ಅಣ್ಣಾಮಲೈ ಕುಮ್ಮಕ್ಕಿನಿಂದ ಶಿವಮೊಗ್ಗದಲ್ಲಿ ತಮಿಳು ನಾಡಗೀತೆ: ಕರವೇ
ಬೆಂಗಳೂರು, ಎ.28: ಶಿವಮೊಗ್ಗದಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿ ಅಣ್ಣಾಮಲೈ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ತಮಿಳರನ್ನು ಓಲೈಸುವ ದೃಷ್ಟಿಯಿಂದ ತಮಿಳು ನಾಡಗೀತೆ ಹಾಡಿಸಿರುವುದು ಅಕ್ಷಮ್ಯವಾಗಿದ್ದು, ಅಣ್ಣಾಮಲೈ ಕುಮ್ಮಕ್ಕಿನಿಂದಲೇ ಈ ಘಟನೆ ನಡೆದಿರುವುದು ಸ್ಪಷ್ಟ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಖಂಡನೆ ವ್ಯಕ್ತಪಡಿಸಿದೆ.
ಶುಕ್ರವಾರ ಈ ಸಂಬಂಧ ಪ್ರಕಟನೆ ನೀಡಿರುವ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ‘ಸಮಾಧಾನದ ವಿಷಯವೆಂದರೆ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಸಕಾಲಿಕವಾಗಿ ಮಧ್ಯಪ್ರವೇಶ ಮಾಡಿ ತಮಿಳು ನಾಡಗೀತೆ ನಿಲ್ಲಿಸಿದ್ದಾರೆ. ಈ ವೇಳೆ ಕರ್ನಾಟಕದ ನಾಡಗೀತೆ ಹಾಡಲು ಕರೆದರೆ ಯಾರೂ ಮುಂದೆ ಬಂದಿಲ್ಲ. ಇದರಿಂದ ಬಿಜೆಪಿಯವರು ನಾಡಗೀತೆಗೆ ಎಷ್ಟು ಗೌರವ ಕೊಡುತ್ತಾರೆ ಎಂಬುದು ಅರ್ಥವಾಗುತ್ತದೆ ಎಂದು ಟೀಕಿಸಿದ್ದಾರೆ.
ಈ ಚುನಾವಣೆಯಲ್ಲಿ ಕನ್ನಡೇತರನ್ನು ಓಲೈಸಲು ಬಿಜೆಪಿಯ ಬಿ.ಎಲ್.ಸಂತೋಷ್ ಪಕ್ಷದ ಮುಖಂಡರಿಗೆ ಕರೆ ನೀಡಿರುವುದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಇದಕ್ಕೆ ಪೂರಕವಾಗಿಯೇ ಶಿವಮೊಗ್ಗದಲ್ಲಿ ತಮಿಳರ ಸಮಾವೇಶ ನಡೆಸಲಾಗಿದೆ ಎಂದು ಟಿ.ಎ.ನಾರಾಯಣಗೌಡ ಆಪಾದಿಸಿದ್ದಾರೆ.
ಕನ್ನಡಿಗರಿಗೆ ತಮಿಳರ ಬಗ್ಗೆಯಾಗಲಿ, ತಮಿಳು ನಾಡಗೀತೆ ಬಗ್ಗೆಯಾಗಲಿ ಅಗೌರವವಿಲ್ಲ. ಆದರೆ ಕರ್ನಾಟಕದಲ್ಲಿ ತಮಿಳು ನಾಡಗೀತೆ ಹಾಡಿಸುವ ಔಚಿತ್ಯವಾದರೂ ಏನು. ತಮಿಳರನ್ನು ಓಲೈಸಲು ಬಿಜೆಪಿ ಇಷ್ಟು ಕೆಳಮಟ್ಟಕ್ಕೆ ಇಳಿಯಬೇಕಾಗಿರಲಿಲ್ಲ. ತಾಕತ್ತಿದ್ದರೆ ಅಣ್ಣಾಮಲೈ ತಮಿಳುನಾಡಿನಲ್ಲಿ ಕನ್ನಡಿಗರ ಸಮಾವೇಶ ನಡೆಸಿ ಕರ್ನಾಟಕದ ನಾಡಗೀತೆ ಹಾಡಿಸಲಿ ಎಂದು ಟಿ.ಎ.ನಾರಾಯಣಗೌಡ ಸವಾಲು ಹಾಕಿದ್ದಾರೆ
ಚುನಾವಣೆ ಸಂದರ್ಭದಲ್ಲಿ ಹಲವು ರಾಜಕೀಯ ಪಕ್ಷಗಳು ಬೇರೆ ರಾಜ್ಯಗಳ ರಾಜಕಾರಣಿಗಳು, ಚಿತ್ರನಟರನ್ನು ಕರೆಯಿಸಿ ಬೇರೆ ಬೇರೆ ಭಾಷೆಗಳಲ್ಲಿ ಭಾಷಣ ಮಾಡಿಸಿ ಕನ್ನಡಿಗರನ್ನು ಅಪಮಾನಿಸುತ್ತಿದ್ದಾರೆ. ಇದು ನಾಡದ್ರೋಹದ ಕೆಲಸ. ಇಂಥವರಿಗೆ ಮತದಾನ ಸಂದರ್ಭದಲ್ಲಿ ಸರಿಯಾದ ಉತ್ತರವನ್ನು ಕನ್ನಡಿಗರು ನೀಡಬೇಕು ಎಂದು ಟಿ.ಎ.ನಾರಾಯಣಗೌಡ ತಿಳಿಸಿದರು.