ನನ್ನನ್ನು ಸೇರಿಸಿ ಕಾಂಗ್ರೆಸ್‍ನ 50 ಅಭ್ಯರ್ಥಿಗಳ ಮೇಲೆ ಐಟಿ ದಾಳಿ ಸಂಚು: ಲಕ್ಷ್ಮಿ ಹೆಬ್ಬಾಳ್ಕರ್

''ಜನರನ್ನು ಗೊಂದಲಕ್ಕೆ ಸಿಲುಕಿಸಲು ಬಿಜೆಪಿ ಕುತಂತ್ರ ನಡೆಸಿದೆ''

Update: 2023-04-30 11:57 GMT

ಬೆಳಗಾವಿ, ಎ. 30: ‘ವಿಧಾನಸಭೆ ಚುನಾವಣೆಗೆ ದಿನಗಣನೇ ಆರಂಭವಾಗಿರುವ ಸಂದರ್ಭದಲ್ಲೇ ನಾನೂ ಸೇರಿದಂತೆ ಚುನಾವಣೆಗೆ ಸ್ಪರ್ಧಿಸಿರುವ ಸುಮಾರು 50 ಮಂದಿ ಕಾಂಗ್ರೆಸ್ ಅಭ್ಯರ್ಥಿಗಳು ಮತ್ತವರ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಲು ಕೇಂದ್ರ ತನಿಖಾ ಸಂಸ್ಥೆಗಳು ಮೂಲಕ ಬಿಜೆಪಿ ಹುನ್ನಾರ ನಡೆಸಿದೆ’ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗಂಭೀರ ಆರೋಪ ಮಾಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿಯವರು ಹತಾಶೆಯಿಂದ ವಾಮ ಮಾರ್ಗಗಳನ್ನು ಹಿಡಿಯುವ ಸುದ್ದಿ ಗೊತ್ತಾಗಿದೆ. ಬೆಳಗಾವಿಯಲ್ಲಿ ನಾನು ಮತ್ತು ಮೂವರು ಸೇರಿದಂತೆ ಸುಮಾರು 50 ಕಾಂಗ್ರೆಸ್ ಅಭ್ಯರ್ಥಿ ಹಾಗೂ ಅವರ ಸಂಬಂಧಿಕರ ಮೇಲೆ ಐಟಿ, ಈಡಿ, ಲೋಕಾಯುಕ್ತ ದಾಳಿ ಮಾಡುವ ಸುಳಿವು ಸಿಕ್ಕಿದೆ’ ಎಂದು ಹೇಳಿದರು.

‘ಎಲ್ಲ ಕಡೆಗಳಲ್ಲಿ ನಮ್ಮ ಮಾಹಿತಿದಾರರು, ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯದನ್ನು ಬಯಸುವವರು ಇರುತ್ತಾರೆ. ಅವರಿಂದ ಈ ಸಂಗತಿ ತಿಳಿದು ಬಂದಿದೆ. ನಾವು ಯಾವುದೇ ತಪ್ಪು ಮಾಡಿಲ್ಲ. ಚುನಾವಣೆ ಕೇವಲ 10 ದಿನಗಳು ಇರುವ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು, ಜನರು ಗೊಂದಲಕ್ಕೆ ಸಿಲುಕಿಸಲು ಬಿಜೆಪಿ ಕುತಂತ್ರ ನಡೆಸಿದೆ ಎಂದು ಅವರು ದೂರಿದರು.

‘ಯಾವುದೇ ಚುನಾವಣೆ ಬಂದಾಗ ವಿಪಕ್ಷದವರನ್ನು ಗುರಿ ಮಾಡಿ ಮತದಾರರ ಗಮನ ಬೇರೆಡೆ ಸೇಳೆಯುವುದು ಬಿಜೆಪಿ ಛಾಳಿ. ಕೊನೆಯ ಹಂತದ ಪ್ರಚಾರದ ಸಂದರ್ಭದಲ್ಲಿ ಇಂತಹ ಮಾರ್ಗವನ್ನು ಬಿಜೆಪಿ ಕೈಬಿಡಬೇಕು. ನನ್ನ ಮೇಲಿನ ದಾಳಿಯಿಂದ ನನ್ನ ಕ್ಷೇತ್ರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ತಿಳಿಸಿದರು.

ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ‘ಪ್ರತಿಯೊಂದು ರಾಜ್ಯದಲ್ಲಿ ಚುನಾವಣೆಯ ವೇಳೆ ತನಿಖಾ ಸಂಸ್ಥೆಗಳ ದುರುಪಯೋಗ ಮಾಡಿಕೊಳ್ಳುವುದು ಬಿಜೆಪಿಯ ಜಾಯಮಾನ. ಪ್ರಜಾಪ್ರಭುತ್ವದಲ್ಲಿ ಅಭ್ಯರ್ಥಿಗಳ ಆಯ್ಕೆ ಜನರು ಮಾಡಬೇಕು. ಅದನ್ನು ಬಿಟ್ಟು ಬಿಜೆಪಿ ವಾಮಮಾರ್ಗದ ಮೂಲಕ ಪ್ರತಿಪಕ್ಷಗಳನ್ನು ಬೆದರಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

Similar News