×
Ad

ಅಶ್ವಥ್‌ ನಾರಾಯಣ ಕಛೇರಿಯಿಂದ ಮತದಾರರಿಗೆ ರವಾನೆಯಾದ ಸಂದೇಶದಲ್ಲಿ ಮತದಾರರ ಗುರುತಿನ ಚೀಟಿ ವಿವರ: ವರದಿ

ಅಕ್ರಮ ದತ್ತಾಂಶ ಸಂಗ್ರಹ ಆರೋಪ

Update: 2023-04-29 10:43 IST

ಬೆಂಗಳೂರು: ಮಲ್ಲೇಶ್ವರಂ ಕ್ಷೇತ್ರದ ಕೆಲವು ಮತದಾರರಿಗೆ ಸ್ಥಳೀಯ ಶಾಸಕರ ಕಛೇರಿಯಿಂದ ತಮ್ಮ ಮತದಾರರ ಗುರುತಿನ ಚೀಟಿಯ ಆಯ್ದ ವಿವರಗಳು ವಾಟ್ಸ್ ಆ್ಯಪ್‌ ಮೂಲಕ ರವಾನೆಯಾಗಿದ್ದು, ಶಾಸಕರಿಗೆ ತಮ್ಮ ವಾಟ್ಸ್ ಆ್ಯಪ್‌ ಸಂಖ್ಯೆಗಳು ಎಲ್ಲಿಂದ ದೊರೆಯಿತು ಎಂದು ಮತದಾರರು ಅಚ್ಚರಿಗೊಂಡಿದ್ದಾರೆ. ಬೆಂಗಳೂರಿನಲ್ಲಿ ಮತದಾರ ವೈಯಕ್ತಿಕ ಮಾಹಿತಿಗಳನ್ನು ರಾಜಾರೋಷವಾಗಿ ಅಭ್ಯರ್ಥಿಗಳಿಗೆ ಮಾರಾಟ ಮಾಡುವ ಭಾರೀ ಹಗರಣ ಬೆಳಕಿಗೆ ಬಂದ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ.   

ಮಲ್ಲೇಶ್ವರಂ ಕ್ಷೇತ್ರದ ಶಾಸಕ ಅಶ್ವತ್ಥನಾರಾಯಣ ಅವರ ಕಛೇರಿಯಿಂದ ಕ್ಷೇತ್ರದ ಮತದಾರರ ವಾಟ್ಸ್ ಆ್ಯಪ್‌ ಸಂಖ್ಯೆಗಳಿಗೆ ಈ ವಿವರಗಳು ರವಾನೆಯಾಗಿದೆ. ಮತದಾರರ ಗುರುತಿನ ಚೀಟಿಗೆ ಯಾವುದೇ ರೀತಿಯಲ್ಲೂ ಮೊಬೈಲ್‌ ಸಂಖ್ಯೆ ಲಿಂಕ್‌ ಮಾಡಿರುವುದಿಲ್ಲ, ಚುನಾವಣಾ ಆಯೋಗವೂ ಮತದಾರರ ಫೋನ್‌ ಸಂಖ್ಯೆಗಳನ್ನು ಅಭ್ಯರ್ಥಿಗಳೊಂದಿಗೆ ಹಂಚಿಕೊಂಡಿರುವುದಿಲ್ಲ. ಅದಾಗ್ಯೂ, ಶಾಸಕರಿಗೆ ಮತದಾರರ ನಿರ್ದಿಷ್ಟ ವಾಟ್ಸ್ ಆ್ಯಪ್‌ ಸಂಖ್ಯೆಗಳು ದೊರೆತಿರುವುದು ಹೇಗೆ ಎಂದು ಅಚ್ಚರಿಗೊಂಡಿರುವ ಮತದಾರರು, ಇದರಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ ಎಂದು deccanherald.com ವರದಿ ಮಾಡಿದೆ.

ಮತದಾರರ ಮೊಬೈಲ್‌ ಸಂಖ್ಯೆ, ವೋಟರ್‌ ಐಡಿ ಸಂಖ್ಯೆ, ಸಂಬಂಧಿಕರ ಹೆಸರು, ವಿಳಾಸ ಸೇರಿದಂತೆ ಮಹತ್ವದ ಎಲ್ಲಾ ಡೇಟಾಗಳೂ ಶಾಸಕರ ಬಳಿ ಇದೆ ಅನ್ನುವುದು ವಾಟ್ಸ್ ಆ್ಯಪ್‌ ಗಳಲ್ಲಿ ಬಂದ ಸಂದೇಶದಿಂದ ಸ್ಪಷ್ಟವಾಗಿದೆ. ಶಾಸಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಅಕ್ರಮವಾಗಿ ಸಂಗ್ರಹಿಸಿದ್ದಾರೆ ಎಂದು ಮತದಾರರೊಬ್ಬರು ಈಗಾಗಲೇ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ಹಲವು ನೆಟ್ಟಿಗರು ಈ ವಿಷಯದ ಬಗ್ಗೆ ಟ್ವೀಟ್‌ ಮಾಡಿ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. 

“ನನ್ನ ಮತದಾರರ ವಿವರಗಳೊಂದಿಗೆ ನಿಮ್ಮ ಹೆಸರಿನಲ್ಲಿ ಸಹಿ ಮಾಡಿದ ಎಸ್ಎಂಎಸ್ ನನಗೆ ಬಂದಿದೆ. ನನ್ನ ವೋಟರ್ ಐಡಿಯನ್ನು ನನ್ನ ಫೋನ್ ಸಂಖ್ಯೆಯೊಂದಿಗೆ ಸಂಪರ್ಕಿಸುವ ವಿವರಗಳನ್ನು ನೀವು ಹೇಗೆ ಅಕ್ರಮವಾಗಿ ಪಡೆದಿದ್ದೀರಿ ಎಂದು ದಯವಿಟ್ಟು ನನಗೆ ತಿಳಿಸುವಿರಾ? ಇದಕ್ಕೆ ನೀವು ಎಷ್ಟು ಹಣವನ್ನು ಖರ್ಚು ಮಾಡಿದ್ದೀರಿ ಎಂದು ದಯವಿಟ್ಟು ನನಗೆ ಹೇಳಬಹುದೇ? ” ಎಂದು ಅಶ್ವತನಾರಾಯಣರನ್ನು ಉಲ್ಲೇಖಿಸಿ ವೇಣು ಮಾಧವ್ ಎಂಬವರು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

ಕಳೆದ ವರ್ಷ ನವೆಂಬರ್ ನಲ್ಲಿ ಚಿಲುಮೆ ಎಂಬ ಸಂಸ್ಥೆ ಚುನಾವಣಾ ಅಧಿಕಾರಿಗಳ ಸೋಗಿನಲ್ಲಿ ಹೋಗಿ ಲಕ್ಷಾಂತರ ಮತದಾರರ ಮಾಹಿತಿಗಳನ್ನು ಅಕ್ರಮವಾಗಿ ಸಂಗ್ರಹಿಸಿತ್ತು ಎಂಬ ಹಗರಣ ಬಯಲಾಗಿತ್ತು. ಅದರ ಬಗ್ಗೆ ಚುನಾವಣಾ ಆಯೋಗದ ತನಿಖಾ ವರದಿಯೂ ಇತ್ತೀಚಿಗೆ ಬಂದಿತ್ತು. ಬಿಬಿಎಂಪಿ ಅಧಿಕಾರಿಗಳೇ ಆ ಅಕ್ರಮಕ್ಕೆ ಹೇಗೆ ನೆರವಾಗಿದ್ದರು ಎಂಬುದು ಬಹಿರಂಗವಾಗಿತ್ತು. 

ಚಿಲುಮೆಯ ಮತ್ತೊಂದು ಕಂಪೆನಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಜೊತೆ ವ್ಯವಹಾರ ನಡೆಸಿತ್ತು ಎನ್ನುವುದನ್ನೂ ಖಚಿತಪಡಿಸಿದೆ. ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು ಸಚಿವ ಡಾ. ಅಶ್ವತ್ಥನಾರಾಯಣ ಅವರ ಸಂಬಂಧಿಯಾಗಿದ್ದು,  ಚಿಲುಮೆ ಪ್ರಕರಣ ಬೆಳಕಿಗೆ ಬಂದಾಗ ಅಶ್ವತ್ಥನಾರಾಯಣ ಅವರಿಗೂ ಚಿಲುಮೆಗೂ ನಂಟಿದೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. 

ಚಿಲುಮೆಯ ವ್ಯವಹಾರಗಳ ಬಗ್ಗೆ ನಡೆಸಿರುವ ತನಿಖಾ ವರದಿ ಪ್ರಕಾರ, ಒಂದು ಬಾರಿ ಚಿಲುಮೆ ಸಚಿವ ಅಶ್ವತ್ಥ್ ನಾರಾಯಣ ಅವರ ಫೌಂಡೇಶನ್ ಮತ್ತು ಇನ್ನೊಂದು ಬಾರಿ ಹೊಂಬಾಳೆ ಫಿಲ್ಮ್ಸ್ ಜೊತೆ ವಹಿವಾಟು ನಡೆಸಿದೆ ಎಂಬ ಅಂಶ ಬಹಿರಂಗಗೊಂಡಿತ್ತು.

Similar News