ಕರ್ನಾಟಕದ ಅರ್ಧದಷ್ಟು ವಿಧಾನಸಭಾ ಕ್ಷೇತ್ರಗಳಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರೇ ಹೆಚ್ಚು: ವರದಿ
ಬೆಂಗಳೂರು: 2018ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ 67 (ಶೇ. 30ರಷ್ಟು) ವಿಧಾನಸಭಾ ಕ್ಷೇತ್ರಗಳಲ್ಲಿ ಪುರುಷ ಮತದಾರರಿಗಿಂತ ಅತ್ಯಧಿಕ ಸಂಖ್ಯೆಯಲ್ಲಿದ್ದ ಮಹಿಳಾ ಮತದಾರರ ಪ್ರಮಾಣವು ಈ ಬಾರಿಯ ಚುನಾವಣಾ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಪೈಕಿ 112 (ಶೇ. 50ರಷ್ಟು) ಕ್ಷೇತ್ರಗಳಿಗೆ ವ್ಯಾಪಿಸುವ ಮೂಲಕ ರಾಜ್ಯದ ಅರ್ಧದಷ್ಟು ವಿಧಾನಸಭಾ ಕ್ಷೇತ್ರಗಳಲ್ಲಿ ಪುರುಷ ಮತದಾರರನ್ನು ಮಹಿಳಾ ಮತದಾರರು ಹಿಂದಿಕ್ಕಿದ್ದಾರೆ ಎಂದು indianexpress.com ವರದಿ ಮಾಡಿದೆ.
ರಾಜ್ಯದ ಒಟ್ಟಾರೆ ಮತದಾರರ ಲಿಂಗಾನುಪಾತವೂ ಚೇತರಿಕೆ ಕಂಡಿದ್ದು, ಕಳೆದ ಐದು ವರ್ಷಗಳಲ್ಲಿ ಪ್ರತಿ 1000 ಪುರುಷ ಮತದಾರರಿಗೆ 973ರಷ್ಟಿದ್ದ ಮಹಿಳಾ ಮತದಾರರ ಸಂಖ್ಯೆ ಈ ಬಾರಿ 989ಕ್ಕೆ ತಲುಪಿದೆ.
ಮೇ 10ರಂದು ನಡೆಯಲಿರುವ ಚುನಾವಣೆಗೆ ಅಂತಿಮಗೊಂಡಿರುವ ಮತದಾರರ ನೋಂದಣಿ ದತ್ತಾಂಶದ ಪ್ರಕಾರ, ಪುರುಷ ಹಾಗೂ ಮಹಿಳಾ ಮತದಾರರ ಸಂಖ್ಯೆ ಕ್ರಮವಾಗಿ 2.67 ಕೋಟಿ ಹಾಗೂ 2.63 ಕೋಟಿ ಆಗಿದೆ. ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರ ಅನುಪಾತ ಅತ್ಯಧಿಕವಾಗಿದ್ದರೆ (1000 ಪುರುಷರಿಗೆ 1091 ಮಹಿಳೆಯರು), ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಇದೆ. (1000 ಪುರುಷರಿಗೆ 858 ಮಹಿಳೆಯರು). ಹಾಗೆಯೇ ರಾಜ್ಯ ಮತದಾರರ ಲಿಂಗಾನುಪಾತ ಸರಾಸರಿಯಾದ 989ಕ್ಕೆ ಹೋಲಿಸಿದರೆ 140 ವಿಧಾನಸಭಾ ಕ್ಷೇತ್ರಗಳಲ್ಲಿ ಲಿಂಗಾನುಪಾತ ಸರಾಸರಿ ಅತ್ಯಧಿಕವಾಗಿದೆ.
ಈ ಕುರಿತು Indian Express ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯ ವಿಶೇಷ ಚುನಾವಣಾಧಿಕಾರಿ ಸೂರ್ಯಸೇನ್ ಎ.ವಿ., ಮತದಾರರ ಲಿಂಗಾನುಪಾತವನ್ನು ಜನಸಂಖ್ಯೆಯಲ್ಲಿರುವ ಲಿಂಗಾನುಪಾತ, ವಲಸೆಯ ಮಾದರಿ ಹಾಗೂ ಚುನಾವಣಾ ಪ್ರಾಧಿಕಾರದ ಮತಪಟ್ಟಿಯ ಸರಿಪಡಿಸುವಿಕೆ ಪ್ರಕ್ರಿಯೆಯನ್ನು ಆಧರಿಸಿ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ಹೊಂದಿರುವ ಕರಾವಳಿ ಭಾಗಗಳಲ್ಲಿ ಪುರುಷರು ಉದ್ಯೋಗಕ್ಕಾಗಿ ವಲಸೆ ಹೋಗುವುದರಿಂದ ಲಿಂಗಾನುಪಾತ ವ್ಯತ್ಯಾಸ ತನಗೆ ತಾನೇ ಹೆಚ್ಚಿದೆ. ಹಾಗೆಯೇ ಪುರುಷ ಮತದಾರರು ಉದ್ಯೋಗಕ್ಕಾಗಿ ಬೇರೆಡೆ ವಲಸೆ ಹೋಗಿ, ಒಂದಕ್ಕಿಂತ ಹೆಚ್ಚು ಮತದಾರರ ಗುರುತಿನ ಚೀಟಿ ಪಡೆಯುವುದರಿಂದ ಒಂದಕ್ಕಿಂತ ಹೆಚ್ಚು ಕಡೆ ಮತಪಟ್ಟಿಯಲ್ಲಿ ನೋಂದಣಿಯಾಗಿರುವುದನ್ನು ಚುನಾವಣಾ ಪ್ರಾಧಿಕಾರ ಗುರುತಿಸಿ, ಮತಪಟ್ಟಿಯನ್ನು ಸರಿಪಡಿಸಿರುವುದರಿಂದ ಮಹಿಳೆಯರ ಲಿಂಗಾನುಪಾತ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.