ಕರ್ನಾಟಕ ರಾಜ್ಯ ದೇಶಕ್ಕೇ ಮಾದರಿಯಾಗಿದೆ; ಗುಜರಾತ್, ಯುಪಿ ಮಾಡಲ್ ನ ಅಗತ್ಯವಿಲ್ಲ: ಬಿ.ಕೆ.ಹರಿಪ್ರಸಾದ್

Update: 2023-05-02 12:03 GMT

ಮಡಿಕೇರಿ ಮೇ 2 : ಪ್ರಗತಿಯಲ್ಲ್ಲಿ ಕರ್ನಾಟಕ ದೇಶಕ್ಕೇ ಮಾದರಿಯಾಗಿದ್ದು, ಗುಜರಾತ್ ಮತ್ತು ಉತ್ತರಪ್ರದೇಶದ ಮಾಡೆಲ್ ಇಲ್ಲಿಗೆ ಅಗತ್ಯವಿಲ್ಲವೆಂದು ವಿದಾನ ಪರಿಷತ್ ನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ಪ್ರಗತಿಯಲ್ಲಿ ಉತ್ತರ ಪ್ರದೇಶಕ್ಕಿಂತ 200 ವರ್ಷ ಮತ್ತು ಗುಜರಾತ್ ಗಿಂತ 50 ವರ್ಷ ಮುಂದಿದೆ. ಆದರೂ ಕರ್ನಾಟಕಕ್ಕೆ ಎರಡು ರಾಜ್ಯಗಳ ಮಾಡಲ್ ನ್ನು ಅಳವಡಿಸುವ ಬಿಜೆಪಿ ಹೇಳಿಕೆ ಸರಿಯಲ್ಲವೆಂದು ಹೇಳಿದರು.

ಶಾಸಕರ ಖರೀದಿಯ ಮೂಲಕ ರಚನೆಯಾಗಿರುವ ಬಿಜೆಪಿ ಸರ್ಕಾರ ಜನಮನ್ನಣೆಯನ್ನು ಕಳೆದುಕೊಂಡಿದೆ. ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಯುವ ಸಮೂಹಕ್ಕಾಗಿ ಯಾವುದೇ ಕಾಳಜಿಯ ಕಾರ್ಯಕ್ರಮಗಳು ಜಾರಿಯಾಗಿಲ್ಲ. ಸರ್ಕಾರ ರಚಿಸುವಾಗ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಇದು ಡಬಲ್ ಎಂಜಿನ್ ಸರ್ಕಾರವಲ್ಲ, ಡಬಲ್ ದೋಖಾ ಸರ್ಕಾರ ಎಂದು ಟೀಕಿಸಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಾಗ ವಾರ್ಷಿಕ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಇವರ ಭರವಸೆಯ ಪ್ರಕಾರ ಕಳೆದ 9 ವರ್ಷಗಳಲ್ಲಿ 18 ಕೊಟಿ ಮಂದಿಗೆ ಉದ್ಯೋಗ ಸಿಗಬೇಕಾಗಿತ್ತು. ಆದರೆ ಇಂದಿಗೂ ಕೇಂದ್ರ ಸರ್ಕಾರದ 40 ಲಕ್ಷ ಮತ್ತು ರಾಜ್ಯದಲ್ಲಿ ಎರಡೂವರೆ ಲಕ್ಷ ಉದ್ಯೋಗಗಳು ಭರ್ತಿಯಾಗದೆ ಖಾಲಿ ಉಳಿದಿವೆ ಎಂದು ಆರೋಪಿಸಿದರು.

ಕಾಂಗ್ರೆಸ್ ನ ಉಚಿತ ಭಾಗ್ಯಗಳನ್ನು ಟೀಕಿಸುತ್ತಲೇ ಬರುತ್ತಿದ್ದ ವಿಶ್ವ ಗುರು, ಇತ್ತೀಚೆಗೆ ಬಿಜೆಪಿ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿದ್ದ ಉಚಿತ ಭಾಗ್ಯಗಳನ್ನು ಯಾಕೆ ಗಮನಿಸಲಿಲ್ಲ ಎಂದು ಪ್ರಶ್ನಿಸಿದ ಹರಿಪ್ರಸಾದ್, ಬಿಜೆಪಿ ಸರ್ಕಾರ ಈ ಹಿಂದೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಯೋಜನೆಗಳ ಹೆಸರುಗಳನ್ನು ಬದಲಾಯಿಸಿ ತನ್ನದೆಂದು ಹೇಳಿಕೊಳ್ಳುತ್ತಿದೆ. ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಮೊಟ್ಟೆ ಕದ್ದವರು ಇದೀಗ ಪ್ರತಿದಿನ ಹಾಲು ನೀಡುತ್ತೇವೆ ಎಂದು ಘೋಷಣೆ ಮಾಡುವ ಮೂಲಕ ಮೂಗಿನ ಮೇಲೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚಾಮರಾಜನಗರಕ್ಕೆ ಹುಲಿ ನೋಡಲು ಬಂದ ವಿಶ್ವಗುರು ಆಮ್ಲಜನಕದ ಕೊರತೆಯಿಂದ ಮೃತಪಟ್ಟ ಕುಟುಂಬಗಳಿಗೆ ಸಾಂತ್ವನ ಹೇಳುವ ಸೌಜನ್ಯವನ್ನು ತೋರಿಲ್ಲ. ತನ್ನನ್ನು ಎಲ್ಲಿ ಮಾರಾಟ ಮಾಡಿ ಬಿಡುತ್ತಾರೆ ಎನ್ನುವ ಆತಂಕದಲ್ಲಿ ಹುಲಿ ಕೂಡ ಕಣ್ಣಿಗೆ ಬಿದ್ದಿಲ್ಲ. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದೆ ಜೇಮ್ಸ್ ಬಾಂಡ್ ನಂತೆ ಬಂದು ಹೋಗಿದ್ದಾರೆ ಎಂದು ಹರಿಪ್ರಸಾದ್ ಟೀಕಿಸಿದರು.

::: ಕೊಡಗಿನಲ್ಲಿ ತ್ರಿಬಲ್ ಎಂಜಿನ್

ಕೊಡಗು ಜಿಲ್ಲೆಯಲ್ಲಿ ತ್ರಿಬಲ್ ಎಂಜಿನ್ ಸರ್ಕಾರವಿದೆ, ಸ್ಥಳೀಯ ಆಡಳಿತ, ವಿಧಾನಸಭೆ ಮತ್ತು ಲೋಕಸಭೆಯಲ್ಲೂ ಬಿಜೆಪಿ ಪ್ರತಿನಿಧಿಗಳಿದ್ದಾರೆ. ಆದರೆ ಕೊಡಗಿನ ಪರಿಸ್ಥಿತಿ ನೋಡಿದರೆ ದು:ಖವಾಗುತ್ತದೆ. ಕಳೆದ 20-25 ವರ್ಷಗಳಿಂದ ಆಡಳಿತ ನಡೆಸಿದವರು ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಕೂಡ ನೀಡಿಲ್ಲ. ಈ ಬಾರಿ ಜಿಲ್ಲೆಯ ಜನ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಯಾವುದೇ ವ್ಯಕ್ತಿ, ಎಲ್ಲಿ ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿದೆ. ಆದರೆ ಸಂಸದ ಪ್ರತಾಪ್ ಸಿಂಹ ಅವರು ಕೊಡಗಿನ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೊರಗಿನವರೆಂದು ಹೇಳಿಕೆ ನೀಡಿರುವುದು ಖಂಡನೀಯ. ಸಂಸದರಾಗಿ ಅವರ ಸ್ಥಾನಕ್ಕೆ ಈ ರೀತಿಯ ಹೇಳಿಕೆ ಶೋಭೆ ತರುವುದಿಲ್ಲ. ಪ್ರತಾಪ್ ಸಿಂಹ ಅವರು ಕೊಡಗಿನವರೇ ಎಂದು ಹರಿಪ್ರಸಾದ್ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ, ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್, ಮಡಿಕೇರಿ ಬ್ಲಾಕ್ ಅಧ್ಯಕ್ಷ ಹೆಚ್.ಎ.ಹಂಸ, ನಗರಾಧ್ಯಕ್ಷ ಬಿ.ವೈ.ರಾಜೇಶ್ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಉಪಸ್ಥಿತರಿದ್ದರು. 

Similar News