ಸೇಬು, ಮಾವು ಮಾರಾಟ ಮಾಡುವ ಮೂಲಕ ವಿಭಿನ್ನವಾಗಿ ಮತಯಾಚನೆ ಮಾಡಿದ ವಾಟಾಳ್ ನಾಗರಾಜ್
ಚಾಮರಾಜನಗರ, ಮೇ 2- ತಳ್ಳುಗಾಡಿಯಲ್ಲಿ ಸೇಬು, ಮಾವು ಹಣ್ಣುಗಳನ್ನು ಮಾರಾಟ ಮಾಡುವ ಮೂಲಕ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್ ನಾಗರಾಜ್ ವಿಭಿನ್ನವಾಗಿ ಮತಯಾಚನೆ ಮಾಡಿದರು.
ಕರ್ನಾಟಕದಲ್ಲಿ ವಿಭಿನ್ನ ಚಳವಳಿಗಳ ಮೂಲಕವೇ ಪ್ರಸಿದ್ಧರಾಗಿರುವ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಅವರು ಇಂದು ನಗರದ ಹಳೇ ಬಸ್ ಸ್ಟ್ಯಾಂಡ್ ಬಳಿ ತಳ್ಳುಗಾಡಿಗಳಲ್ಲಿ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದವರ ಬಳಿ ತೆರಳಿ ತಾವೇ ಖುದ್ದು ಕೂತು ಸೇಬು ಅರ್ಧ ಕೆಜಿ 100 ರೂ. ಎಂದು ಕೂಗಿ ಗ್ರಾಹಕರಿಗೆ ಸೇಬು, ಮಾವು, ಬಾಳೆಹಣ್ಣುಗಳನ್ನು ತೂಕ ಮಾಡಿ ವ್ಯಾಪಾರ ಮಾಡುವ ಮೂಲಕ ವಿಶಿಷ್ಠವಾಗಿ ಮತಯಾಚಿಸುವ ಮೂಲಕ ಗ್ರಾಹಕರನ್ನು ತಮಗೆ ಮತ ಹಾಕುವಂತೆ ವಿನಂತಿಸಿಕೊಂಡರು.
ಇದೇ ವೇಳೆ ಸುದ್ಧಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಸಣ್ಣಪುಟ್ಟ ವ್ಯಾಪಾರಿಗಳು, ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದೇನೆ, ಇದರಿಂದ ಬಡ ಹಾಗೂ ಸಾಮಾನ್ಯ ಜನರಿಗೆ ಅನುಕೂಲವಾಗಿದ್ದೇನೆ. ನಾನು ಬಡವರ ಹಾಗೂ ಸಾಮಾನ್ಯ ಜನರ ಪರವಾಗಿ ಕೆಲಸ ಮಾಡಿದ್ದೇನೆ. ಹಲವಾರು ಗ್ರಾಮಗಳಲ್ಲಿ ಮನೆ ನಿರ್ಮಾಣ ಮಾಡಿದ್ದೇನೆ.
ಚಾಮರಾಜನಗರದಲ್ಲಿ ಕಳೆದ 15 ವರ್ಷದಿಂದ ಯಾವುದೇ ಅಭಿವೃದ್ಧಿಪಡಿಸಿರುವುದಿಲ್ಲ. ಈ ಭಾಗದ ಶಾಸಕರು ಕಳೆದ 15 ವರ್ಷಗಳಲ್ಲಿ ಶಾಸನಸಭೆಯಲ್ಲಿ ಎಷ್ಟು ಬಾರಿ ಮಾತನಾಡಿದ್ದೀರಿ ಎಂದು ಸವಾಲು ಹಾಕಿದರು.
ಚಾಮರಾಜನಗರ ಜಿಲ್ಲಾ ಕೇಂದ್ರ ಮಾಡಿದ್ದು ರಾಹುಲ್‌ಗಾಂಧಿ ಅಲ್ಲ ನಾನು, ಜೋಡಿ ರಸ್ತೆ ನಿರ್ಮಾಣ ಮಾಡಿದ್ದೇನೆ, ಚಾಮರಾಜನಗರ ಜನತೆಗೆ ಕಾವೇರಿ ಕುಡಿಯುವ ನೀರು ಸೌಲಭ್ಯ ಕಲ್ಪಿಸಿದ್ದೇನೆ. ಇವೆಲ್ಲವನ್ನೂ ಮಾಡಿದ್ದು ನಾನೇ ಹೊರತು ಕಾಂಗ್ರೆಸ್ ಬಿಜೆಪಿಯಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಹಾಗೂ ಬಿಜೆಪಿಯವರು ಜನರನ್ನು ಹಣ, ಜಾತಿ, ಹೆಚಿಡದ ಮೂಲಕ ಮರಳು ಮಾಡಿ ಚಾಮರಾಜನಗರ ಕ್ಷೇತ್ರವನ್ನು ಹಾಳು ಮಾಡುತ್ತಿದ್ದಾರೆ. ಜನರು ಇವರ ಯಾವುದೇ ಆಮಿಷಗಳಿಗೆ ಒಳಗಾಗದೇ ನನಗೆ ಮತನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಶಿವಲಿಂಗಮೂರ್ತಿ, ವಡ್ಡರಹಳ್ಳಿ ಮಹೇಶ್ ಸೇರಿದಂತೆ ಅನೇಕರು ಹಾಜರಿದ್ದರು.