×
Ad

ರಾಜ್ಯವನ್ನು ಲೂಟಿ ಮಾಡುತ್ತಿರುವ ಬಿಜೆಪಿ ಸರಕಾರವನ್ನು ಕಿತ್ತೊಗೆಯಿರಿ: ಮಂಡ್ಯದಲ್ಲಿ ಪ್ರಿಯಾಂಕಾ ಗಾಂಧಿ

''ಅಮುಲ್‌ನೊಂದಿಗೆ ನಂದಿನಿಯ ವಿಲೀನಕ್ಕೆ ಅವಕಾಶ ನೀಡುವುದಿಲ್ಲ''

Update: 2023-05-02 19:33 IST

ಮಂಡ್ಯ, ಮೇ 2: ರಾಜ್ಯವನ್ನು ಲೂಟಿ ಮಾಡುತ್ತಿರುವ ಬಿಜೆಪಿ ಸರಕಾರವನ್ನು ಕಿತ್ತೊಗೆದು ಜನಪರ ಆಡಳಿತಕ್ಕೆ ಕಾಂಗ್ರೆಸ್ ಸರಕಾರವನ್ನು ಅಸ್ತಿತ್ವಕ್ಕೆ ತರಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಜನತೆಯಲ್ಲಿ ಮನವಿ ಮಾಡಿದ್ದಾರೆ.

ನಗರದಲ್ಲಿ ಮಂಗಳವಾರ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಶಾಸಕರನ್ನು ಖರೀದಿಸುವ ಮೂಲಕ ಅನೈತಿಕವಾಗಿ ಸರಕಾರ ರಚಿಸಿದ ಬಿಜೆಪಿಯು ವ್ಯಾಪಕ ಭ್ರಷ್ಟಾಚಾರದಲ್ಲಿ ರಾಜ್ಯವನ್ನು ಲೂಟಿ ಮಾಡಿದೆ ಎಂದು ಆರೋಪಿಸಿದರು.

ಜನರ ಕೆಲಸ ಮಾಡುವುದನ್ನು ಬಿಟ್ಟು ಶೇ.40 ಕಮೀಷನ್ ದಂಧೆಯಲ್ಲಿ ತೊಡಗಿದೆ.  ಪಿಎಸ್‍ಐ ನೇಮಕಾತಿ, ಸಹಾಯಕ ಇಂಜನಿಯರ್, ಶಿಕ್ಷಕರ ನೇಮಕ ಹಾಗೂ ರೈತರು ಪಡೆಯುವ ರಸಗೊಬ್ಬರದಲ್ಲೂ ಕಮಿಷನ್ ಪಡೆಯುವ ಮೂಲಕ ಪ್ರತಿಯೊಂದರಲ್ಲೂ ಹಗರಣ ನಡೆಸಿದೆ. ಜನರಿಗೆ ಮೋಸ ಮಾಡಿದೆ ಎಂದು ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ವಿದ್ಯಾವಂತ ಯುವಕರು ಉದ್ಯೋಗವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಜನತೆ ತತ್ತರಿಸಿದ್ದಾರೆ. ಶಾಸಕರ ಮನೆಯಲ್ಲಿ 8 ಕೋಟಿ ರೂ. ಸಿಕ್ಕರೂ ಕ್ರಮವಾಗಲಿಲ್ಲ. ರೈತರ ಉತ್ಪನ್ನಗಳಿಗೆ ನ್ಯಾಯಯುತ ದರ ನೀಡಲಿಲ್ಲ. ಕೇವಲ ಲೂಟಿ ಮಾಡುವುದೇ ಈ ಸರಕಾರದ ಗುರಿಯಾಗಿದೆ. ಮತ ಕೇಳಲು ಯಾವುದೇ ಅಭಿವೃದ್ಧಿ ವಿಷಯವಿಲ್ಲ ಎಂದು ಅವರು ಟೀಕಿಸಿದರು.

ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದರೆ ಕುಟುಂಬದ ಗೃಹಿಣಿಯರಿಗೆ ಪ್ರತಿ ತಿಂಗಳು 2000, ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್, ನಿರುದ್ಯೋಗಿ ಪದವಿಧರ ಯುವಕರಿಗೆ 3000, ಡಿಪ್ಲೋಮಾ ವಿದ್ಯಾರ್ಥಿಗಳಿಗೆ 1.500, ಬಿಪಿಎಲ್ ಕುಟುಂಬಕ್ಕೆ 10ಕೆಜಿ ಅಕ್ಕಿ, ಮಹಿಳೆಯರಿಗೆ  ಉಚಿತ ಬಸ್ ಪ್ರಯಾಣ, ಅಂಗನವಾಡಿ ಕಾರ್ಯಕರ್ತರಿಗೆ 15 ಸಾವಿರ ವೇತನ, ಆಶಾ ಕಾರ್ಯಕರ್ತೆಯರಿಗೆ 8 ಸಾವಿರ ವೇತನ ನೀಡಲಾಗುವುದು ಎಂದು ಅವರು ಹೇಳಿದರು.

ಮಾಜಿ ಸಂಸದೆ ರಮ್ಯಾ, ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಕೆಪಿಸಿಸಿ ಮಹಿಳಾಧ್ಯಕ್ಷೆ ಪುಷ್ಪಾ ಅಮರನಾಥ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಕಾಂಗ್ರೆಸ್ ಅಭ್ಯರ್ಥಿ ರವಿಕುಮಾರ್ ಗಣಿಗ, ಮಾಜಿ ಶಾಸಕರಾದ ಎಚ್.ಬಿ.ರಾಮು, ಮಲ್ಲಾಜಮ್ಮ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್, ಯುವ ಅಧ್ಯಕ್ಷ ವಿಜಯಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷೆ ಪಲ್ಲವಿ, ಮುಖಂಡರಾದ ಅಮರಾವತಿ ಚಂದ್ರಶೇಖರ್, ಕೆ.ಕೆ.ರಾಧಕೃಷ್ಣ, ಡಾ.ಕೃಷ್ಣ, ಹಾಲಹಳ್ಳಿ ರಾಮಲಿಂಗಯ್ಯ, ಸುಂಡಹಳ್ಳಿ ಮಂಜುನಾಥ್, ಸಿ.ಎಂ.ದ್ಯಾವಪ್ಪ, ಶುಭೋದಿನಿ, ಇತರ ಮುಖಂಡರು ಉಪಸ್ಥಿತರಿದ್ದರು.

“ಗುಜರಾತಿನ ಅಮೂಲ್ ಜತೆಗೆ ಕರ್ನಾಟಕದ ರೈತರ ಜೀವನಾಡಿ ನಂದಿನಿಯನ್ನು ವಿಲೀನಗೊಳಿಸಲು ಕಾಂಗ್ರೆಸ್ ಅವಕಾಶ ನೀಡುವುದಿಲ್ಲ. ನಮ್ಮ ಸರಕಾರ ನಂದಿನಿಯನ್ನು ಉಳಿಸಿ ಕೆಎಂಎಫ್ ಅನ್ನು ಮತ್ತಷ್ಟು ಸದೃಢಗೊಳಿಸಲಾಗುವುದು.”

-ಪ್ರಿಯಾಂಕಾ ಗಾಂಧಿ.

Similar News