×
Ad

ರಾಜ್ಯದಲ್ಲಿ ಬಿಸಿಗಾಳಿ: ಆರೋಗ್ಯವಾಗಿರಲು ಸಾಕಷ್ಟು ನೀರು ಕುಡಿಯಿರಿ...

ಸಲಹೆ- ಸೂಚನೆಗಳನ್ನು ಪ್ರಕಟಿಸಿದ ರಾಜ್ಯ ಸರಕಾರ

Update: 2023-04-28 10:50 IST

ಬೆಂಗಳೂರು, ಎ.28: ರಾಜ್ಯದಲ್ಲಿ ಉಂಟಾಗಿರುವ ಬಿಸಿಗಾಳಿಯಿಂದ ಜನರ ಆರೋಗ್ಯ ಹದಗೆಡುವ ಸಾಧ್ಯತೆಯಿದ್ದು, ಈ ಅನಾರೋಗ್ಯವನ್ನು ತಡೆಗಟ್ಟಲು ರಾಜ್ಯ ಸರಕಾರವು ಸಲಹೆ ಸೂಚನೆಗಳನ್ನು ಪ್ರಕಟಿಸಿದೆ. 

ಸಾಧ್ಯವಾದಷ್ಟು ಮಟ್ಟಿಗೆ ವಿಶೇಷವಾಗಿ ಗರಿಷ್ಟ ತಾಪಮಾನದ ಅವಧಿಯಲ್ಲಿ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಬೇಕು. ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ನೀರು ಕುಡಿಯಬೇಕು. ಹಗುರ, ತಿಳಿ ಬಣ್ಣದ, ಸಡಿಲವಾದ ಮತ್ತು ಹತ್ತಿ ಬಟ್ಟೆಗಳನ್ನು ಧರಿಸಬೇಕು. ಬಿಸಿಲಿನಲ್ಲಿ ಹೋಗುವಾಗ ರಕ್ಷಣೆಗಾಗಿ ಕನ್ನಡಕಗಳು, ಛತ್ರಿ, ಟೋಪಿ, ಬೂಟು ಅಥವಾ ಚಪ್ಪಲಿಗಳನ್ನು ಬಳಸಬೇಕು ಎಂದು ತಿಳಿಸಿದೆ. 

ಮಧ್ಯಾಹ್ನ 12ರಿಂದ 3ರ ವರೆಗೆ ಹೊರಗೆ ಕೆಲಸ ಮಾಡುವಾಗ ಹೆಚ್ಚು ಶ್ರಮದಾಯಕ ಚಟುವಟಿಕೆಗಳನ್ನು ಮಾಡಬಾರದು. ಪ್ರಯಾಣ ಮಾಡುವಾಗ ನೀರನ್ನು ಜೊತೆಯಲ್ಲಿ ಒಯ್ಯಬೇಕು. ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೋನೇಟೆಡ್ ತಂಪು ಪಾನೀಯಗಳನ್ನು ತಪ್ಪಿಸುವುದು. ಸಾಧ್ಯವಾಡಷ್ಟು ಬಿಸಿ ಆಹಾರವನ್ನು ಸೇವಿಸಬೇಕು ಎಂದು ತಿಳಿಸಿದೆ. 

ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ, ಕುಡಿಯಲು ಅವುಗಳಿಗೆ ಸಾಕಷ್ಟು ನೀರನ್ನು ನೀಡಬೇಕು. ಮನೆಯನ್ನು ತಂಪಾಗಿರಿಸಲು ಪರದೆಗಳು, ಶಟರ್‍ಗಳು ಅಥವಾ ಸನ್‍ಶೇಡ್‍ಗಳನ್ನು ಬಳಸಬೇಕು. ನಿಂಬೆ ನೀರು, ಮಜ್ಜಿಗೆ ಮುಂತಾದ ಮನೆಯಲ್ಲಿ ತಯಾರಿಸಿದ ಪಾನೀಯಗಳು ಮತ್ತು ಓಆರ್‍ಎಸ್ ಅನ್ನು ಬಳಸಬೇಕು ಎಂದು ಸೂಚಿಸಿದೆ.

Similar News