×
Ad

ಊಹಾತ್ಮಕ ಸಾಕ್ಷಿಗಳನ್ನು ಪರಿಗಣಿಸಿ ಆರೋಪಿಗೆ ಶಿಕ್ಷೆ ವಿಧಿಸಲಾಗದು: ಹೈಕೋರ್ಟ್

ಆರೋಪಿಗಳಿಗೆ ವಿಧಿಸಿದ್ದ ಶಿಕ್ಷೆ ರದ್ದುಪಡಿಸಿ ಆದೇಶಿಸಿದ ನ್ಯಾಯಾಲಯ

Update: 2023-04-28 19:12 IST

ಬೆಂಗಳೂರು, ಎ.28: ‘ಊಹಾತ್ಮಕ ಸಾಕ್ಷಿಗಳನ್ನು ಪರಿಗಣನೆಗೆ ತೆಗೆದುಕೊಂಡು ಯಾವುದೇ ಆರೋಪಿಗೆ ಶಿಕ್ಷೆ ವಿಧಿಸಲಾಗದು’ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ‘ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿ ಲೈಂಗಿಕ ಕ್ರಿಯೆ ನಡೆಸಿದ್ದ ಇಬ್ಬರು ಆರೋಪಿಗಳಿಗೆ ವಿಧಿಸಿದ್ದ ಶಿಕ್ಷೆಯನ್ನು ರದ್ದುಪಡಿಸಿ’ ಆದೇಶಿಸಿದೆ.  

ಅಪ್ರಾಪ್ತೆಯನ್ನು ಅಪಹರಣ ಮಾಡಿ ಒತ್ತಾಯ ಪೂರ್ವಕವಾಗಿ ಲೈಂಗಿಕ ಕ್ರಿಯೆ ನಡೆಸಿದ್ದ ಆರೋಪದಲ್ಲಿ 7 ವರ್ಷ ಕಾರಾಗೃಹ ಶಿಕ್ಷೆ ಮತ್ತು ತಲಾ 20 ಸಾವಿರ ರೂ.ಗಳ ದಂಡಕ್ಕೆ ಗುರಿಯಾಗಿದ್ದ ಇಬ್ಬರು ಆರೋಪಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.

ಅಲ್ಲದೇ, ಪ್ರಕರಣದಲ್ಲಿ ಸಂತ್ರಸ್ತೆ, ಆಕೆಯ ತಂದೆ ಮತ್ತು ತಾಯಿ ತಮ್ಮ ಮಗಳ ಮೇಲೆ ಯಾವುದೇ ಲೈಂಗಿಕ ಕ್ರಿಯೆ ನಡೆಸಿಲ್ಲ ಎಂಬುದಾಗಿ ಹೇಳಿದ್ದಾರೆ. ಪೋಷಕರು ಸೇರಿದಂತೆ ಎಲ್ಲ ಸಾಕ್ಷಿಗಳು ಪ್ರಾಸಿಕ್ಯೂಷನ್‍ಗೆ ವಿರುದ್ಧವಾಗಿ ಸಾಕ್ಷ್ಯ ನುಡಿದಿದ್ದಾರೆ. 

ಈ ಪ್ರಕರಣದಲ್ಲಿ ತನಿಖಾಧಿಕಾರಿಗಳು ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ವಿಫಲವಾಗಿದ್ದಾರೆ. ಹೀಗಾಗಿ ಸಂಶಯವಿರುವಂತಹ ಸಾಕ್ಷ್ಯಗಳನ್ನು ಪರಿಗಣಿಸಿ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಅರ್ಜಿದಾರರ ಪರ ವಕೀಲರು, ತನಿಖಾಧಿಕಾರಿಗಳು ಸಂತ್ರಸ್ತೆಯ ವಯಸ್ಸನ್ನು ಪತ್ತೆ ಹಚ್ಚುವುದಕ್ಕಾಗಿ ಈವರೆಗೂ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ. ಜತೆಗೆ, ಒತ್ತಾಯ ಪೂರ್ವಕವಾಗಿ ಲೈಂಗಿಕ ಕ್ರಿಯೆ ನಡೆಸಿರುವ ಸಂಬಂಧ ಯಾವುದೇ ವೈದ್ಯಕೀಯ ದಾಖಲೆಗಳನ್ನು ಒದಗಿಸಿಲ್ಲ. ಹೀಗಾಗಿ, ವಿಚಾರಣಾ ನ್ಯಾಯಾಲಯ ಆರೋಪಿಗಳ ವಿರುದ್ಧ ವಿಧಿಸಿರುವ ಶಿಕ್ಷೆಯ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿದ್ದರು. 

Similar News