ಕರ್ನಾಟಕ ವಿಧಾನಸಭಾ ಚುನಾವಣೆ: ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ
ಬೆಂಗಳೂರು, ಮೇ 2: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ‘ಪ್ರಜಾಪ್ರಭುತ್ವದ ಹಬ್ಬ'ದಂತೆ ಆಚರಿಸಲಾಗುತ್ತಿದೆ. ಈ ಆಚರಣೆಯ ಭಾಗವಾಗಿ ರಾಜ್ಯ ಚುನಾವಣಾ ಆಯೋಗ ರಾಜ್ಯದ ಛಾಯಾಗ್ರಾಹಕರಿಗೆ ಮತದಾನದ ದಿನವಾದ ಮೇ 10ರಂದು ಮತದಾನದ ವಿಷಯ ಕುರಿತು ಛಾಯಾಚಿತ್ರಗಳನ್ನು ಸೆರೆಹಿಡಿಯಲು ‘ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ’ ಏರ್ಪಡಿಸಿದೆ.
ಈ ಸ್ಪರ್ಧೆಯನ್ನು ರಾಜ್ಯದ ಮಾಧ್ಯಮಗಳಲ್ಲಿ, ಕಾರ್ಯನಿರ್ವಹಿಸುತ್ತಿರುವ ಮತ್ತು ಹವ್ಯಾಸಿ ಛಾಯಾಗ್ರಾಹಕರಿಗಾಗಿ ಏರ್ಪಡಿಸಲಾಗಿದೆ. ವಿಜೇತ ಛಾಯಾಚಿತ್ರಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು.
ಮತದಾನ, ಗ್ರಾಮೀಣ ಮತ್ತು ನಗರ ವಾತಾವರಣ ಮತ್ತು ಮತದಾನವನ್ನು ಉತ್ಸವದಂತೆ ಬಿಂಬಿಸುವ ವಿಷಯಗಳನ್ನು ಆಧರಿಸಿರಬೇಕು. ಮತದಾನದ ವಾತಾವರಣ, ಸಿದ್ಧತೆಗಳು, ಮಟಗಟ್ಟೆ, ಇತ್ಯಾದಿಗಳ ಬಗ್ಗೆ ಛಾಯಾಚಿತ್ರಗಳಿರಬೇಕು. ಛಾಯಾಚಿತ್ರಗಳು ಯಾವುದೇ ರಾಜಕೀಯ ಪಕ್ಷ/ಪಕ್ಷಗಳ ಪ್ರಚಾರ/ಅಭ್ಯರ್ಥಿಗಳು/ ಸ್ವತಂತ್ರ ಅಭ್ಯರ್ಥಿಯ ಚಿಹ್ನೆಗಳಿಗೆ ಸಂಬಂಧಪಟ್ಟಿರಬಾರದು.
ನಿಯಮ ಮತ್ತು ನಿಬಂಧನೆಗಳು: ಸ್ಪರ್ಧೆಯಲ್ಲಿ ಕೇವಲ ಕರ್ನಾಟಕ ರಾಜ್ಯದ ಛಾಯಾಗ್ರಾಹಕರು ಮಾತ್ರ ಭಾಗವಹಿಸಬಹುದು. ಸ್ಪರ್ಧಿಗಳು ತಮ್ಮ ಆಯ್ಕೆಯ 5 ಛಾಯಾಚಿತ್ರಗಳನ್ನು ಮಾತ್ರ ಸಲ್ಲಿಸಬಹುದು. ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುವ ಛಾಯಾಗ್ರಾಹಕರು ಮತ್ತು ಹವ್ಯಾಸಿ ಛಾಯಾಗ್ರಾಹಕರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುವ ಛಾಯಾಗ್ರಾಹಕರು ತಮ್ಮ ಗುರುತಿನ ಚೀಟಿ ಹಾಗೂ ಹವ್ಯಾಸಿ ಛಾಯಾಗ್ರಾಹಕರು ತಮ್ಮ ಮಾನ್ಯತಾ ಕಾರ್ಡ್ ಅಥವಾ ಮಾನ್ಯತೆ ಕಾರ್ಡ್ ಇರದಿದ್ದಲ್ಲಿ ಗುರುತಿನ ಚೀಟಿಯನ್ನು ಸಲ್ಲಿಸಬೇಕು.
ಛಾಯಾಚಿತ್ರಗಳು ಡಿಜಿಟಲ್ ಫಾರ್ಮಟ್‍ನಲ್ಲಿರಬೇಕು. ಕಡ್ಡಾಯವಾಗಿ ಯಾವುದೇ ವಾಟರ್ ಮಾರ್ಕ್, ಲೋಗೋ ಅಥವಾ ಕಾಪಿರೈಟ್‍ಗಳನ್ನು ಹೊಂದಿರಬಾರದು. ಛಾಯಾಚಿತ್ರಗಳು ವಿಸ್ತೃತ ಚಿತ್ರಶೀರ್ಷಿಕೆ, ಛಾಯಾಚಿತ್ರ ಸೆರೆಹಿಡಿದ ಸ್ಥಳ, ದಿನಾಂಕ ಹಾಗೂ ಸಮಯದ ವಿವರಗಳನ್ನು ಹೊಂದಿರಬೇಕು. ಚಿತ್ರ ಶೀರ್ಷಿಕೆಯು ಛಾಯಾಚಿತ್ರವನ್ನು ಸೆರೆಹಿಡಿದ ಸಂದರ್ಭವನ್ನು ಸಂಪೂರ್ಣವಾಗಿ, ನಿಖರವಾಗಿ ವಿವರಿಸುವಂತಿರಬೇಕು, ವಿಷಯಗಳನ್ನು ತಪ್ಪಾಗಿ ನಿರೂಪಿಸುವ ಅಥವಾ ಮರೆಮಾಚಿಸುವಂತಿದ್ದರೆ ಅಂತಹ ಛಾಯಾಚಿತ್ರಗಳನ್ನು ಅನರ್ಹ ಗೊಳಿಸಲಾಗುವುದು.
ಛಾಯಾಚಿತ್ರಗಳು ಡಿಜಿಟಲ್ ಫಾರ್ಮೆಟ್ ನಲ್ಲಿರಬೇಕು. ಆನ್‍ಲೈನ್‍ನಲ್ಲಿ ಸಲ್ಲಿಸಲಾಗುವ ಛಾಯಾಚಿತ್ರಗಳು ಮಾತ್ರ ಅರ್ಹವಾಗಿರುತ್ತವೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಛಾಯಾಚಿತ್ರಗಳ ಪ್ರಿಂಟ್ ಅಥವಾ ಫಿಲ್ಮ್‍ಗಳನ್ನು ಸ್ವೀಕರಿಸಲಾಗುವುದಿಲ್ಲ. ಮೊಬೈಲ್‍ಫೋನ್‍ಗಳಲ್ಲಿ, ಸೆರೆಹಿಡಿದ, ಉತ್ತಮ ಗುಣಮಟ್ಟವಿರುವ ಮತ್ತು ಸೂಚಿಸಲಾಗಿರುವ ಪಿಕ್ಸೆಲ್ ಗಾತ್ರವನ್ನು ಹೊಂದಿದ್ದರೆ, ಅಂತಹ ಛಾಯಾಚಿತ್ರಗಳನ್ನೂ ಪರಿಗಣಿಸಲಾಗುವುದು.
ಶೀರ್ಷಿಕೆಯೊಂದಿಗಿನ ಛಾಯಾಚಿತ್ರ ಮತ್ತಿತರ ಸ್ಪರ್ಧಿಯ ವಿವರಗಳನ್ನು ಇ-ಮೇಲ್ ಐಡಿ: ktkceomedia2023@gmail.com ಗೆ ಸಲ್ಲಿಸುವುದು.
ಸಲ್ಲಿಕೆಗಳನ್ನು ದಿನಾಂಕ: 20-05-2023 ರಂದು ಶನಿವಾರ ಸಂಜೆ 5 ಗಂಟೆಯೊಳಗೆ ಇ- ಮೇಲ್ ಮೂಲಕ ಸಲ್ಲಿಸಬೇಕು ಎಂದು ಅಧಿಕೃತ ಪ್ರಕಟನೆ ತಿಳಿಸಿದೆ.