ಬಜರಂಗ ದಳದಲ್ಲಿ ಅಮಾಯಕರ ಬಳಕೆ: ಎಚ್‍ಡಿಕೆ ಕಿಡಿ
ಕೊಪ್ಪಳ, ಮೇ 3: ಬಜರಂಗದಳದಲ್ಲಿ ಅಮಾಯಕರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಅವರ ಮನಸ್ಸು ಕೆಡಿಸಿ ಹಾಳು ಮಾಡಲಾಗುತ್ತಿದೆ. ಹೀಗಾಗಿ, ಅಮಾಯಕರನ್ನು ಚಿತಾವಣೆ ಮಾಡುವವರನ್ನು ಮೊದಲು ಮಟ್ಟಹಾಕಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜರಂಗದಳದಲ್ಲಿ ಅಮಯಾಕರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅವರ ಮನಸ್ಸು ಕೆಡಿಸಿ ಹಾಳು ಮಾಡಲಾಗುತ್ತಿದೆ. ಅವರ ತಲೆಯಲ್ಲಿ ಏನೆನೋ ತುಂಬಿ ಅವರನ್ನ ಹಾಳು ಮಾಡ್ತಿದ್ದಾರೆ. ಅಮಾಯಕರನ್ನು ಚಿತಾವಣೆ ಮಾಡುವವರನ್ನು ಮೊದಲು ಮಟ್ಟಹಾಕಬೇಕು. ಅದು ಬಿಟ್ಟು ನಿಷೇಧಿಸುತ್ತೇವೆ ಎಂದರೆ, ಉಪಯೋಗವಿಲ್ಲ. ಅಲ್ಲದೆ, ಕಾಂಗ್ರೆಸ್ ಐದು ವರ್ಷ ಅಧಿಕಾರದಲ್ಲಿ ಇದ್ದಾಗ ನಿಷೇಧಿಸಿಲ್ಲವೇಕೆ ಎಂದು ಪ್ರಶ್ನೆ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಮೋದಿ ಅವರು ನಮ್ಮನ್ನು ಟೀಕೆ ಮಾಡುತ್ತಿದ್ದಾರೆ. ನಮಗೆ ಸಿದ್ದಾಂತ ಇಲ್ಲ ಎನ್ನುತ್ತಿದ್ದಾರೆ. ನಾವು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೆ ಸಿದ್ಧಾಣತ ಸರಿಯಾಗುತ್ತದಾ? ಕಾಂಗ್ರೆಸ್ ಜತೆ ಹೋದರೆ ಸೈದ್ದಾಂತಿಕತೆ ಸರಿ ಇರಲ್ವಾ? ಎಂದು ಪ್ರಧಾನಿಗೆ ತಿರುಗೇಟು ಕೊಟ್ಟ ಅವರು, ಕಲ್ಯಾಣ ಕರ್ನಾಟಕ ಭಾಗಕ್ಕೆ ಅತೀ ಹೆಚ್ಚು ಕೊಡುಗೆ ಕೊಟ್ಟವನು ನಾನು. ಸಾಲ ಮನ್ನಾ ಮಾಡಿ ರೈತರ ಜೀವ ಉಳಿಸಿದ್ದು ನಾನು. ಅದನ್ನು ಪ್ರಧಾನಿ ಮೋದಿ ಮಾಡಿದ್ದಾರಾ?. ಅಲ್ಲದೆ,ಅವರ ವರ್ಚಸ್ಸು ಕಡಿಮೆಯಾಗಿದೆ. ಅವರ ಪ್ರಚಾರ ಈ ಸಲ ಚುನಾವಣೆ ಮೇಲೆ ಪರಿಣಾಮ ಬೀರಲ್ಲ ಎಂದರು.
ರಾಜ್ಯದ ಜನರು ನೆರೆ, ಬರ ಇದ್ದಾಗ ಬಾರದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚುನಾವಣೆ ಹೊತ್ತಿನಲ್ಲಿ ಬಂದು ರೋಡ್ ಶೋ ಮಾಡಿ ಕೈಬೀಸಿ ಹೋಗುತ್ತಿದ್ದಾರೆ. ರಾಜ್ಯಕ್ಕೆ ಇವರ ಕೊಡುಗೆ ಏನು ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನೆ ಮಾಡಿದರು.