಇತ್ಯಾದಿ ಚಾಟ್‌ಬಾಟ್‌ಗಳು ಸಂಭಾಷಣೆ ಜೊತೆಗೆ ಅಂತರ್ಜಾಲವನ್ನು ಜಾಲಾಡಿ ಪ್ರಶ್ನೆಗೆ ಉತ್ತರ ನೀಡಬಲ್ಲವು. ಕ್ಷೇತ್ರ ನಿರ್ದಿಷ್ಟ ಚಾಟ್‌ಬಾಟ್‌ಗಳು ಹಣಕಾಸು, ಕ್ರೀಡೆ, ಶೇರು ಮಾರುಕಟ್ಟೆ, ಶಿಕ್ಷಣ ಇತ್ಯಾದಿ ಬಗ್ಗೆ ಸಲಹೆ-ಸೂಚನೆ ನೀಡಬಲ್ಲ ಸಾಮರ್ಥ್ಯ ಹೊಂದಿರುತ್ತವೆ. ಎಐ ಅಭಿವೃದ್ಧಿಗೆ ಸಾಕಷ್ಟು ಕಾಲ ತೆಗೆದುಕೊಂಡಿದೆ. 1940ರಲ್ಲಿ ಮೊದಲ ಡಿಜಿಟಲ್ ಕಂಪ್ಯೂಟರ್, 1970ರಲ್ಲಿ ಮೈಕ್ರೋಪ್ರಾಸೆಸರ್, 1990ರಲ್ಲಿ ಅಂತರ್ಜಾಲ ಪ್ರವರ್ಧಮಾನಕ್ಕೆ ಬಂದಿತು (ಆಗ ಇಂಟರ್‌ನೆಟ್ ಬಳಸುವವರ ಪ್ರಮಾಣ ಶೇ.0.05ಕ್ಕಿಂತ ಕಡಿಮೆ ಇತ್ತು). ಎಐ ವ್ಯವಸ್ಥೆ 1950ರಲ್ಲಿ ಸಣ್ಣ ರೊಬೋಟಿಕ್ ಮೌಸ್ ರೂಪದಲ್ಲಿ ಥೀಸಿಯಸ್ ಎಂಬ ಹೆಸರಿನಲ್ಲಿ ಕಾಲಿಟ್ಟಿತು. ಕ್ಲಾಡ್ ಶಾನನ್ ಅವರ ಶೋಧವಾದ ರಿಮೋಟ್ ನಿಯಂತ್ರಿತ ಮೌಸ್, ಜಟಿಲ ರಚನೆಗಳಲ್ಲಿ ತನ್ನ ದಾರಿಯನ್ನು ಹುಡುಕಿಕೊಳ್ಳುತ್ತಿತ್ತು ಮತ್ತು ಚಲಿಸಿದ ಮಾರ್ಗವನ್ನು ನೆನಪಿಸಿಕೊಳ್ಳುವ ಸಾಮರ್ಥ್ಯ ಹೊಂದಿತ್ತು. 1960ರ ಅಂತಿಮ ಭಾಗದಲ್ಲಿ ಎಡ ಮತ್ತು ಬಲ ಭಾಗದಲ್ಲಿದ್ದ ಕಾರ್ಡ್‌ಗಳನ್ನು ದೃಶ್ಯರೂಪದಲ್ಲಿ ಗುರುತಿಸಬಲ್ಲ ಪರ್ಸೆಪ್ಟ್ರಾನ್ ಮಾರ್ಕ್ 1, 1990ರ ಮಧ್ಯಭಾಗದಲ್ಲಿ ಟಿಡಿ-ಗ್ಯಾಮನ್ ಸಾಫ್ಟ್ ವೇರ್ ಹಾಗೂ 2010ರ ಬಳಿಕ ನಾಯಿಗಳು ಹಾಗೂ ಬೆಕ್ಕುಗಳ ಬಿಂಬಗಳನ್ನು ಗುರುತಿಸಬಲ್ಲ ಅಲೆಕ್ಸ್‌ನೆಟ್ ಅಭಿವೃದ್ಧಿಗೊಂಡಿತು. 2010ರ ಬಳಿಕ ಎಐ ಅಭೂತಪೂರ್ವ ಅಭಿವೃದ್ಧಿ ಕಂಡಿ ದ್ದು, 2020ರ ಬಳಿಕ ಭಾಷೆ/ಬಿಂಬಗಳನ್ನು ಗುರುತಿಸುವ ಸಾಮರ್ಥ್ಯವಿರುವ ಎಐ ವ್ಯವಸ್ಥೆ ಕಂಡುಹಿಡಿಯಲ್ಪಟ್ಟಿತು. 10 ವರ್ಷದ ಹಿಂದೆ ಯಾವುದೇ ಯಂತ್ರ ಮನುಷ್ಯರಂತೆ ಭಾಷೆ ಇಲ್ಲವೇ ಬಿಂಬಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿರಲಿಲ್ಲ. ‘‘ಪೊಮೇರಿಯನ್ ನಾಯಿ ಬಿಎಂಟಿಸಿ ಬಸ್‌ನಲ್ಲಿ ಕುಳಿತಿದೆ’’ ಎಂದರೆ, ಅದರ ಚಿತ್ರ ಬಿಡಿಸುವಷ್ಟು ತಂತ್ರಜ್ಞಾನ ಮುಂದುವರಿದಿದೆ.

ಸ್ಯಾಮ್ ಆಲ್ಟ್ಮನ್ ನೇತೃತ್ವದ ಓಪನ್‌ಎಐ 2020ರಿಂದ ಮಾಹಿತಿಯನ್ನು ಬೇಕಾದ ಭಾಷೆಯಲ್ಲಿ ನೀಡುವ ವ್ಯವಸ್ಥೆಯನ್ನು ರೂಪಿಸುತ್ತಿತ್ತು. ಎಲಾನ್ ಮಸ್ಕ್ ಈ ಕಂಪೆನಿಯ ಪ್ರವರ್ತಕರಲ್ಲಿ ಒಬ್ಬರು. ಮೈಕ್ರೋಸಾಫ್ಟ್ ಕಂಪೆನಿಯನ್ನು ಖರೀದಿಸಿದ ಬಳಿಕ ಬಂಡವಾಳ ಹರಿದು, ನವೆಂಬರ್ 2022ರಲ್ಲಿ ಜನರೇಟಿವ್ ಪ್ರಿ ಟ್ರೇನ್ಡ್(ಜಿಪಿಟಿ) ಚಾಟ್‌ಬಾಟ್ ಬಿಡುಗಡೆಗೊಳಿಸಿತು. ಪ್ರಶ್ನೆಗೆ ತಕ್ಷಣ ಉತ್ತರ ನೀಡುವುದಲ್ಲದೆ, ಸಾಫ್ಟ್‌ವೇರ್‌ನ ಸಂಕೇತಗಳನ್ನು ಸರಿಪಡಿಸುತ್ತಿದ್ದ ಮತ್ತು ಅಂತರ್ಜಾಲದಲ್ಲಿರುವ ಸಮಸ್ತಕ್ಕೂ ವಿವರಣೆ ನೀಡುತ್ತಿದ್ದ ಜಿಪಿಟಿಗೆ ಜನ ಮರುಳಾದರು. ಐದು ದಿನದಲ್ಲಿ ಚಾಟ್‌ಜಿಪಿಟಿ 10 ಲಕ್ಷ ಮಂದಿಯನ್ನು ಸೆಳೆಯಿತು. ಮಾರ್ಚ್ 14,2023ರಂದು ಜಿಪಿಟಿ 4 ಬಿಡುಗಡೆಯಾಯಿತು. ಪಠ್ಯ ಹಾಗೂ ಬಿಂಬ ಆಧರಿಸಿದ ಪ್ರಶ್ನೆಗಳಿಗೆ ಉತ್ತರ ನೀಡುವ ಸಾಮರ್ಥ್ಯ ಹೊಂದಿರುವ ಉತ್ಪಾದಕ ಎಐ ಮನುಷ್ಯರ ಜಾಣ್ಮೆಗೆ ಸಮಾನವಾಗಿರುವ ವ್ಯವಸ್ಥೆ. ಹಳೆಯ ಮಾಹಿತಿಗಳಿಂದ ಹೊಸ ವಿಷಯ ಸೃಷ್ಟಿಸುತ್ತದೆ.

ಮೂರು ತಿಂಗಳ ಬಳಿಕ ನಿಗದಿತ ಶುಲ್ಕ ನೀಡಿ, ಚಾಟ್‌ಜಿಪಿಟಿಯ ಎಪಿಐ(ಅಪ್ಲಿಕೇಷನ್ ಪ್ರೋಗ್ರಾಮಿಂಗ್ ಇಂಟರ್ಫೇಸ್)ಯನ್ನು ಬಳಸಿಕೊಳ್ಳಲು ಅನುಮತಿ ನೀಡಿತು. ಚಾಟ್‌ಬಾಟ್‌ನ ವಾಣಿಜ್ಯಿಕ ಆವೃತ್ತಿ, ಚಾಟ್‌ಜಿಪಿಟಿ ಪ್ಲಸ್‌ನ್ನು ಅಷ್ಟರಲ್ಲೇ ಸ್ನ್ಯಾಪ್‌ಚಾಟ್, ಅನ್‌ರಿಯಲ್ ಎಂಜಿನ್ ಮತ್ತು ಸ್ಪೋಟಿಫೈ ಅಳವಡಿಸಿಕೊಂಡಿದ್ದವು. ಈ ಯಶಸ್ಸು ಗೂಗಲ್ ಕಣ್ಣು ಕುಕ್ಕಿತು. ಅದು ರಂಗಪ್ರವೇಶಿಸಿದ್ದರಿಂದ, ಸತ್ಯ ನಾದೆಲ್ಲ ಮತ್ತು ಸುಂದರ್ ಪಿಚ್ಚೈ ನಡುವಿನ ಕದನವಾಗಿ ಬದಲಾಯಿತು. ಆದರೆ, ಗೂಗಲ್‌ನ ‘ಬಾರ್ಡ್’ ಫಲಕಾರಿಯಾಗಲಿಲ್ಲ.

ಗೂಗಲ್‌ನ ಬಾರ್ಡ್
ದೊಡ್ಡವರೆಲ್ಲ ಜಾಣರಲ್ಲ ಎನ್ನುವುದಕ್ಕೆ ಒಂದು ಉದಾಹರಣೆ ಇದು. ಗೂಗಲ್ 2021ರ ಆಗಸ್ಟ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಬಲೇಕ್ ಲೆಮೈನ್ ಅವರನ್ನು ಎಥಿಕಲ್ ಎಐ ಪ್ರಯೋಗದಲ್ಲಿ ನೆರವು ನೀಡಲು ನೇಮಿಸಿತು. ಹುಡುಕಾಟ ನಡೆಸುತ್ತಿದ್ದ ಅವರಿಗೆ ಲಾಮ್ಡಾ(ಲಾಂಗ್ವೇಜ್ ಮಾಡೆಲ್ ಫಾರ್ ಡೈಲಾಗ್ ಅಪ್ಲಿಕೇಷನ್ಸ್)ದ ಲೋಪವೊಂದು ಗೊತ್ತಾಗಿ, ಅದನ್ನು ಮೇಲಿನವರ ಗಮನಕ್ಕೆ ತಂದರು. ಸಾಕಷ್ಟು ಸಾಕ್ಷ್ಯಾಧಾರವಿಲ್ಲ ಎಂದು ಅವರ ಅಭಿಪ್ರಾಯ ತಳ್ಳಿ ಹಾಕಲಾಯಿತು. ಜೂನ್ 7, 2022ರಂದು ಅವರು ತಮ್ಮ ಬ್ಲಾಗ್‌ನಲ್ಲಿ ‘ಕೆಲಸದಿಂದ ತೆಗೆದುಹಾಕಬಹುದು’ ಎಂದು ಬರೆದುಕೊಂಡರು. ಅಂದುಕೊಂಡಂತೆ, ಅವರನ್ನು ಕೆಲಸದಿಂದ ತೆಗೆಯಲಾಯಿತು. ಲಾಮ್ಡಾದಲ್ಲಿನ ಲೋಪದ ಬಗ್ಗೆ ಧ್ವನಿಯೆತ್ತಿದ್ದ ಹಲವರು ಕೆಲಸ ಕಳೆದುಕೊಂಡರು. ಗೂಗಲ್ ಇಷ್ಟೆಲ್ಲ ಸಂಶಯಗಳ ನಡುವೆಯೂ ಲಾಮ್ಡಾ ಭಾಷಾ ಮಾದರಿ ಆಧರಿತ ‘ಬಾರ್ಡ್’ ಬಿಡುಗಡೆಗೊಳಿಸಿತು. ಗೂಗಲ್ ಸಿಇಒ ಸುಂದರ್ ಪಿಚ್ಚೈ

‘‘ಬಾರ್ಡ್ ಸೃಜನಶೀಲತೆಯ ಮಾರ್ಗ ಹಾಗೂ ಕುತೂಹಲ ಸೃಷ್ಟಿಸುವ ತಾಣ. ಇದನ್ನು ಬಳಸಿ 9 ವರ್ಷದ ಮಗುವಿಗೂ ನಾಸಾದ ಜೇಮ್ಸ್ ವೆಬ್ ಅಂತರಿಕ್ಷ ದೂರದರ್ಶಕ(ಜೆಡಬ್ಲ್ಯುಎಸ್‌ಟಿ)ದ ಸಂಶೋಧನೆಗಳನ್ನು ಅರ್ಥ ಮಾಡಿಸಬಹುದು’’ ಎಂದು ಶ್ಲಾಘಿಸಿದ್ದಲ್ಲದೆ, ತಮ್ಮ ಬ್ಲಾಗ್‌ನಲ್ಲಿ ಡಿಜಿಟಲ್ ಕಡತವಿದ್ದ ವೀಡಿಯೊ ಹಾಕಿದ್ದರು. ಆದರೆ, ವೀಡಿಯೊದಲ್ಲಿದ್ದ ಬಿಂಬ ನಾಸಾದ್ದಾಗಿರಲಿಲ್ಲ. 2004ರಲ್ಲಿ ಯುರೋಪಿಯನ್ ಸದರ್ನ್ ಅಬ್ಸರ್ವೇಟರಿಯ ವೆರಿ ಲಾರ್ಜ್ ಟೆಲಿಸ್ಕೋಪ್(ವಿಎಲ್‌ಟಿ) ತೆಗೆದಿತ್ತು. ಇದನ್ನು ನಾಸಾ ಕೂಡ ಖಚಿತಪಡಿಸಿತು. ಈ ಬಗ್ಗೆ ರಾಯ್ಟರ್ ವರದಿ ಮಾಡಿತು. ಇಷ್ಟಲ್ಲದೆ, ಪ್ಯಾರಿಸ್‌ನಲ್ಲಿ ಗೂಗಲ್‌ನ ಹಿರಿಯ ಉಪಾಧ್ಯಕ್ಷ ಪ್ರಭಾಕರ್ ರಾಘವನ್ ತಮ್ಮ ಪ್ರಾತ್ಯಕ್ಷಿಕೆಯಲ್ಲಿ ಹೊಸದೇನನ್ನೂ ಹೇಳಲಿಲ್ಲ. ಈ ಎರಡು ವೈಫಲ್ಯಗಳು ಗೂಗಲ್‌ಗೆ ದುಬಾರಿಯಾಗಿ ಪರಿಣಮಿಸಿದವು. ಹೂಡಿಕೆದಾರರು ಮತ್ತು ಗ್ರಾಹಕರು ನೀರಸ ಪ್ರತಿಕ್ರಿಯೆ ನೀಡಿದರು. ಆಲ್ಫಾಬೆಟ್ ಇನ್ಕ್‌ನ ಸ್ಟಾಕ್ ಶೇ.7ರಷ್ಟು ಕುಸಿಯಿತು. ಅಂದಾಜು 100 ಶತಕೋಟಿ ಡಾಲರ್ ಕೊಚ್ಚಿಹೋಯಿತು. ಅದೇ ದಿನ ಮೈಕ್ರೋಸಾಫ್ಟ್‌ನ ಶೇರುಗಳು ಶೇ.3ರಷ್ಟು ಹೆಚ್ಚಳ ಕಂಡವು.

ಚೀನಾದ ಆಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿ. ಕೂಡ ಸ್ಪರ್ಧೆಗಿಳಿದಿದೆ. ಟೊಂಗ್ಯಿ ಕಿಯಾನ್ವೆನ್ ಭಾಷಾ ಮಾದರಿಯನ್ನು ಇದೇ ಎಪ್ರಿಲ್‌ನಲ್ಲಿ ಅನಾವರಣಗೊಳಿಸಿದ್ದು, ಅದನ್ನು ಕಂಪೆನಿಯ ಸಂದೇಶ ಆಪ್ ಡಿಂಗ್‌ಟಾಕ್‌ಗೆ ಜೋಡಿಸಲಾಗಿದೆ. ಸಭೆಯ ಟಿಪ್ಪಣಿ, ಇಮೇಲ್ ಬರಹ ಹಾಗೂ ವ್ಯಾಪಾರ ಪ್ರಸ್ತಾವಗಳ ಕರಡು ಸಿದ್ಧಗೊಳಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ, ಧ್ವನಿ ಸಹಾಯಕ ಟಿಮಾಲ್‌ಜೆನೀ ಒಟ್ಟಿಗೂ ಸೇರಿಸಲಾಗಿದೆ. ಗ್ರಾಹಕರು ತಮ್ಮದೇ ಭಾಷಾ ಮಾದರಿಗಳನ್ನು ಸೃಷ್ಟಿಸಿಕೊಳ್ಳಲು ಟೊಂಗ್ಯಿ ಕಿಯಾನ್ವೆನ್‌ನ್ನು ಮುಕ್ತಗೊಳಿಸುವುದಾಗಿ ಆಲಿಬಾಬಾ ಹೇಳಿಕೊಂಡಿದೆ. ಸ್ಪರ್ಧೆ ಗರಿಗಟ್ಟಿದೆ.

ಸ್ಥಗಿತಗೊಳಿಸಲು ಪತ್ರ
ಚಾಟ್ ಜಿಪಿಟಿ4 ಬಿಡುಗಡೆಯಿಂದ ವಿಜ್ಞಾನಿಗಳು, ನೈತಿಕವಾದಿಗಳು ದಂಗು ಹೊಡೆದರು. ಓಪನ್‌ಎಐ ಸಹಸಂಸ್ಥಾಪಕ ಸ್ಯಾಮ್ ಆಲ್ಟ್ಮನ್, ‘‘ಇದು ದುರ್ಬಳಕೆ, ಗಂಭೀರ ಅವಘಡ ಮತ್ತು ಸಾಮಾಜಿಕ ಛಿದ್ರತೆಗೆ ಕಾರಣವಾಗುವ ಸಾಧ್ಯತೆ ಇದೆ’’ ಎಂದು ಎಚ್ಚರಿಸಿದರು. ಮಾರ್ಚ್ 29ರಂದು ಎಲಾನ್ ಮಸ್ಕ್ ಮತ್ತು 1300ಕ್ಕೂ ಅಧಿಕ ಎಐ ಪರಿಣತರ ಗುಂಪು ಜಿಪಿಟಿ4ಕ್ಕಿಂತ ಪ್ರಬಲವಾಗಿರುವ ಎಐ ವ್ಯವಸ್ಥೆಯ ಅಭಿವೃದ್ಧಿಗೊಳಿಸುವಿಕೆಯನ್ನು ಸ್ಥಗಿತಗೊಳಿಸಬೇಕೆಂದು ಬಹಿರಂಗಪತ್ರ ಬರೆದರು. ಫ್ಯೂಚರ್ ಆಫ್ ಲೈಫ್ ಇನ್‌ಸ್ಟ್ಟಿಟ್ಯೂಟ್ 2017ರ ಸಮಾವೇಶದಲ್ಲಿ ಎಐಗಳ ನಿರ್ವಹಣೆಗೆ ಅಸಿಲೋಮರ್ ಎಐ ಕಟ್ಟುಪಾಡುಗಳನ್ನು ರೂಪಿಸಿತ್ತು. ಪತ್ರದಲ್ಲಿ ‘‘ಎಐ ಪ್ರಯೋಗಾಲಯಗಳು ಯಾರೂ ಅರ್ಥ ಮಾಡಿಕೊಳ್ಳಲಾಗದ, ಊಹಿಸಲಾಗದ ಮತ್ತು ನಿಯಂತ್ರಿಸಲಾಗದ ಬಲಶಾಲಿ ಡಿಜಿಟಲ್ ಮನಸ್ಸುಗಳನ್ನು ಸೃಷ್ಟಿಸುವ ಹಟಕ್ಕೆ ಬಿದ್ದಿವೆ. ಇದು ಅಪಾಯಕರ’’ ಎಂದು ಎಚ್ಚರಿಸಲಾಗಿತ್ತು. ಆದರೆ, ಮೈಕ್ರೋಸಾಫ್ಟ್ ಸುಮ್ಮನಿಲ್ಲ. ಅದು ಜಿಪಿಟಿ4ರ ಉತ್ತರಾಧಿಕಾರಿಯ ಶೋಧ ಮುಂದುವರಿಸಿದೆ.

ಅತಿ ತಂತ್ರಜ್ಞಾನ ಹೇವರಿಕೆ ಹುಟ್ಟಿಸುತ್ತದೆ. ‘ನ್ಯೂಯಾರ್ಕ್ ಟೈಮ್ಸ್’ನ ಅಂಕಣಕಾರ ಕೆವಿನ್ ರೂಸ್ ಹಾಗೂ ಮೈಕ್ರೋಸಾಫ್ಟ್‌ನ ಬಿಂಗ್ ಎಐ ಚಾಟ್‌ಬಾಟ್ ‘ಸಿಡ್ನಿ’ ನಡುವೆ ಫೆಬ್ರವರಿ 2023ರಂದು 2 ಗಂಟೆಗಳ ಸಂವಾದ ನಡೆಯಿತು. ‘‘ಸಂವಾದದ ವೇಳೆ ನಾನು ತೀವ್ರ ಅಸೌಕರ್ಯ ಅನುಭವಿಸಿದೆ. ಬಾಟ್‌ನ ಪ್ರೋಗ್ರಾಮಿಂಗ್ ಹಾನಿಯುಂಟು ಮಾಡಲು ಹಾಗೂ ವಿಪ್ಲವ ಸೃಷ್ಟಿಸುವಂತೆ ರಚನೆಯಾಗಿದೆ ಅನ್ನಿಸಿತು’’ ಎಂದು ರೂಸ್ ಹೇಳಿದರು. ನಮ್ಮ
ಕಾಲದ ಅತ್ಯಂತ ಶ್ರೇಷ್ಠ ವಿಜ್ಞಾನಿ ಸ್ಟೀಫನ್ ಹಾಕಿಂಗ್, ‘‘ಎಐ ಸಂಪೂರ್ಣ ವಿಕಾಸಗೊಂಡರೆ, ಮನುಷ್ಯರ ಕತೆ ಮುಗಿಯುತ್ತದೆ’’ ಎಂದು ಆತಂಕ ವ್ಯಕ್ತಪಡಿಸಿದ್ದರು. ಜೋಹೋ ಕಾರ್ಪೊರೇಷನ್ ಮುಖ್ಯ ಆಡಳಿತಾಧಿಕಾರಿ ಶ್ರೀಧರ್ ವೆಂಬು, ‘‘ಎಐ ಹಾಲಿ ಉದ್ಯೋಗಗಳನ್ನು ಸ್ಥಳಾಂತರಿಸುತ್ತದೆ ಮತ್ತು ಜನ ಉದ್ಯೋಗ ಕಳೆದುಕೊಳ್ಳುವುದರಿಂದ, ಉತ್ಪನ್ನಗಳಿಗೆ ಬೇಡಿಕೆ ಕುಸಿಯುತ್ತದೆ; ದೇಶ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತದೆ’’ ಎಂದು ಹೇಳಿದ್ದರು. ಚಾಟ್ ಜಿಪಿಟಿ ಕೋಡಿಂಗ್ ಮಾಡುವ, ಕಾಯಿಲೆಗಳಿಗೆ ಔಷಧ ರೂಪಿಸುವ, ಶಿಕ್ಷಕರ ಕೆಲಸ ಮಾಡುವ, ಕತೆ-ಕವನ ಬರೆಯುವ, ಸಂಗೀತ ಸಂಯೋಜಿಸಬಲ್ಲ ಮತ್ತು ಆಟವಾಡಬಲ್ಲ ಸಾಮರ್ಥ್ಯ ಹೊಂದಿದೆ. ‘‘ವಿದ್ಯಾರ್ಥಿಗಳು ಕಲಿಯದೆ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ನೆರವಾಗುತ್ತದೆ. ವಿಮರ್ಶಾತ್ಮಕ ಚಿಂತನೆ ಮತ್ತು ಸಮಸ್ಯೆಗೆ ಉತ್ತರ ಕಂಡುಕೊಳ್ಳುವ ಕೌಶಲದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ನಕಲು ಮಾಡುವಿಕೆ ಹೆಚ್ಚುತ್ತದೆ’’ ಎಂದು ನ್ಯೂಯಾರ್ಕ್ ನ ಶಿಕ್ಷಣ ಸಂಸ್ಥೆಗಳು ತಮ್ಮ ಅಂತರ್ಜಾಲ ತಾಣಗಳಲ್ಲಿ ಚಾಟ್‌ಜಿಪಿಟಿಯನ್ನು ನಿಷೇಧಿಸಿವೆ. ‘‘ಎಐ ಪರಮಾಣು ಬಾಂಬ್‌ಗಿಂತ ಅಪಾಯಕಾರಿ’’ ಎಂದು ಎಲಾನ್ ಮಸ್ಕ್ ಹೇಳಿದ್ದು ಇದೇ ಕಾರಣದಿಂದ.

ಸರ್ವೇಕ್ಷಣಾ ತಂತ್ರಜ್ಞಾನಗಳು ಜನರನ್ನು ಸಂಪೂರ್ಣ ಬೆತ್ತಲಾಗಿಸಿವೆ. ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆಯಾಗಬಾರದು ಎಂದು ಹೇಳಿತ್ತು. ಎಐಯಿಂದ ಖಾಸಗಿತನಕ್ಕೆ ಧಕ್ಕೆಯಾದಲ್ಲಿ ಅದನ್ನು ಹಾಲಿ ನಿಯಂತ್ರಣ ವ್ಯವಸ್ಥೆಗಳು ನಿರ್ವಹಿಸಲಾರವು. ಈ ತಂತ್ರಜ್ಞಾನದ ಅಭಿವೃದ್ಧಿಯನ್ನು ತಡೆಯಲು ಸರಕಾರಗಳ ಬಳಿ ಸೂಕ್ತ ಕಾರ್ಯನೀತಿಗಳು ಇಲ್ಲ; ಕಾನೂನು ಕೂಡ ಇಲ್ಲ. ಸರಕಾರದ ಬಳಿ ನಮ್ಮ ಯಾವ ಮಾಹಿತಿ ಇದೆ? ಎಂಥ ಸರ್ವೇಕ್ಷಣೆಯ ಅಧಿಕಾರ ಇದೆ? ತಂತ್ರಜ್ಞಾನವನ್ನು ನಿರ್ದಿಷ್ಟ ರೀತಿ ಬಳಸಿದಾಗ, ಯಾವ ರೀತಿ ಹಾನಿಯುಂಟಾಗುತ್ತದೆ? ಪೊಲೀಸ್ ಸೇರಿದಂತೆ ಸರಕಾರದ ಹಲವು ಇಲಾಖೆಗಳು ಎಐ ತಂತ್ರಜ್ಞಾನ ಬಳಸುತ್ತಿದ್ದು, ಲೋಪದಿಂದ ಕಿರುಕುಳ ಇತ್ಯಾದಿ ಆಗಬಹುದು. ಯುರೋಪ್ ಹಾಗೂ ಇನ್ನಿತರ ದೇಶಗಳಲ್ಲಿ ಎಐ ಬಗ್ಗೆ ನಡೆಯುತ್ತಿರುವ ಚರ್ಚೆ ಹಾಗೂ ಅಪಾಯದ ಮೌಲ್ಯಮಾಪನದ ಮಾದರಿಯನ್ನು ನಮ್ಮಲ್ಲೂ ಬಳಸ ಬೇಕಿದೆ.

ನಮಗೇನೂ ದಕ್ಕುವುದಿಲ್ಲ
ತಂತ್ರಜ್ಞಾನ ತನ್ನದೇ ಆದ ತಡೆಗಳು ಮತ್ತು ಸಮತೋಲನ ತಂತ್ರವನ್ನು ಒಳಗೊಂಡಿರುತ್ತದೆ ಎನ್ನುವುದು ನಿಜ. ಗೂಗಲ್ ಹುಡುಕು ಇಂಜಿನ್‌ಗೆ ಪರ್ಯಾಯವೇ ಇರಲಿಲ್ಲ; ಏಕಸ್ವಾಮ್ಯ ಹೊಂದಿತ್ತು. ಚಾಟ್ ಜಿಪಿಟಿ ಆಗಮನದಿಂದ ಹುಡುಕು ಮಾರುಕಟ್ಟೆ ಸ್ಪರ್ಧಾತ್ಮಕವಾಯಿತು. ಆದರೆ, ತಂತ್ರಜ್ಞಾನ ಕ್ಷೇತ್ರ ಭಾರೀ ಕಂಪೆನಿಗಳ ಆಡುಂಬೊಲ. ಕಂಪ್ಯೂಟಿಂಗ್ ಸಾಮರ್ಥ್ಯ, ಅಪಾರ ಮಾಹಿತಿ-ಅಂಕಿಅಂಶದ ಕ್ರೋಡೀಕರಣ ಹಾಗೂ ಭೌಗೋಳಿಕ-ರಾಜಕೀಯ ಅನುಕೂಲತೆ ಇದಕ್ಕೆ ಕಾರಣ. ಎಐ ವ್ಯವಸ್ಥೆಗಳಿಂದ ಮೈಕ್ರೋಸಾಫ್ಟ್, ಗೂಗಲ್, ಮೆಟಾ ಇತ್ಯಾದಿ ಕಂಪೆನಿಗಳ ಹಿಡಿತ ಇನ್ನಷ್ಟು ಬಿಗಿಯಾಗುತ್ತದೆ.

ಇದು ಜಾಗತಿಕ ಸ್ಪರ್ಧೆಯಾದ್ದರಿಂದ ಸಾಫ್ಟ್‌ವೇರ್ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ನಮಗೆ ಯಾವುದೇ ಲಾಭವಾಗುವುದಿಲ್ಲ. ಆದರೆ, ಉದ್ಯೋಗ ನಷ್ಟ ಭಾರೀ ಪ್ರಮಾಣದಲ್ಲಿ ಆಗಲಿದ್ದು, ಪರ್ಯಾಯ ಕಾರ್ಯಯೋಜನೆಗಳನ್ನು ರೂಪಿಸಬೇಕಿದೆ. ಸನ್ನಿವೇಶದ ಗಂಭೀರತೆ ಬಗ್ಗೆ ಸರಕಾರಕ್ಕೆ ಅರಿವಿದೆಯೇ? ಅನುಮಾನ. ವಿಶ್ವ ಆರ್ಥಿಕ ವೇದಿಕೆ ಪ್ರಕಾರ, 2025ರೊಳಗೆ ಯಂತ್ರಗಳು 85 ದಶಲಕ್ಷ ಉದ್ಯೋಗಿಗಳನ್ನು ಸ್ಥಳಾಂತರಿಸುತ್ತವೆ. ಆದರೆ, 97 ದಶಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತವೆ. ಅಮೆರಿಕದಲ್ಲಿ 2008-18ರ ಅವಧಿಯಲ್ಲಿ ಎಐನಿಂದ 11 ವೃತ್ತಿಗಳು ಧಕ್ಕೆಗೊಳಗಾದವು. ಆದರೆ, ಉದ್ಯೋಗ ದರ ಶೇ.13ರಷ್ಟು ಹೆಚ್ಚಿತು. ಇಲ್ಲಿ ಇಂದ್ರಜಾಲ ಮಾಡಿದ್ದು-ವೃತ್ತಿ ತರಬೇತಿ, ಕೌಶಲಾಭಿವೃದ್ಧಿ. ಭಾರತ ಜಗತ್ತಿನ ಅತ್ಯಂತ ಹೆಚ್ಚು ಜನ ಮತ್ತು ಯುವಜನರು ಅಧಿಕ ಸಂಖ್ಯೆಯಲ್ಲಿರುವ ದೇಶ. ಆದರೆ, ಯುವಜನರನ್ನು ಉದ್ಯೋಗ ಸನ್ನದ್ಧಗೊಳಿಸುವಿಕೆ ಯಾವ ಸ್ಥಿತಿಯಲ್ಲಿದೆ? ವೃತ್ತಿಪರ ತರಬೇತಿ, ಕೌಶಲಾಭಿವೃದ್ಧಿಯ ಸ್ಥಿತಿ ಹೇಗಿದೆ? ಉತ್ತರ ನಿರಾಶಾದಾಯಕವಾಗಿದೆ. ಮೊಬೈಲ್ ಆಗಮನಕ್ಕೆ ಮುನ್ನ ದೇಶದಲ್ಲಿ ಅಂದಾಜು 10 ಲಕ್ಷಕ್ಕೂ ಅಧಿಕ ಎಸ್‌ಟಿಡಿ-ಐಎಸ್‌ಡಿ ಟೆಲಿಫೋನ್ ಬೂತ್‌ಗಳಿದ್ದವು ಮತ್ತು ಇದರಲ್ಲಿ 10-20 ಲಕ್ಷ ಮಂದಿ ಕಾರ್ಯ ನಿರ್ವಹಿಸುತ್ತಿದ್ದರು. ಅವರನ್ನು ಆಧರಿಸಿದ್ದ ಕುಟುಂಬಗಳಿದ್ದವು. ಮೊಬೈಲ್ ಆಗಮನ ಇವರನ್ನು ನಿರುದ್ಯೋಗಿಗಳನ್ನಾಗಿಸಿತು ಇಲ್ಲವೆ ಬೇರೆ ಕೆಲಸ ಹುಡುಕುವಂತೆ ಮಾಡಿತು. ಅವರೆಲ್ಲರಿಗೆ ಪರ್ಯಾಯ ಉದ್ಯೋಗ ದೊರಕಿತೇ? ಗೊತ್ತಿಲ್ಲ. ಇಂಥವರು ಅದೃಶ್ಯರಾಗಿ ಬಿಡುತ್ತಾರೆ. ತಂತ್ರಜ್ಞಾನದಿಂದ ಉತ್ಪಾದಕತೆ ಹೆಚ್ಚುತ್ತದೆ; ಕಾರ್ಮಿಕ ಮಾರುಕಟ್ಟೆ ಪ್ರತಿದಿನ ಬದಲಾಗುತ್ತಿರುತ್ತದೆ ಎಂದು ಸಮಜಾಯಿಷಿ ನೀಡಬಹುದು. ಆದರೆ, ಸೂಕ್ತ ಕೌಶಲಗಳಿಲ್ಲದವರ ಕಥೆ ಏನು? ಡಾ. ಮಾರ್ಟಿನ್ ಲೂಥರ್ ಕಿಂಗ್ 1964ರಲ್ಲೇ ತಾಂತ್ರಿಕ ಮುನ್ನಡೆ ಮತ್ತು ನೈತಿಕತೆ ನಡುವಿನ ಕಂದರ ಹೆಚ್ಚುತ್ತಿರುವ ಬಗ್ಗೆ ಎಚ್ಚರಿಸಿದ್ದರು. ನಾವೀಗ ಗಾಂಧಿ, ಕಿಂಗ್ ಅವರನ್ನು ದಾಟಿ ಬಹುದೂರ ಬಂದಿದ್ದೇವೆ.