ಬಜರಂಗಿಗಳು ಸಿಡಿದೆದ್ದರೆ ಕಾಂಗ್ರೆಸ್ ದೇಶಬಿಟ್ಟು ಹೋಗಬೇಕಾಗುತ್ತೆ: ಸಿಎಂ ಬೊಮ್ಮಾಯಿ

Update: 2023-05-02 12:16 GMT

ಧಾರವಾಡ, ಮೇ 2: ‘ಹನುಮಂತನ ಭಕ್ತರು ಬಜರಂಗದಳದ ಭಜರಂಗಿಗಳು. ಅದನ್ನು ನಿಷೇಧ ಮಾಡುತ್ತೆವೆ ಎಂದು ಕಾಂಗ್ರೆಸ್‍ನವರು ಹೇಳುತ್ತಿದ್ದಾರೆ. ಹನುಮನ ಭಕ್ತರು ಒಬ್ಬೊಬ್ಬರು ಸಿಡಿದೆದ್ದು ನಿಂತರೆ ಕಾಂಗ್ರೆಸ್ ಪಕ್ಷ ದೇಶದಿಂದಲೇ ಬೇರು ಸಮೇತ ಕಿತ್ತೊಗಿಯುತ್ತಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ಜಿಲ್ಲೆಯ ನವಲಗುಂದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಂಕರ ಪಾಟೀಲ್ ಮುನೇನಕೊಪ್ಪ ಪರವಾಗಿ ರೋಡ್ ಶೋ ನಡೆಸಿದ ವೇಳೆ ಮಾತನಾಡಿದ ಅವರು, ‘ನವಲಗುಂದ ಬಂಡಾಯದ ನಾಡು. ಸ್ವಾತಂತ್ರದ ನಂತರ ರೈತರ ಬಂಡಾಯ ಪ್ರಾರಂಭ ಆಗಿದ್ದು ನವಲಗುಂದ ಮತ್ತು ನರಗುಂದದಿಂದ. ಈ ಭಾಗದ ರೈತರು ಅತ್ಯಂತ ಶ್ರಮ ಜೀವಿಗಳು. ಹಿಂದೆ ಇಲ್ಲಿ ಮಲಪ್ರಭ ಹರಿದರೂ ಈ ಭಾಗದ ಜಮೀನಿಗೆ ನೀರು ಬಂದಿರಲಿಲ್ಲ. ನೀರು ಕೊಡದೇನೇ ರೈತರಿಗೆ ಕರ ವಸೂಲಿ ಮಾಡಿ ಪೊಲೀಸರಿಂದ ರೈತರ ಮೇಲೆ ಗುಂಡು ಹಾಕಿದವರು ಕಾಂಗ್ರೆಸ್ ಪಕ್ಷದವರು ಎಂದು ಟೀಕಿಸಿದರು.

ಕಾಂಗ್ರೆಸ್‍ಗೆ ಮತ ಹಾಕ್ತೀರಾ?: ನ್ಯಾಯ ಕೇಳಿದ ಕಳಸಾ-ಬಂಡೂರಿ ಹೋರಾಟಗಾರರಿಗೆ ಪೊಲಿಸರು ಎರಡು ವಾಹನಗಳು ಮಧ್ಯೆ ಹೋಗಲು ಬಿಟ್ಟು ದನಕ್ಕೆ ಹೊಡೆದ ಹಾಗೆ ಹೊಡೆದಿದ್ದಾರೆ. ಮನೆಗೆ ಒಳಗೆ ಹೋಗಿ ಮಹಿಳೆಯರನ್ನು ಹೊಡೆದರು. ಅಂತಹ ಸಿದ್ದರಾಮಯ್ಯ ಸರಕಾರಕ್ಕೆ ಮತ ಹಾಕುತ್ತೀರಾ? ಎಂದು ಆಕ್ರೋಶ ಹೊರಹಾಕಿದರು.

‘ಸಾಮಾಜಿಕ ನ್ಯಾಯ ಎನ್ನುತ್ತಿದ್ದ ಕಾಂಗ್ರೆಸ್ ಅವರು ಮೀಸಲಾತಿ ಹೆಚ್ಚಳದ ನಮ್ಮ ನಿರ್ಧಾರವನ್ನು ಸಂವಿಧಾನ ವಿರೋಧಿ ಎಂದು ಹೇಳಿದರು. ನಾವು ಎಲ್ಲ ಸಮಾಜಗಳಿಗೆ ನ್ಯಾಯ ಕೊಟ್ಟಿದ್ದೀವಿ. ಆದರೆ ಅವರು ಹಿಂಬಾಗಿಲ ಮೂಲಕ ಕೋರ್ಟ್ ಗೆ ಹೋಗಿದ್ದಾರೆ. ಈಗ ಕಾಂಗ್ರೆಸ್ ಅವರು ಬಜರಂಗ ದಳ ನಿಷೇಧ ಮಾಡುವುದಾಗಿ ಹೇಳುತ್ತಾರೆ. ದೇಶದ್ರೋಹ, ಭಯೋತ್ಪಾದನೆ ಮಾಡುವ ಪಿಎಫ್‍ಐ ಜೊತೆ ಬಜರಂಗದಳವನ್ನು ಸೇರಿಸಿದ್ದಾರೆ ಎಂದು ಟೀಕಿಸಿದರು.

‘ನಮ್ಮ ಪರಂಪರೆ, ಧರ್ಮ, ಇತಿಹಾಸ ಗಟ್ಟಿಕೊಳಿಸಿರುವುದು ಬಜರಂಗದಳ. ಹನುಮನ ಭಕ್ತರು ಒಬ್ಬೊಬ್ಬರು ಸಿಡಿದೆದ್ದು ನಿಂತರೆ ಕಾಂಗ್ರೆಸ್ ಪಕ್ಷ ದೇಶದಿಂದಲೇ ಬೇರು ಸಮೇತ ಕಿತ್ತೊಗೆಯುತಾರೆ. ಉತ್ತರದ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ದೇವಸ್ಥಾನ ನಿರ್ಮಾಣ ಆಗುತ್ತಿದ್ದರೆ ದಕ್ಷಿಣದ ಅಂಜನಾದ್ರಿಯಲ್ಲಿ ಆಂಜನೇಯ ಸ್ವಾಮಿ ಅಭಿವೃದ್ಧಿ ಆಗುತ್ತಿದೆ’

-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

Similar News