ಕರ್ನಾಟಕದ ಸಮಗ್ರ ಅಭಿವೃದ್ಧಿಗೆ, ಉತ್ತಮ ಭವಿಷ್ಯ ರೂಪಿಸುವ ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿ: ಪ್ರಿಯಾಂಕಾ ಗಾಂಧಿ

Update: 2023-04-29 16:09 GMT

ಧಾರವಾಡ: ಈ ಬಾರಿಯ ವಿಧಾನಸಭಾ ಚುಣಾವಣೆಯಲ್ಲಿ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಮತ್ತು ಉತ್ತಮ ಭವಿಷ್ಯವನ್ನು ರೂಪಿಸುವ ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿ ಎಂದು ಮನವಿ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ‘ಜಿಲ್ಲೆಯ ಕುಂದಗೋಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ ಅವರನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸಬೇಕು’ ಎಂದು ಕೋರಿದರು.

ಶನಿವಾರ ಜಿಲ್ಲೆಯ ಕುಂದಗೋಳ ಕ್ಷೇತ್ರದಲ್ಲಿ ಪಕ್ಷದಿಂದ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ನಾನು ನಿಮ್ಮಲ್ಲಿ ಕಳಕಳಿಯ ವಿನಂತಿ ಮಾಡುವುದೇನೆಂದರೆ, ನಾಲ್ಕು ವರ್ಷಗಳಲ್ಲಿ ತಮಗೆ ಆದ ಅನುಭವವನ್ನು ನೋಡಿ ತಾವು ಮತವನ್ನು ಚಲಾವಣೆಯನ್ನು ಮಾಡಿ. 3 ವರ್ಷಗಳಿಂದ ರಾಜ್ಯದ ಭ್ರಷ್ಠ ಬಿಜೆಪಿ ಸರಕಾರದ ದುರಾಡಳಿತ ಪರಿಣಾಮ ಜನ ಬೇಸತ್ತಿದ್ದು, ಇದಕ್ಕೆಲ್ಲಾ ಕಾರಣ ರಾಜ್ಯದ ಬಿಜೆಪಿ ಸರಕಾರ’ ಎಂದು ಟೀಕಿಸಿದರು.

‘ಬೆಲೆ ಏರಿಕೆಯಿಂದ ತತ್ತರಿಸಿದ ನಮ್ಮ ಮಹಿಳೆಯರಿಗೆ, ಕಾಂಗ್ರೆಸ್ ಪ್ರತಿ ತಿಂಗಳು ಮನೆ ನಡೆಸುವ ಪ್ರತಿಮನೆಯ ಯಾಜಮಾನಿಗೆ ‘ಗೃಹಲಕ್ಷ್ಮಿ’ ಯೋಜನೆ ಮೂಲಕ 2 ಸಾವಿರ ರೂ.ಪ್ರತಿ ತಿಂಗಳು ಕೊಡಲು ತೀರ್ಮಾನಿಸಿದೆ. 2.50 ಲಕ್ಷ ಸರಕಾರಿ ನೌಕರಿ ಖಾಲಿ ಇದೆ. ಸರಕಾರ ಭರ್ತಿ ಮಾಡಿಲ್ಲ. ಜನರಿಗೆ   ಉದ್ಯೋಗಳನ್ನು ಯಾಕೆ ತುಂಬಲ್ಲ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಲ್ಲಿ ಎಲ್ಲ ಖಾಲಿ ಹುದ್ದೆಯನ್ನು ಭರ್ತಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ವಿದ್ಯಾವಂತ ನಿರುದ್ಯೋಗಿಗಳ ಶ್ರೇಯೋಭಿವೃದ್ಧಿಗಾಗಿ ಕಾಂಗ್ರೆಸ್ ಘೋಷಿಸಿರುವ ಯುವನಿಧಿ ಗ್ಯಾರಂಟಿಯೂ ನಿರುದ್ಯೋಗಿ ಯುವಕ, ಯುವತಿಯರಿಗೆ ಮಾಸಿಕ ನಿರುದ್ಯೋಗ ಭತ್ಯೆ ನೀಡಲಾಗುವುದು. ಡಿಪ್ಲೋಮಾ ಆದವರಿಗೆ 1,500 ರೂ., ಪದವೀಧರರಿಗೆ 3ಸಾವಿರ ರೂ. ನಿರುದ್ಯೋಗ ಭತ್ಯೆ ಕಾರ್ಯಕ್ರಮ ಕಾಂಗ್ರೆಸ್ ಘೋಷಣೆ ಮಾಡಿದೆ ಎಂದು ಅವರು ತಿಳಿಸಿದರು.

‘ಈ ಚುನಾವಣೆ ನಿಮ್ಮ ಭವಿಷ್ಯವನ್ನು ನಿರ್ಧಾರವನ್ನು ಮಾಡುವ ಚುನಾವಣೆ. ಈ ಚುನಾವಣೆ ನಿಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವ ಚುನಾವಣೆ. ಈ ಚುನಾವಣೆ ನೀವೆಲ್ಲ ಸೇರಿ ಸಾಕಾರ ಮಾಡಬೇಕು. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ತಕ್ಷಣವೇ ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಯನ್ನು ನಾವು  ಮತ್ತೊಮ್ಮೆ ಈ ರಾಜ್ಯದಲ್ಲಿ ಅನುಷ್ಠಾನವನ್ನು ಮಾಡಲಿದ್ದೇವೆ’ ಎಂದು ಅವರು ಹೇಳಿದರು.

Similar News