‘ಮನೆಯಿಂದಲೇ ಮತದಾನ’ಕ್ಕೆ ಹಿರಿಯ ನಾಗರಿಕರ, ವಿಕಲಚೇತನರು ಉತ್ಸಾಹ
ಮೊದಲ ದಿನವೇ 33,036 ಮಂದಿ ಹಕ್ಕು ಚಲಾವಣೆ
ಬೆಂಗಳೂರು: ವಿಧಾನಸಭೆ ಚುನಾವಣೆಗೆ ಇದೇ ಮೊದಲ ಬಾರಿಗೆ 80ವರ್ಷ, ಅದಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಿದ್ದು ಶನಿವಾರ(ಎ.29)ದಿಂದ ‘ಮನೆಯಿಂದಲೇ ಮತದಾನ' ಪ್ರಕ್ರಿಯೆ ಆರಂಭಗೊಂಡಿದ್ದು, 33,036 ಮಂದಿ ಮತದಾನ ಮಾಡಿದ್ದಾರೆ.
ಹಿರಿಯ ಚಿತ್ರನಟಿ ಲೀಲಾವತಿ ಸೇರಿದಂತೆ ಮಂದಿ ರಾಜ್ಯದ ವಿವಿಧೆಡೆಗಳಲ್ಲಿ ಹಿರಿಯ ನಾಗರಿಕರು ಹಾಗೂ ವಿಕಲಚೇತನರು ಅತ್ಯಂತ ಉತ್ಸಾಹದಿಂದಲೇ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ನೋಂದಾಯಿತ ಹಿರಿಯ ನಾಗರಿಕರು ಮತದಾರರು ಹಾಗೂ ವಿಶೇಷ ಚೇತನ ಮತದಾರರಿಗೆ ಇಂದಿನಿಂದ (ಎ.29) ಮೇ 6ರ ವರೆಗೆ ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.
ರಾಜ್ಯದಲ್ಲಿ 80 ವರ್ಷ ಹಾಗೂ ಅದಕ್ಕಿಂತ ಹೆಚ್ಚು ವಯಸ್ಸಾಗಿರುವ 80,250 ಮಂದಿ ಹಾಗೂ 19,279 ವಿಶೇಷ ಚೇತನ ಮತದಾರರು ಮನೆಯಿಂದಲೇ ಮತದಾನ ಮಾಡಲು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಇವರಿಗೆ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಲು ಕಷ್ಟವಾಗುತ್ತಿದ್ದ ಹಿನ್ನೆಲೆಯಲ್ಲಿ ಮನೆಯಿಂದಲೇ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ನೀಡಲಾಗಿದೆ.
ಬೆಳಗ್ಗೆ 9ಗಂಟೆಯಿಂದ ಸಂಜೆ 5ಗಂಟೆಯ ವರೆಗೆ ಒಟ್ಟು 2,542 ತಂಡಗಳಲ್ಲಿ ಚುನಾವಣಾ ಸಿಬ್ಬಂದಿಯನ್ನು ಈ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದ್ದು, ಸಿಬ್ಬಂದಿಗೆ ಆಯೋಗ ನೀಡಿದ ಮಾರ್ಗದಲ್ಲಿ ಮತದಾರರ ಮನೆಗಳಿಗೆ ಖುದ್ದು ತೆರಳಿ ಮತದಾನಕ್ಕೆ ಅಗತ್ಯ ವ್ಯವಸ್ಥೆ ಮಾಡಲಿದೆ. ರಾಜಕೀಯ ಪಕ್ಷಗಳ ಏಜೆಂಟರ ಸಮ್ಮುಖದಲ್ಲೇ ಗೌಪ್ಯವಾಗಿ ಮತ ಚಲಾಯಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು.
ಈ ಎಲ್ಲ ಪ್ರಕ್ರಿಯೆಯನ್ನು ವೀಡಿಯೋಗ್ರಾಫ್ ಮೂಲಕ ಸೆರೆ ಹಿಡಿಯಲಾಗುತ್ತದೆ. ಮತಗಟ್ಟೆ ಸಿಬ್ಬಂದಿಯು ಮತಪತ್ರ ಹಾಗೂ ಮತಪೆಟ್ಟಿಗೆಗಳೊಂದಿಗೆ ಪ್ರತಿ ಮತದಾರರ ಮನೆಗೆ ಎರಡು ಬಾರಿ ಭೇಟಿ ನೀಡುತ್ತಾರೆ. ಮೊದಲ ಬಾರಿ ಮತದಾರರು ಮನೆಯಲ್ಲಿರದಿದ್ದರೆ, ಎರಡನೆ ಬಾರಿ ಹೋಗುತ್ತಾರೆ. ಆ ಬಳಿಕ ಮತದಾನಕ್ಕೆ ಅವಕಾಶವಿರುವುದಿಲ್ಲ. ಮನೆಯಿಂದಲೇ ಮತದಾನಕ್ಕೆ 12 ‘ಡಿ’ ನಮೂನೆಯಲ್ಲಿ ನೋಂದಣಿ ಮಾಡಿಸಿಕೊಂಡಿರುವವರಿಗೆ ಮತಗಟ್ಟೆಗೆ ಬಂದು ವಿದ್ಯುನ್ಮಾನ ಮತಯಂತ್ರದಲ್ಲಿ ಮತ ಚಲಾಯಿಸಲು ಅವಕಾಶವಿರುವುದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಬೆಂಗಳೂರಿನ ನೆಲಮಂಗಲ ತಾಲೂಕಿನ ಮೈಲನಹಳ್ಳಿಯ ನನ್ನ ಮನೆಯಲ್ಲಿ ನಾನು ಮತದಾನ ಮಾಡಿದ್ದು, ಚುನಾವಣಾ ಆಯೋಗ ಈ ಅವಕಾಶ ಕಲ್ಪಿಸಿದ್ದು ನನ್ನಂತಹ ಹಿರಿಯರಿಗೆ ಅನುಕೂಲವಾಗಿದೆ. ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಮತದಾನದ ಪ್ರಕ್ರಿಯೆಯಲ್ಲಿ ಎಲ್ಲರೂ ಭಾಗಿಯಾಗಬೇಕು. ಮತದಾನ ಮನೆಯಲ್ಲೇ ಮಾಡಿದ್ದು ನನಗೆ ಬಹಳ ಖುಷಿ ತಂದಿದೆ’
-ಲೀಲಾವತಿ, ಹಿರಿಯ ನಟಿ