ಕರ್ನಾಟಕ ವಿಧಾನಸಭಾ ಚುನಾವಣೆ | 458 ಕ್ರಿಮಿನಲ್‌ ಪ್ರಕರಣವಿರುವ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧೆ: ಎಡಿಆರ್

Update: 2023-05-03 16:03 GMT

ಬೆಂಗಳೂರು, ಮೇ 3: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ 458 ಅಭ್ಯರ್ಥಿಗಳು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮಾರ್ಸ್(ಎಡಿಆರ್) ಬಹಿರಂಗಪಡಿಸಿದೆ. 

ಬುಧವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಡಿಆರ್ ಸಂಸ್ಥೆಯ ಅಧ್ಯಕ್ಷ ಪ್ರೊ. ತ್ರಿಲೋಚನ್ ಶಾಸ್ತ್ರಿ ಮಾತನಾಡಿ, ‘3 ಅಥವಾ ಅದಕ್ಕಿಂತ ಹೆಚ್ಚು ಸ್ಪರ್ಧಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ಘೋಷಿಸಿಕೊಂಡರೆ ಅಂತಹ ಕ್ಷೇತ್ರವನ್ನು ರೆಡ್ ಅಲರ್ಟ್ ಕ್ಷೇತ್ರ ಎಂದು ಗುರುತಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದ 224 ಕ್ಷೇತ್ರಗಳ ಪೈಕಿ 111 ರೆಡ್ ಅಲರ್ಟ್ ಕ್ಷೇತ್ರಗಳಾಗಿವೆ ಎಂದರು.

2023ರಲ್ಲಿ ಚುನಾವಣೆಗೆ ಸ್ಫರ್ಧಿಸಿರುವ 1,774 ಅಭ್ಯರ್ಥಿಗಳು ಘೋಷಿಸಿರುವ ದಾಖಲೆ ವಿಶ್ಲೇಷಣೆ ನಡೆಸಿದ್ದು, ಈ ಪೈಕಿ 458 ಮಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿರುವುದು ಪತ್ತೆಯಾಗಿದೆ. ಬಿಜೆಪಿ 96, ಕಾಂಗ್ರೆಸ್ 122, ಜೆಡಿಎಸ್ 70, ಆಮ್ ಆದ್ಮಿ ಪಾರ್ಟಿ 48, ಎನ್‍ಸಿಪಿ 2, ಸಿಪಿಐ 1, ಪಕ್ಷೇತರ 119 ಅಭ್ಯರ್ಥಿಗಳ ವಿರುದ್ಧ ವಿವಿಧ ಅಪರಾಧ ಪ್ರಕರಣ ದಾಖಲಾಗಿದೆ ಎಂದು ಅವರು ಹೇಳಿದರು.

49 ಅಭ್ಯರ್ಥಿಗಳು ಮಹಿಳೆಯರ ಮೇಲಿನ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣ ಘೋಷಿಸಿಕೊಂಡಿದ್ದು, 1 ಅಭ್ಯರ್ಥಿ ತಮ್ಮ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿರುವುದಾಗಿ ಘೋಷಿಸಿದ್ದಾರೆ. 8 ಅಭ್ಯರ್ಥಿಗಳ ವಿರುದ್ಧ ಕೊಲೆ ಕೇಸ್ ದಾಖಲಾಗಿದ್ದರೆ, 35 ಅಭ್ಯರ್ಥಿಗಳು ತಮ್ಮ ವಿರುದ್ಧ ಕೊಲೆ ಯತ್ನ ನಡೆದಿರುವುದಾಗಿ ತಿಳಿಸಿದ್ದಾರೆ ಎಂದು ಪ್ರೊ. ತ್ರಿಲೋಚನ್ ಶಾಸ್ತ್ರಿ ಹೇಳಿದರು. 

ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು ಶ್ರೀಮಂತ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದರಿಂದ ನಮ್ಮ ಚುನಾವಣೆಯಲ್ಲಿ ಹಣ ಬಲದ ಪಾತ್ರ ಸ್ಪಷ್ಟವಾಗಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಎಪಿ ಯಿಂದ ಬಹುತೇಕ ಸ್ಪರ್ಧಿಗಳು 1 ಕೋಟಿ ರೂ.ಗಿಂತ ಅಧಿಕ ಆಸ್ತಿ ಘೋಷಿಸಿದ್ದಾರೆ ಎಂದರು.

ಕಾಂಗ್ರೆಸ್‍ನ 221 ಅಭ್ಯರ್ಥಿಗಳ ಪೈಕಿ ಪ್ರತಿ ಅಭ್ಯರ್ಥಿಗಳ ಆಸ್ತಿ ಸರಾಸರಿ 49.83 ಕೋಟಿ ರೂ., 224 ಬಿಜೆಪಿ ಅಭ್ಯರ್ಥಿಗಳ ಸರಾಸರಿ ಆಸ್ತಿ 39.41 ಕೋಟಿ ರೂ., ಜೆಡಿಎಸ್‍ನ 208 ಅಭ್ಯರ್ಥಿಗಳ ಸರಾಸರಿ ಆಸ್ತಿ 24.45 ಕೋಟಿ ರೂ., 208 ಎಎಪಿ ಅಭ್ಯರ್ಥಿಗಳ ಸರಾಸರಿ ಆಸ್ತಿ 4.25 ಕೋಟಿ ರೂ. ಎಂದು ಅವರು ವಿಶ್ಲೇಷಿಸಿದರು.

Similar News