ಬಿಲ್ಲವರ ಗುತ್ತು ಬರ್ಕೆ ಮನೆಗಳ ಶೋಧನೆಯ ಅನಾವರಣ ಹೊಸ್ತಿಲಲ್ಲಿ

Update: 2023-04-30 06:02 GMT

ಬಿಲ್ಲವರ ಕೂಡುಕುಟುಂಬದ ಗುತ್ತು ಬರ್ಕೆಗಳಿಗೆ ವಿಶಾಲವಾದ ಹಸು, ಕೋಣ, ಎಮ್ಮೆಗಳ ಪಶುಪಾಲನಾ ಹಟ್ಟಿಗಳು, ನೂರಾರು ಎಕ್ರೆ ಕೃಷಿ ಭೂಮಿ, ತೋಟ, ಕಾಡು ಗುಡ್ಡಗಳು, ಅನೇಕ ಗೇಣಿ ಒಕ್ಕಲುಗಳಿದ್ದುದು ಅಧ್ಯಯನದಿಂದ ಗೋಚರವಾಗಿದೆ (ಆಧುನಿಕ ಕಾಲಘಟ್ಟದಲ್ಲಿ ಬಹು ಸಂಖ್ಯಾತ ಬಿಲ್ಲವ ಸಮುದಾಯದ ಬಹುಪಾಲು ಮಂದಿ ಗೇಣಿದಾರರಷ್ಟೇ ಆಗಿದ್ದವರು, ಅದರಿಂದಲೂ ದೂರಾಗಿ ಶೋಚನೀಯ ಸ್ಥಿತಿಗೆ ಇಳಿದಂತೆ ತೋರುವುದೂ ವಾಸ್ತವ).

`ಒಂದೂವರೆ ದಶಕದ ಹಿಂದೆ ಮುಂಬೈಯ ಸಂಶೋಧಕ ಬಾಬು ಶಿವ ಪೂಜಾರಿಯವರ ದೂರದರ್ಶಿ ನೇತೃತ್ವದಲ್ಲಿ ಆರಂಭಗೊಂಡ ಬಿಲ್ಲವರ ಗುತ್ತು, ಬರ್ಕೆ ಮನೆಗಳ ಕ್ಷೇತ್ರಾಧ್ಯಯನವು ಕ್ರಮೇಣ ಹಲವು ಆಯಾಮಗಳನ್ನು ಪಡೆದು ಕೊಂಡು ವಿಸ್ತಾರವಾಗಿ ಬೆಳೆದು ಸಂಪನ್ನವಾಗಿ ಇದೀಗ ಲೋಕಾರ್ಪಣೆಗೆ ಅನುವಾಗಿರುವ ನಿಟ್ಟುಸಿರು ನಮ್ಮದು.

ಸುಮಾರು ಎಂಟು ವರ್ಷ ಕಾಲಾವಧಿಯಲ್ಲಿ ನಮ್ಮ ಅಧ್ಯಯನ ತಂಡದ ವ್ಯಾಪಕ ತಿರುಗಾಟದಲ್ಲಿ ದೊರೆತಿದ್ದ ಪ್ರಾಥಮಿಕವೆನಿಸುವ ಮಾಹಿತಿಗಳು ಅದರ ದಾಖಲೆಗಳ ಗ್ರಂಥ- ಹೊರಬರಲು ಕಾರಣಾಂತರದಿಂದ ಸುದೀರ್ಘ ವಿಳಂಬವಾಯಿತು.

ತುಳುನಾಡು ವಿವಿಧ ಮತ ಧರ್ಮಗಳ, ವಿಭಿನ್ನ ಸಮುದಾಯಗಳ ನೆಲೆವೀಡು ಇಂತಹ ಸಮುದಾಯಗಳಲ್ಲಿ ಬಿಲ್ಲವ ಸಮುದಾಯವೂ ಒಂದು. ಬಿಲ್ಲವರಂತಹ ವಿಶಾಲ ಸಮುದಾಯಗಳ ವಿಶಿಷ್ಠಾಂಗಗಳು, ಮೂಲ ಚರಿತ್ರೆ ಕಾಲಕ್ರಮಿಸುತ್ತಿರುವಂತೆಯೇ ಮರವೆಗೆ ಸಲ್ಲುವುದು ಅದು ಸಹಜವಾಗಿಯೋ, ಉದ್ದೇಶ ಪೂರ್ವಕವಾಗಿಯೋ ಇರಬಹುದು. ಬಿಲ್ಲವರು ಪ್ರಾಚೀನಕಾಲದಿಂದಲೂ ತುಳುನಾಡಿನ ನಟ್ಟಿಲ್ಲು ಮನೆತನದವರು ಪರಂಪರಾಗತ ಬೇಸಾಯಗಾರರು, ಅಲ್ಲದೆ ಬೋಂಟ್ರರು, ಬೇಟೆಗಾರರು, ಬೈದ್ಯರು (ವೈದ್ಯವೃತ್ತಿಯವರು) ಬಿಲ್ಲು ಹಿಡಿದ ಯೋಧ ಬಿಲ್ಲವರು, ಉತ್ತರ ಭಾಗದಲ್ಲಿ ಹಳೇಪೈಕರು ಎಂದರೆ ಪ್ರಾಚೀನ ಜನವರ್ಗ, ದೈವಾರಾಧಕರು. ಬಿಲ್ಲವರಲ್ಲಿ ಅನೇಕರು ಸೇನಾಪತಿಗಳು, ನಾಯಕರು, ಮಂತ್ರಿಗಳು ನಾಡಿನ ಒಡೆಯರೂ ಆಗಿದ್ದರು ಎನ್ನುತ್ತದೆ ಇತಿಹಾಸ. ಬಹುಸಂಖ್ಯೆಯ ದೈವಗಳು ಮೊದಲಾಗಿ ಒಲಿದು ನೆಲೆಸತೊಡಗಿದ್ದುದು ಬಿಲ್ಲವರಲ್ಲಿ ಎನ್ನುವುದು ಈಚಿನ ಹೊಸ ತಲೆಮಾರು ನಡೆಸಿದ ಅಧ್ಯಯನದಿಂದ ಕಂಡುಕೊಂಡ ಅಂಶ. ತುಳುವ ವಂಶದ ವಿಜಯನಗರ ಸಾಮ್ರಾಟ ಕೃಷ್ಣದೇವರಾಯ ಬಿಲ್ಲವ ಎನ್ನುವುದನ್ನು ಸಂಶೋಧಕ ಬಾಬು ಶಿವಪೂಜಾರಿಯವರು 2009ರ ತನ್ನ ಶೋಧನೆಯಲ್ಲಿ ಪ್ರಕಟಿಸಿದ್ದಾರೆ.

ತಂಡವಾಗಿ ಶೋಧಕ್ಕೆ ಹೊರಟದ್ದು

2009ರ ವೇಳೆಗೆ ಬಾಬು ಶಿವಪೂಜಾರಿಯವರು ಬಿಲ್ಲವರ ಗುತ್ತು ಮತ್ತು ಗುರಿಕಾರ ಮನೆಗಳನ್ನು ಶೋಧಿಸುವ ಯೋಜನೆಯನ್ನು ಕೈಗೆತ್ತಿಕೊಂಡು ಹಿರಿಯ ಲೇಖಕಿ ಬಿ. ಎಂ. ರೋಹಿಣಿಯವರನ್ನು, ಬಳಿಕ ನನ್ನನ್ನೂ, ರಮಾನಾಥ ಕೋಟೆಕಾರರನ್ನೂ ಸೇರಿಸಿಕೊಂಡರು. ಜಿಲ್ಲೆಯ ದಕ್ಷಿಣ ಭಾಗದ ಪ್ರಮುಖ ಮಾಹಿತಿದಾರರಾಗಿ ಬಂಟ್ವಾಳದ ಬಿ. ತಮ್ಮಯ್ಯರು ನಮ್ಮ ಜತೆ ಸೇರಿ ಸೂಸೂತ್ರವಾಗಿ ಮುನ್ನಡೆಸಿದರು. ಹಿರಿಯರಾದ ವೆಂಕಪ್ಪ ಮಾಸ್ಟರ್, ಬೆಳ್ತಂಗಡಿಯ ಯೋಗೀಶ್ ಕುಮಾರ್ ಮುಂತಾದವರು ನಮ್ಮೊಡನಿದ್ದರು. ನಮ್ಮ ಕ್ಷೇತ್ರಾಧ್ಯಯನದ ಕೊನೆಕೊನೆಯ ವರ್ಷಗಳಲ್ಲಿ ಹೊಸತಲೆಮಾರಿನ ಪ್ರಖರ ಅಧ್ಯಯನಶೀಲ ಸಂಕೇತ್ ಪೂಜಾರಿ ನಮ್ಮ ಜತೆಗೂಡಿದರು. ಹೀಗೆ ಸುಮಾರು ಒಂದು ದಶಕದುದ್ದ ಬಿಲ್ಲವರ ಗುತ್ತು ಬಾರಿಕೆ (ಬರ್ಕೆ) ಗುರಿಕಾರ ಮನೆಗಳ ನಮ್ಮ ಕ್ಷೇತ್ರಾಧ್ಯಯನ ಸಾಗುತ್ತಿರುವಾಗ ಮುಂಬೈಯ ‘ಗುರುತು’ ಪತ್ರಿಕೆಯ ಪ್ರತೀ ತಿಂಗಳ ಸಂಚಿಕೆಯಲ್ಲಿ ಅದರ ಪ್ರಕಟಣೆಯು ನಡೆಯುತ್ತಲಿತ್ತು. ಬಿಲ್ಲವರ ಪ್ರಾಚೀನ ಇತಿಹಾಸದ ಭವ್ಯ ವಿಸ್ಮತಿ ಬಹುಕಾಲದ ಬಳಿಕ ಮತ್ತೆ ಬೆಳಕಿಗೆ ಬರುವಲ್ಲಿ ಶ್ರಮಿಸಿದವರು ಅದೆಷ್ಟೋ ಮಂದಿ.

ನಾವು ಸಂದರ್ಶಿಸಿದ ಪ್ರಾಚೀನವಾದ ಬಿಲ್ಲವರ ಮನೆ ಗಳಲ್ಲಿ ಗುತ್ತು, ಬಾವ, ಬೀಡು, ಜನನ, ಬರ್ಕೆ(ಬಾರಿಕೆ), ಸಾನದ ಮನೆ, ದೇವಸ್ವಮನೆ, ಭಂಡಾರ ಮನೆ, ಗುರಿಕಾರ ಮನೆಗಳ ಶ್ರೇಣೀಕೃತ ಸ್ವರೂಪಗಳಿದ್ದವು.

ಗುತ್ತು ಮನೆ-ಲಕ್ಷಣಗಳು

ಬಿಲ್ಲವರ ಕೂಡುಕುಟುಂಬದ ಗುತ್ತು ಬರ್ಕೆಗಳಿಗೆ ವಿಶಾಲವಾದ ಹಸು, ಕೋಣ, ಎಮ್ಮೆಗಳ ಪಶುಪಾಲನಾ ಹಟ್ಟಿಗಳು, ನೂರಾರು ಎಕ್ರೆ ಕೃಷಿ ಭೂಮಿ, ತೋಟ, ಕಾಡು ಗುಡ್ಡಗಳು, ಅನೇಕ ಗೇಣಿ ಒಕ್ಕಲುಗಳಿದ್ದುದು ಅಧ್ಯಯನದಿಂದ ಗೋಚರವಾಗಿದೆ (ಆಧುನಿಕ ಕಾಲಘಟ್ಟದಲ್ಲಿ ಬಹು ಸಂಖ್ಯಾತ ಬಿಲ್ಲವ ಸಮುದಾಯದ ಬಹುಪಾಲು ಮಂದಿ ಗೇಣಿದಾರರಷ್ಟೇ ಆಗಿದ್ದವರು, ಅದರಿಂದಲೂ ದೂರಾಗಿ ಶೋಚನೀಯ ಸ್ಥಿತಿಗೆ ಇಳಿದಂತೆ ತೋರುವುದೂ ವಾಸ್ತವ).

ಬಿಲ್ಲವರ ಗುತ್ತು ಭಂಡಾರ ಮನೆಗಳು ಪ್ರಾಚೀನ ವಾಸ್ತು ನಿಯಮದಂತೆ ಪರಂಪರಾಗತ ಶೈಲಿಯ ಹೆಬ್ಬಾಗಿಲು ಉಳ್ಳ, ವಿಶಿಷ್ಟ ವಿನ್ಯಾಸಗಳ ನಿರ್ಮಿತಿಗಳು.

ವಿಶಾಲವಾದ ಸುತ್ತು ಮದುಲಿನ ಆವರಣದಮನೆ, ಚಾವಡಿ, ಅಂಗಳದ ದಕ್ಷಿಣ ಬದಿ ತುಳಸಿಕಟ್ಟೆ, ಸಾಮಾನ್ಯವಾಗಿ ಚಾವಡಿಯ ಎಡಬದಿ ಅಥವಾ ಬಲಬದಿಗೆ ದೈವ ಭಂಡಾರ ಗುಡಿ, ಆವರಣದ ಹೊರಮೈಯ ಪೂರ್ವಬದಿಯಿಂದಾಗಿ ಉತ್ತರದ ಉದ್ದಕ್ಕೂ ಆಳವಾದ ನೀರು ಹರಿಯುವ ಕಂದಕ ಅಥವಾ ತೋಡು, ಮೂಡು ಅಥವಾ ಬಡಗು ಬದಿಯಲ್ಲಿ ಕುಡಿಯುವ ನೀರಿನ ಬಾವಿ, ಉತ್ತರ/ಪೂರ್ವ ಕುಟುಂಬದ ನಾಗಬನ, ಅಂಗಳದ ಎದುರು ಬಾಕಿಮಾರು ಗದ್ದೆ, ಅದರಾಚೆಗೆ ಕಂಬಳದ ಗದ್ದೆ. ಬೈಲು, ಮಜಲು, ಬೆಟ್ಟುಗದ್ದೆಗಳು. ಚಾವಡಿಯಲ್ಲಿ ಬೋದಿಗೆ ಕಂಬಗಳು, ಬಾಜಿರಶಿಲ್ಪದ ದಾರಂದಗಳು, ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ಆನೆಬಾಗಿಲು ಅಥವಾ ಹೆಬ್ಬಾಗಿಲು. ಉತ್ತರಕ್ಕೆ ಪಡಿಪಿರೆ ಬಾಗಿಲು. ಏಳು ಇಲ್ಲವೇ ಹನ್ನೊಂದು ಮೆಟ್ಟಿಲುಗಳನ್ನು ಏರಿ ಬರುವಂತೆ ವಿನ್ಯಾಸ.

ಚಾವಡಿಯ ಮೂಲೆಯಲ್ಲಿ ಕೆಲವೆಡೆ ಅಟ್ಟ, ಕುತ್ತಟ್ಟಕ್ಕೆ ಏರುವ ಮೆಟ್ಟಿಲುಗಳು/ಏಣಿ, ಚಾವಡಿಯಲ್ಲಿ ಯಜಮಾನರ ಪಟ್ಟದ ಆಸನ, ನ್ಯಾಯ ತೀರ್ಮಾನದ (ಕೆಲವೆಡೆ) ಧರ್ಮಚಾವಡಿ-ಉಜ್ಜಾಲ್ (ಉಯ್ಯಾಲೆ) ಇಲ್ಲಿ ಯಜಮಾನನಿಗೆ ಮಾತ್ರ ಅದರಲ್ಲಿ ಸ್ಥಾನ, ಗೋಡೆಯಲ್ಲಿ ಜಿಂಕೆ ಅಥವಾ ಕೋವಿ, ಅಟ್ಟದಲ್ಲಿ ಅಕ್ಕಿಮುಡಿಗಳೊಂದಿಗೆ ಮೂರ್ತೆ ಅಥವಾ ಕಂಬಳ ಇಲ್ಲವೇ ಯುದ್ಧದ ಆಯುಧಗಳು, ಕೃಷಿ ಸಲಕರಣೆಗಳು, ಚಾವಡಿಯ ಒಂದು ಪಕ್ಕಕ್ಕೆ ಅಡುಗೆಮನೆ, ಅದರಾಚೆ ಬಾಣಂತಿಯರು ಅಥವಾ ಮಹಿಳೆಯರ ತಿಂಗಳ ವಿಶ್ರಾಂತಿ ಕೊಠಡಿ, ಆನೆ ಬಾಗಿಲಿನೊಳ ಅಂತರದಲ್ಲಿ ಇಬ್ಬದಿ ಜಗಲಿಗಳು ಕಲೆಂಬಿ, ಚಾವಡಿಯಲ್ಲಿ ಆಸನ ವ್ಯವಸ್ಥೆಗಾಗಿ ಕಂಬಗಳ ನಡುವಣ ಅಂತರದಲ್ಲಿ ಹಾಸಿರುವ ಬಾಜಿರ, ಮಂಚಗಳು, ಕುರ್ಚಿಗಳು, ಮೇಜುಗಳು, ಬೆಂಚುಗಳು ಇತ್ಯಾದಿ. ಅಂಗಳದಲ್ಲಿ ಭತ್ತದರಾಶಿ ಪೇರಿಸಿ ಶೇಖರಿಸಿಟ್ಟ ತುಪ್ಪೆ, ಸಾರಿಗೆ ವ್ಯವಸ್ಥೆಯ ದಂಡಿಗೆ, ಗಾದಿ, ದೋಣಿ ಇತ್ಯಾದಿಗಳಿದ್ದವು.

ವಸ್ತುಗಳ ರಕ್ಷಣೆಗಾಗಿ ಕಲೆಂಬಿ ಕಪಾಟು, ಬಾಗಿಲು ದಾರಂದದ ಮೇಲಿನ ಪತ್ತಾಸಿನಲ್ಲಿ ಮರದ ಕಿರುಪೆಟ್ಟಿಗೆಗಳು, ದೈವಗುಡಿಯಲ್ಲಿ ದೈವದ ಉಯ್ಯಾಲೆ, ಮಣೆಮಂಚಗಳು, ದೈವಾರಾಧನೆ ಸಂದರ್ಭದಲ್ಲಿ ಬಳಸುವ ಕಾಲುದೀಪಗಳು ಪೀಠವಿರುವ ದೀಪ, ಭಸ್ಮದ/ಗಂಧದ ಮರಿಗೆ ನೀರಿರಿಸುವ ಪೀಠ ಇತ್ಯಾದಿ. ಈ ಮೇಲೆ ವಿವರಿಸಿದ ಲಕ್ಷಣಗಳು ಎಲ್ಲ ಗುತ್ತು ಮನೆಗಳಲ್ಲೂ ಒಂದೇ ರೀತಿಯೆಂದಿಲ್ಲ. ಅಲ್ಪಸ್ವಲ್ಪ ವ್ಯತ್ಯಾಸಗಳಿದ್ದರೂ ಎಲ್ಲವುಗಳ ಸಾಮಾನ್ಯ ಸ್ವರೂಪಗಳು ಹೀಗಿದ್ದವು ಎನ್ನಬಹುದು.

ಕೆಲವು ಗುತ್ತು, ಗುರಿಕಾರ ಮನೆಗಳ ವೀಡಿಯೊ ಚಿತ್ರದೊಂದಿಗೆ ಮನೆಯ ಅಳತೆಗಳನ್ನು ನಾವು ಮಾಡಿದ್ದೆವು. ಆಗ ನೌಕರಿಯಲ್ಲಿದ್ದಾತ ನಾನೊಬ್ಬನೇ. ನನ್ನ ಪ್ರತೀ ರಜಾ ದಿನದಂದು ನಮ್ಮ ತಂಡ ಒಂದು ಬೆಳಗ್ಗೆ 7-8 ಗಂಟೆಯ ಒಳಗೆೆ ಹೊರಟರೆ, ಹಿಂದಿರುಗುವಾಗ ರಾತ್ರಿ 8-10 ಗಂಟೆಯಾದುದೂ ಇತ್ತು. ಆದರೂ ಚರಿತ್ರೆ ದಾಖಲಾತಿಯ ಒಳ್ಳೆಯ ಕೆಲಸ ಮಾಡುತ್ತಿದ್ದೇವೆ ಎಂಬ ಛಲ ಉಸಿರು ಬಿಗಿ ಹಿಡಿದು ಸಾಗುತ್ತಿತ್ತು. ಈಗ ಅದೆಲ್ಲ ಆಗೀಗ ಪಕ್ಕನೆ ನೆನಪು ಅಷ್ಟೇ. ನಮ್ಮ ತಂಡದ ಪ್ರಮುಖ ಮಾರ್ಗದರ್ಶಿಯಾಗಿದ್ದ ಆತ್ಮೀಯ ಬಿ. ತಮ್ಮಯರವರು ಕೆಲವು ವರ್ಷಗಳ ಹಿಂದೆ ಅಗಲಿದರು. ವೆಂಕಪ್ಪಮಾಸ್ಟರ್, ಕೆ.ಎ. ರೋಹಿಣಿ, ಆರ್.ಕೆ.ಬಂಗೇರ, ವಿ.ಗ. ನಾಯಕ, ನಾಲ್ಕೂರು ಗುತ್ತುಮನೆಯ ರಜನಿ ಟೀಚರ್, ಎಂ.ಕೆ. ಕುಕ್ಕಾಜೆ, ನವೀನ್ ಕುಮಾರ್ ಮರಿಕೆ, ಜೆ.ಎಸ್. ಕರ್ಕೇರ, ಚಂದ್ರಶೇಖರ ಅಲಂಗಾರ್, ಶೈಲು ಬಿರ್ವ ಅಗತ್ತಾಡಿ, ಸುರೇಂದ್ರ ಅತ್ತೂರು, ವಿಶ್ವನಾಥ ಭಂಡಾರಿ ಮುಂತಾದವರು ಸಾಂದರ್ಭಿಕವಾಗಿ ನಮ್ಮೊಂದಿಗಿದ್ದರು. ಜಿಲ್ಲೆಯ ದಕ್ಷಿಣ ಭಾಗಕ್ಕೆ ಬಂಟ್ವಾಳದ ಲೋಹಿತ್, ಇತರ ಭಾಗಗಳಿಗೆ ಒಮ್ಮೊಮ್ಮೆ ಕಾರ್ಕಳ, ಉಡುಪಿ ಕಡೆಗೆ ಕೆ.ಎಂ. ಖಲೀಲ್, ಜಯಪ್ರಕಾಶ್ ಮುಂತಾದ ಛಾಯಾಗ್ರಾಹಕರು ಹಾಗೂ ನಮ್ಮನ್ನು ಅಷ್ಟೂ ವರ್ಷ ಕರೆದೊಯ್ದ ಕಾರು ಚಾಲಕ ಉಮಾನಾಥ್ ಇವರೆಲ್ಲರ ಸಹಕಾರ ಅಪೂರ್ವ. ಇಡೀ ಪ್ರಯಾಣ ವೆಚ್ಚವನ್ನು ಭರಿಸಿದ ನಮ್ಮ ನೇತಾರ ಬಾಬು ಶಿವಪೂಜಾರಿ, ಎಲ್ಲಕ್ಕೂ ಮೇಲಾಗಿ ನಮ್ಮ ತಂಡದ ಹಿರಿಯಕ್ಕ ಲೇಖಕಿ ಬಿ.ಎಂ. ರೋಹಿಣಿಯವರು. ಪ್ರತೀ ಕ್ಷೇತ್ರ ಅಧ್ಯಯನದಿಂದ ಹಿಂದಿರುಗಿದ ಮೇಲೆ ಸಂಗ್ರಹಿತ ಮಾಹಿತಿಗಳನ್ನು ನಾವು ವಾರದೊಳಗೆ ಪಠ್ಯ ಸಿದ್ಧಪಡಿಸಿ ರೋಹಿಣಿಯಕ್ಕನಿಗೆ ಹಸ್ತಾಂತರಿಸುವುದು ಅವರು ಎಲ್ಲವನ್ನೂ ಕ್ರೋಡೀಕರಿಸಿ ಪ್ರಧಾನ ಸಂಪಾದಕರಿಗೆ ಮುಂಬೈಗೆ ಕಳುಹಿಸಿಕೊಡುವುದು ಇಂತಹ ಅಪೂರ್ವ ಶ್ರಮ ಅವರ ಸರಳತೆ ಬಲು ಅಪರೂಪದ್ದು. ನಾವು ಅಷ್ಟೂ ವರ್ಷಗಳಲ್ಲಿ ಭೇಟಿ ನೀಡಿದ ಮನೆಯವರು ನಮ್ಮಲ್ಲಿ ತೋರಿದ ಆದರ, ಪ್ರೀತಿ ವಿಶ್ವಾಸಗಳು ಮರೆಯುವುದಲ್ಲ.

ಈ ನಡುವೆ ನಮ್ಮ ತಂಡದ ಶ್ರೀ ರಮಾನಾಥ ಕೋಟೆಕಾರ್ ಈ ಎಲ್ಲ ಅಧ್ಯಯನಗಳ ಪೂರ್ವ ಸೂಚನಾ ಹಂತವೆಂಬಂತೆ 2012ರಲ್ಲಿ ‘ತುಳುನಾಡಿನ ಬಿಲ್ಲವರು’ ಕೃತಿಯನ್ನು ಪ್ರಕಟಿಸಿದ್ದರು. ಬಾಬು ಶಿವ ಪೂಜಾರಿಯವರು ಪ್ರಧಾನ ಸಂಶೋಧಕರಾಗಿರುವ ನಮ್ಮ ಇಡಿಯ ಅಧ್ಯಯನ ಸಮಗ್ರ ಸ್ವರೂಪದಲ್ಲಿ ನಿಧಾನ ಗತಿಯಲ್ಲಿ ಸಿದ್ಧಗೊಳ್ಳುತ್ತಾ ಮುಂಬೈಯ ಪ್ರಧಾನ ಸಂಶೋಧಕರ ಮೇಜಿನ ಸುತ್ತ ಹರಡಿಕೊಂಡು ರಾಶಿ ರಾಶಿ ಅಧ್ಯಯನ ಹಾಳೆಗಳು, ಸೀಡಿಗಳು, ಚಿತ್ರಗಳು ಮಾಹಿತಿ ಸಾಮಗ್ರಿಗಳ ನಡುವೆ ಹುದುಗಿ ಫೋನ್ ಮೂಲಕ ಹೆಜ್ಜೆ ಹೆಜ್ಜೆಯ ಚರ್ಚೆಗಳು, ಸಂದೇಹಗಳು ಪರಿಹಾರಗಳು, ಡಿಟಿಪಿ ಹಂತಗಳು, ತಿದ್ದುಪಡಿಗಳು, ಕಾಲಬಾಧಿತ ಘಟನೆಗಳು ಇವೆಲ್ಲದರ ಬಳಿಕ ಇದೀಗ ಸಂಶೋಧನಾ ಗ್ರಂಥವು ಮುಂಬೈಯಲ್ಲಿ ಮುದ್ರಣದ ಮುಕ್ತಾಯ ಹಂತ ತಲುಪಿ ಸದ್ಯವೇ ಲೋಕಾರ್ಪಣೆಗೆ ಅನುವಾಗುತ್ತಿದೆ. ಆ ಮೂಲಕ ಬಿಲ್ಲವರ ಭವ್ಯ ಇತಿಹಾಸದ ಮುಖ್ಯವಾದೊಂದು ಅಧ್ಯಯನ ಪುಟಗಳು ಅನಾವರಣಗೊಳ್ಳಲಿವೆ.