ಸಿ.ಟಿ.ರವಿ ಸೋಲಿಸಲು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ: ಜೆಡಿಎಸ್ ಮುಖಂಡ ಎಸ್.ಎಲ್.ಭೋಜೇಗೌಡ
ಚಿಕ್ಕಮಗಳೂರು, ಮೇ 1: ಈ ಬಾರಿ ಚುನಾವಣೆಯ್ಲಿ ಸಿ.ಟಿ.ರವಿಯನ್ನು ಸೋಲಿಸಬೇಕಾಗಿದೆ. ಅವರಿಗೆ ತೀವ್ರ ಸ್ಫರ್ಧೆ ಒಡ್ಡುವ ನಿಟ್ಟಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ಯತೀತ ಪಕ್ಷಗಳ ಮತಗಳು ವಿಭಜನೆಯಾಗುವುದರಿಂದ ಬಿಜೆಪಿ ಗೆಲುವು ಸುಲಭವಾಗುತ್ತಿದೆ. ಆದ್ದರಿಂದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಈ ಬಾರಿ ಬಿಜೆಪಿಗೆ ಸ್ಪರ್ಧೆಯೊಡ್ಡುವ ಪಕ್ಷವನ್ನು ಬೆಂಬಲಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಇದು ಜಡಿಎಸ್ ಪಕ್ಷದ ವರಿಷ್ಠರು ಮತ್ತು ಪಕ್ಷದ ತೀರ್ಮಾನವಲ್ಲ. ಕ್ಷೇತ್ರದ ಕಾರ್ಯಕರ್ತರ ತೀರ್ಮಾನ ಎಂದು ಸ್ಪಷ್ಟಪಡಿಸಿದರು.
ಕ್ಷೇತ್ರದಲ್ಲಿ ಕೈಗೊಂಡಿರುವ ತೀರ್ಮಾನದ ಬಗ್ಗೆ ಸ್ಪಷ್ಠನೆ ನೀಡುವಂತೆ ಪಕ್ಷದ ರಾಜ್ಯಾಧ್ಯಕ್ಷರು ನನಗೆ ನೋಟಿಸ್ ನೀಡಿದ್ದಾರೆ. ಅದಕ್ಕೆ ಉತ್ತರಿಸಬೇಕಿದ್ದು, ಚುನಾವಣೆ ಮುಗಿದ ಬಳಿಕ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ತೆರಳಿ ಕ್ಷೇತ್ರದಲ್ಲಿನ ವಾತಾವರಣ ಮತ್ತು ಕೈಗೊಂಡಿರುವ ತೀರ್ಮಾನದ ಬಗ್ಗೆ ಸ್ಪಷ್ಟೀಕರಣ ನೀಡಲಾಗುವುದು ಎಂದ ಅವರು, ಬೇರೆಯವರ ಕುಮ್ಮಕ್ಕಿನಿಂದ ಬಿ.ಎಂ.ತಿಮ್ಮಶೆಟ್ಟಿ ಅವರು ಚಿಕ್ಕಮಗಳೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ವಿಷಯ ಪಂಚರತ್ನ ಯಾತ್ರೆ ಬಳಿಕ ಗೊತ್ತಾಯಿತು. ಬಿ ಫಾರಂ ನೀಡದಂತೆ ತಡೆಯಲು ಮುಂದಾದರೇ ಗೊಂದಲ ಸೃಷ್ಟಿಯಾಗುತ್ತದೆ ಎಂಬ ಕಾರಣಕ್ಕೆ ಅವರಿಗೆ ಬಿ.ಫಾರಂ ನೀಡಲಾಯಿತು. ಆದರೆ, ಬಿಜೆಪಿ ಸೋಲಿಸಬೇಕಾಗಿರುವುದರಿಂದ ಪ್ರತಿಸ್ಪರ್ಧಿಯನ್ನು ಬೆಂಬಲಿಸಲು ಕಾರ್ಯಕರ್ತರು ತೀರ್ಮಾನ ಕೈಗೊಂಡಿದ್ದಾರೆ ಎಂದ ಅವರು, ಜಿಲ್ಲೆಯ ಶೃಂಗೇರಿಯಲ್ಲಿ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಎಸ್.ಶೆಟ್ಟಿ, ಮೂಡಿಗೆರೆಯಲ್ಲಿ ಎಂ.ಪಿ.ಕುಮಾರಸ್ವಾಮಿ ಹಾಗೂ ಕಡೂರಿನಲ್ಲಿ ವೈಎಸ್‍ವಿ ದತ್ತ ಈ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದರು.
ಮೂಡಿಗೆರೆ ಕ್ಷೇತ್ರದಲ್ಲಿ ಬಿ.ಬಿ.ನಿಂಗಯ್ಯ ಅವರಿಗೆ ಟಿಕೆಟ್ ತಪ್ಪಲು ಭೋಜೇಗೌಡ ಕಾರಣ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ನಿಂಗಯ್ಯ ಅವರಿಗೆ ಚುನಾವಣೆ ನಡೆಸಲಾಗದ ಸ್ಥಿತಿಯನ್ನು ತಿಳಿದುಕೊಂಡು ಬೇರೆಯವರಿಗೆ ಟಿಕೆಟ್ ನೀಡುವಂತೆ ಕ್ಷೇತ್ರದ ಮುಖಂಡರು ಒತ್ತಾಯಿಸಿದ್ದರಿಂದ ಟಿಕೆಟ್ ಕೈ ತಪ್ಪಿದೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದಲ್ಲಿ ಸೀರೆಗಳು ಹಂಚಿಕೆಯಾಗುತ್ತಿದ್ದು, ಪರಿಶೀಲಿಸುವಂತೆ ಶಿಶುಅಭಿವೃದ್ಧಿ ಯೋಜನಾಧಿಕಾರಿಗೆ ತಿಳಿಸಲಾಗಿದೆ. ಕ್ಷೇತ್ರದಲ್ಲಿ ಆಡಳಿತದ ಪಕ್ಷದ ಕೆಲ ಮುಖಂಡರು ಚಿನ್ನದ ನಾಣ್ಯಗಳನ್ನು ಹಂಚಲು ಮುಂದಾಗಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ನಾಣ್ಯಗಳು ಅಸಲಿಯೋ, ನಕಲಿಯೋ ಎಂದು ಗೊತ್ತಾಗಬೇಕಿದೆ, ಅದನ್ನು ಪಡೆದು ಮೋಸಹೋಗದಂತೆ ಜನರು ಎಚ್ಚರವಹಿಸಬೇಕಾಗಿದೆ ಎಂದರು.
ಕ್ಷೇತ್ರದಲ್ಲಿ ಸಿ.ಟಿ.ರವಿಯವರು ಅಭಿವೃದ್ಧಿ ಕೈಗೊಂಡಿದ್ದರೇ ಅಭಿವೃದ್ದಿ ವಿಚಾರಗಳನ್ನು ಮುಂದಿಟ್ಟುಕೊಂಡು ಮತಕೇಳಿ ಗೆಲ್ಲಬೇಕು. ಆದರೆ, ಕೇಂದ್ರ ಸಚಿವರನ್ನು ಕರೆಸಿಕೊಂಡು ಬೀದಿಬೀದಿಯಲ್ಲಿ ಪ್ರಚಾರ ನಡೆಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ ಅವರು, ಅಂತಹ ನಾಯಕರನ್ನು ವೀಕ್ ಕ್ಯಾಂಡಿಟೇಡ್ ಕ್ಷೇತ್ರಕ್ಕೆ ಕಳುಹಿಸಿಕೊಡುವುದು ಒಳ್ಳೆಯದಲ್ಲವೇ ಎಂದರು.
ಬಿಜೆಪಿ ಅಭ್ಯರ್ಥಿ ವಿರುದ್ಧ ಮಾತನಾಡಿದರೇ ಹೊಟ್ಟೆಕಿಚ್ಚಿಗಾಗಿ ಎಂದು ಹೇಳಲಾಗುತ್ತಿದೆ. ಕಳೆದ ಚುನಾವಣೆಯಲ್ಲಿ ನಿಮಗೆ ಮತನೀಡದ 83ಸಾವಿರ ಜನರು ನಿಮ್ಮ ಬಗ್ಗೆ ಹೊಟ್ಟೆಕಿಚ್ಚುಪಟ್ಟು, ವಿಷ ತುಂಬಿಕೊಂಡಿದ್ದಾರೆಯೇ ಎಂದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮ ವಿರುದ್ಧ ಮಾತನಾಡಬಾರದ ಎಂದು ಪ್ರಶ್ನಿಸಿದ ಭೋಜೇಗೌಡ, ಹಿಂದುತ್ವದ ಬಗ್ಗೆ ಮಾತನಾಡುವ ಶಾಸಕರು ಚರ್ಚ್‍ನಲ್ಲಿ ಪ್ರಾರ್ಥನೆ ಸಲ್ಲಿಸುವ ವೇಳೆಯಲ್ಲಿ ಅವರ ಸಂಬಂಧಿಯನ್ನು ಕಳುಹಿಸಿ ಮತಯಾಚಿಸುತ್ತಾರೆ. ಚುನಾವಣೆ ಬಂದಾಗ ಪ್ರಾರ್ಥನಾ ಮಂದಿರಗಳು ಒಳ್ಳೆಯದಾಗಿ ಕಾಣಿಸಿಕೊಳ್ಳುತ್ತವೆ. ಆಮೇಲೆ ಅವುಗಳು ಮತಪರಿವರ್ತನೆಯ ಕೇಂದ್ರಗಳಾಗಿ ಗೋಚರಿಸುತ್ತವೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ನಿಸಾರ್ ಅಹ್ಮದ್, ನಗರಸಭೆ ಸದಸ್ಯರಾದ ಕುಮಾರಗೌಡ, ಗೋಪಿ, ಜೆಡಿಎಸ್ ನಗರ ಅಧ್ಯಕ್ಷ ಸಿ.ಕೆ.ಮೂರ್ತಿ, ಮುಖಂಡರಾದ ದಿನೇಶ್, ದೇವಿಪ್ರಸಾದ್, ಪೂರ್ಣೇಶ್ ಉಪಸ್ಥಿತರಿದ್ದರು.