ನನ್ನನ್ನು ಸೋಲಿಸಲು ಇದು ಗುಜರಾತ್ ಅಲ್ಲ: ಜಗದೀಶ್ ಶೆಟ್ಟರ್
''ಬಿಜೆಪಿ ಬಿಟ್ಟು ಬರುವ ಮನಸ್ಸು ಇರಲಿಲ್ಲ, ಈಗ ಕಾಂಗ್ರೆಸ್...''
ಕೊಪ್ಪಳ, ಮೇ.1: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ನನ್ನನ್ನು ಸೋಲಿಸುವುದಾಗಿ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ, ಇದು ಗುಜರಾತ್ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರ ಹೃದಯದಲ್ಲಿ ಭದ್ರವಾಗಿದ್ದೇನೆ. ಹಿಂದಿನ ಯಾವ ಚುನಾವಣೆಗಳಲ್ಲಿಯೂ ಸೋತಿಲ್ಲ. ಎಲ್ಲ ಮತದಾರರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಅಲ್ಲದೆ
ಇಲ್ಲಿಯ ರಾಜಕಾರಣ ಹಾಗೂ ಜನರ ಪ್ರೀತಿ ಎಂಥದ್ದು ಎಂಬುದು ನನಗೆ ಗೊತ್ತಿದೆ ಎಂದರು.
ಬಿಜೆಪಿಯಲ್ಲಿ ಹಿರಿಯ ಲಿಂಗಾಯತ ನಾಯಕರು ಯಾರೂ ಇರಬಾರದು ಎನ್ನುವ ಕಾರಣಕ್ಕೆ ಬಿಜೆಪಿ ನನಗೆ ಟಿಕೆಟ್ ನೀಡಿಲ್ಲ ಎಂದ ಅವರು, ಈಗಾಗಲೇ ನಾನು ಮುಖ್ಯಮಂತ್ರಿಯಾಗಿದ್ದಾನೆ. ಮತ್ತೆ ಸಿ.ಎಂ. ಆಗುವ ಆಸೆ ಇಲ್ಲ. ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು ಹೋಗುವೆ.
ಬಿಜೆಪಿಯವರು ಗೌರವಯುತವಾಗಿ ನಡೆಸಿಕೊಂಡಿದ್ದರೆ ಪಕ್ಷವನ್ನೇ ಬಿಟ್ಟುಬರುತ್ತಿರಲಿಲ್ಲ. ಬಿಟ್ಟು ಬರುವ ಮನಸ್ಸೂ ಇರಲಿಲ್ಲ. ಬಿಜೆಪಿಯಲ್ಲಿದ್ದಾಗ ಆ ಪಕ್ಷವನ್ನು ಕಟ್ಟಿ ಬೆಳೆಸಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಈಗ ಕಾಂಗ್ರೆಸ್ ಪಕ್ಷವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುವೆ. ಇರುವ ಪಕ್ಷಕ್ಕೆ ನನ್ನ ಬದ್ಧತೆ ಎಂದರು.