ಅಥಣಿ ಕ್ಷೇತ್ರದ ಆಡಳಿತ ಗೋಕಾಕ್ ನಿಂದ ನಡೆಯಲ್ಲ: ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮಣ ಸವದಿ ವಾಗ್ದಾಳಿ

Update: 2023-04-28 15:39 GMT

ಬೆಳಗಾವಿ, ಎ. 28: ‘ಜಿಲ್ಲೆಯ ಅಥಣಿ ವಿಧಾನಸಭಾ ಕ್ಷೇತ್ರದ ಜನತೆ ಸ್ವಾಭಿಮಾನಿಗಳು. ಅಥಣಿ ಕ್ಷೇತ್ರದ ಆಡಳಿತವನ್ನು ಗೋಕಾಕ ಕ್ಷೇತ್ರದಿಂದ ನಡೆಯಲು ಬಿಡುವಷ್ಟು ದಡ್ಡರಿಲ್ಲ' ಎಂದು ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಇಂದಿಲ್ಲಿ, ಗೋಕಾಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ಕ್ಷೇತ್ರದ ಗ್ರಾಮವೊಂದರಲ್ಲಿ ಮತಯಾಚನೆ ಸಂದರ್ಭದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸೋಲಿನ ಭೀತಿ ಎದುರಾಗಿದ್ದರಿಂದ ಹತಾಶೆಗೊಳಗಾಗಿ ಅನಾಗರಿಕರಂತೆ ಮಾತನಾಡುತ್ತಿರುವ ರಮೇಶ ಜಾರಕಿಹೊಳಿಗೆ ಅದೇ ಭಾಷೆಯಲ್ಲಿ ಉತ್ತರ ಕೊಡುವಟ್ಟು ಸಾಮರ್ಥ್ಯವಿದೆ. ಆದರೂ ಈ ನೆಲದ ಸಂತರ ಸಂಸ್ಕಾರದ ನೆರಳಲ್ಲಿ ಬೆಳೆದ ನಮಗೂ ಅವರಿಗೂ ಇರುವ ವ್ಯತ್ಯಾಸವಿದೆ’ ಎಂದು ತಿರುಗೇಟು ನೀಡಿದರು.

‘ಕ್ಷೇತ್ರದ ಜನತೆ ಈ ಬಗ್ಗೆ ಆಡಿಕೊಳ್ಳಬಾರದು. ಹೀಗಾಗಿ ನಮ್ಮ ಪಕ್ಷದ ಯಾರೊಬ್ಬರೂ ಅವರ ಬಗ್ಗೆ ಕೆಟ್ಟದಾಗಿ ಮಾತಾಡಿ ಬಾಯಿಯನ್ನು ಬಚ್ಚಲು ಮಾಡಿಕೊಳ್ಳಬೇಡಿ' ಎಂದು ಅವರು, ಮತದಾರರನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಂಡಂತೆ ಅವರ ವರ್ತನೆ ಇದೆ. ದುಡ್ಡಿನಿಂದ ಮತ ಖರೀದಿ ಮಾಡಬಹುದು ಎಂದು ಕೊಂಡಿದ್ದರೆ, ಅದು ಮೂರ್ಖತನ’ ಎಂದು ಅವರು ತಿಳಿಸಿದರು.

‘ಅಥಣಿ ಕ್ಷೇತ್ರದ ಬರದ ಭೂಮಿಗೆ ಹಸಿರು ಸೀರೆ ಉಡಿಸಿ ರೈತರ ಮೊಗದಲ್ಲಿ ನಗೆ ನೀಡಿದ್ದು ಲಕ್ಷ್ಮಣ ಸವದಿ. ಅಥಣಿಯಲ್ಲಿ ಅಪ್ಪ-ಮಗ ಬಿಟ್ಟರೆ ಮತ್ಯಾರಿಗೂ ಅವಕಾಶವೇ ಬೇಡವೇ ಎಂದು ಪ್ರಶ್ನಿಸುವ ರಮೇಶ್ ಜಾರಕಿಹೊಳಿ, ಮೊದಲು ನಿಮ್ಮ ಕುಟುಂಬ ಬಿಟ್ಟು ಬೆರೆಯವರಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟು ಮೊದಲು ಮಾದರಿಯಾಗಿ’ ಎಂದು ಲಕ್ಷ್ಮಣ ಸವದಿ ವಾಗ್ದಾಳಿ ನಡೆಸಿದರು.

Similar News