ವಿದೇಶದಿಂದ ಮತದಾನ: ಅನಿವಾಸಿ ಭಾರತೀಯರ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು, ಮೇ 2: ಅನಿವಾಸಿ ಭಾರತೀಯರಿಗೆ ಅವರು ನೆಲೆಸಿರುವ ವಿದೇಶದಿಂದಲೇ ಮೇ 10ರಂದು ಕರ್ನಾಟಕದಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಮತ ಚಲಾಯಿಸಲು ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ರಾಜರಾಜೇಶ್ವರಿ ನಗರ ನಿವಾಸಿಯಾದ ಸಾಗರೋತ್ತರ ಕನ್ನಡಿಗರ ಸಂಘದ ಜಂಟಿ ಕಾರ್ಯದರ್ಶಿ ಎಂ.ರವಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ರಜಾಕಾಲೀನ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಹೊರ ದೇಶಗಳಲ್ಲಿ ಕೆಲಸ ಮಾಡುತ್ತಿರುವ 60 ಲಕ್ಷ ಭಾರತೀಯರ ಪೈಕಿ ಲಕ್ಷಾಂತರ ಅನಿವಾಸಿ ಭಾರತೀಯರು ಮತ ಹಾಕಲು ಅರ್ಹರಾಗಿದ್ದಾರೆ. ಅವರಿಗೆ ಭಾರತದಲ್ಲಿ ಚುನಾವಣೆ ನಡೆಯುವ ಸಂದರ್ಭದಲ್ಲಿ ಅಲ್ಲಿ ಇರುವಂತಹ ಭಾರತದ ರಾಯಭಾರ ಕಚೇರಿಗೆ ತೆರಳಿ ಮತದಾನ ಮಾಡಲು ಅವಕಾಶ ನೀಡಬೇಕು. ಆದುದರಿಂದ, ಭಾರತೀಯ ಚುನಾವಣಾ ಆಯೋಗ ಮತ್ತು ಕೇಂದ್ರ ಸರಕಾರಕ್ಕೆ ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಕೋರಿದ್ದರು.
ಅಲ್ಲದೆ, ವಿದೇಶದಲ್ಲಿರುವ ಭಾರತೀಯರಿಗೆ ಅಂಚೆ ಮೂಲಕವಾದರೂ ಮತದಾನ ಮಾಡಲು ಅವಕಾಶ ಕಲ್ಪಿಸಿಕೊಡಬೇಕೆಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗೆ ಅರ್ಜಿದಾರರು ಕೋರಿದ್ದರು. ಮತದಾನದ ಹಕ್ಕು ಮೂಲಭೂತ ಹಕ್ಕಲ್ಲ ಎಂದು ಚುನಾವಣಾ ಆಯೋಗ ಪ್ರತಿಪಾದಿಸಿದೆ. ಇದನ್ನು ಪುರಸ್ಕರಿಸಿದ ನ್ಯಾಯಪೀಠ, ಈ ವಿಷಯವು ವಿಚಾರಣೆಗೆ ಅರ್ಹತೆ ಹೊಂದಿಲ್ಲ. ಹೀಗಾಗಿ, ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ತಿಳಿಸಿತು.