ಕೊರೋನ ವೇಳೆಯಲ್ಲಿ ತಾಯಿ ಸಾವು ಹಿನ್ನೆಲೆ: ವೈದ್ಯೆಗೆ ನೆರವಿನ ಹಸ್ತ ಚಾಚಿದ ಹೈಕೋರ್ಟ್

Update: 2023-05-02 12:33 GMT

ಬೆಂಗಳೂರು, ಮೇ 2: ಕೊರೋನ ಸಂದರ್ಭದಲ್ಲಿ ತಾಯಿ ಮೃತಪಟ್ಟ ಕಾರಣ ದಾಖಲೆಗಳ ಪರಿಶೀಲನೆಗೆ ಹಾಜರಾಗದ ಹಿನ್ನೆಲೆಯಲ್ಲಿ ಸಾಮಾನ್ಯ ಕರ್ತವ್ಯ ವೈದ್ಯಕೀಯ ಅಧಿಕಾರಿ(ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್) ಹುದ್ದೆಯಿಂದ ವಂಚಿತರಾಗಿದ್ದ ವೈದ್ಯೆಯೊಬ್ಬರ ನೆರವಿಗೆ ಹೈಕೋರ್ಟ್ ಧಾವಿಸಿದೆ.

ಅಲ್ಲದೇ, ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆಗಾಗಿ ವೈದ್ಯೆಗೆ ಮತ್ತೊಂದು ಅವಕಾಶ ಕಲ್ಪಿಸುವಂತೆ ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿ ಆದೇಶಿಸಿದೆ. 

ವೈದ್ಯಕೀಯ ಅಧಿಕಾರಿ ಹುದ್ದೆಗೆ ಬೀದರ್ ನ ಡಾ.ಸ್ನೇಹಾ ಅವರನ್ನು ಪರಿಗಣಿಸುವಂತೆ ನಿರ್ದೇಶಿಸಿ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣ(ಕೆಎಟಿ) ಹೊರಡಿಸಿದ್ದ ಆದೇಶ ರದ್ದು ಕೋರಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ಆದೇಶ ಮಾಡಿದೆ. ಜೊತೆಗೆ ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ವೈದ್ಯಾಧಿಕಾರಿ ಹುದ್ದೆಗೆ ನೇಮಕ ಮಾಡಿರುವ ಅಭ್ಯರ್ಥಿಗಿಂತ ಡಾ.ಸ್ನೇಹಾ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ. ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಹುದ್ದೆಗೆ ಮೆರಿಟ್ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿಲ್ಲ. ಅರ್ಹ ಅಭ್ಯರ್ಥಿಗಳು ಲಭ್ಯವಾಗದೇ ದೊಡ್ಡ ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಉಳಿದಿವೆ. ದಾಖಲೆಗಳ ಪರಿಶೀಲನೆಗೆ ಹಾಜರಾಗದಿರಲು ಸ್ನೇಹಾ ಅವರಿಗೆ ಇದ್ದ ಸಂಕಷ್ಟದ ಪರಿಸ್ಥಿತಿ ಪರಿಗಣಿಸಿ ಅವರ ಅರ್ಜಿಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ಪುರಸ್ಕರಿಸಿದೆ. ಜೊತೆಗೆ ಅವರ ಮನವಿ ಪರಿಗಣಿಸುವಂತೆ ಆರೋಗ್ಯ ಇಲಾಖೆಗೆ ನಿರ್ದೇಶಿಸಿದೆ. ಈ ಆದೇಶದಲ್ಲಿ ಮಧ್ಯಪ್ರವೇಶಿಸುವುದಕ್ಕೆ ಯಾವುದೇ ಸಕಾರಣ ಇಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಹುದ್ದೆ ನೇಮಕಾತಿಗೆ 2020ರ ಸೆ.10ರಂದು ಅರ್ಜಿ ಆಹ್ವಾನಿಸಿತ್ತು. ಡಾ.ಸ್ನೇಹಾ ನೇಮಕಾತಿ ಕೋರಿ ಅರ್ಜಿ ಸಲ್ಲಿಸಿದ್ದರು. 

Similar News