×
Ad

ಮಗುವನ್ನು ಪತಿಯ ಸುಪರ್ದಿಗೆ ನೀಡದ ಪತ್ನಿ: ಹೈಕೋರ್ಟ್ ನಿಂದ ಜಾಮೀನು ರಹಿತ ವಾರಂಟ್

Update: 2023-04-28 22:25 IST

ಬೆಂಗಳೂರು, ಎ.28: ಪ್ರಿಯಕರ ಜತೆಗಿರಲು ಹೆಚ್ಚು ಪ್ರಾಶಸ್ತ್ಯ ನೀಡುವುದನ್ನು ಪರಿಗಣಿಸಿ ಮಗನನ್ನು ಪತಿಯ ಸುಪರ್ದಿಗೆ ಒಪ್ಪಿಸಲು ಹೊರಡಿಸಿದ್ದ ಆದೇಶ ಪಾಲಿಸದ ಮಹಿಳೆಯೊಬ್ಬರ ವಿರುದ್ಧ ಹೈಕೋರ್ಟ್ ಜಾಮೀನು ರಹಿತ ವಾರಂಟ್ ಜಾರಿಮಾಡಿದೆ. 

ಕೋರ್ಟ್ ಆದೇಶ ಉಲ್ಲಂಘಿಸಿರುವ ಧೋರಣೆ ಆಕ್ಷೇಪಿಸಿ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಅಪ್ರಾಪ್ತ ಮಗುವನ್ನು ಅರ್ಜಿದಾರ ಪತಿಯ ಸುಪರ್ದಿಗೆ ನೀಡುವಂತೆ 2023ರ ಜ.31ರಂದು ನೀಡಿದ ಆದೇಶವನ್ನು ಪತ್ನಿ ಪಾಲಿಸಿಲ್ಲ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು ಅರ್ಜಿಯ ಮುಂದಿನ ವಿಚಾರಣೆ ವೇಳೆ ಅರ್ಜಿದಾರರ ಪತ್ನಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ಈ ವೇಳೆ ಮಗುವೂ ಜೊತೆಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಿದೆ. 

ಅರ್ಜಿದಾರರ ಪತ್ನಿ ಬೇರೆ ವ್ಯಕ್ತಿಯೊಂದಿಗಿನ ಅಕ್ರಮ ಸಂಬಂಧ ಹೊಂದಿರುವ ವಿಚಾರ ತಿಳಿದ ಹೈಕೋರ್ಟ್, ಮಗನ ಯೋಗಕ್ಷೇಮಕ್ಕಿಂತ ಅಕ್ರಮ ಸಂಬಂಧಕ್ಕೆ ಮಹಿಳೆಯು ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದಾರೆ. ಮಗುವಿನ ನೆಮ್ಮದಿ ಮತ್ತು ಭಾವನಾತ್ಮಕತೆಯನ್ನಷ್ಟೇ ಪರಿಗಣಿಸಬಾರದು. ಮಗು ಬೆಳೆಯುವ ವಾತಾವರಣ ಮತ್ತು ಸುತ್ತಲಿನ ಪರಿಸ್ಥಿತಿ ಕಂಡು ಕಲಿಯಬಹುದಾದ ನೈತಿಕ ಮೌಲ್ಯ ಮತ್ತು ಮಗುವಿಗೆ ಸಿಗಬಹುದಾದ ಆರೈಕೆ ಮತ್ತು ವಾತ್ಸಲ್ಯವನ್ನೂ ಪರಿಗಣಿಸಬೇಕಾಗುತ್ತದೆ ಎಂದು ತಿಳಿಸಿದ್ದ ಹೈಕೋರ್ಟ್, ಮಗುವನ್ನು ಪತಿಯ ಸುಪರ್ದಿಗೆ ನೀಡುವಂತೆ ಆದೇಶಿಸಿತ್ತು. 

Similar News