×
Ad

ಅಧಿಕಾರಕ್ಕೆ ಬಂದರೆ 2.5 ಲಕ್ಷ ಖಾಲಿ ಹುದ್ದೆ ಭರ್ತಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

''ಡಬಲ್ ಎಂಜಿನ್ ಸರಕಾರದ ಎಲ್ಲ ಎಂಜಿನ್‍ಗಳು ವಿಫಲವಾಗಿದೆ''

Update: 2023-05-03 22:38 IST

ಆಳಂದ, ಮೇ 3: ‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎರಡೂವರೆ ಲಕ್ಷ ಹುದ್ದೆಯನ್ನು ಭರ್ತಿ ಮಾಡುತ್ತೇವೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದ್ದಾರೆ.

ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಬಹಳಷ್ಟು ನಿರುದ್ಯೋಗಿಗಳಿದ್ದಾರೆ. 2 ಲಕ್ಷದ 50 ಸಾವಿರ ಸರಕಾರಿ ಹುದ್ದೆಗಳು ಖಾಲಿ ಇವೆ. ಆದರೂ ಇನ್ನು ಭರ್ತಿಯಾಗಿಲ್ಲ. ಜನರಿಗೆ ಉದ್ಯೋಗಗಳನ್ನು ಯಾಕೆ ನೀಡುವುದಿಲ್ಲ ಎಂದರೆ ಇಲ್ಲಿ ಬಡವರನ್ನು ಇನ್ನು ಬಡವರಾಗಿಸುತ್ತಾ, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಾ ಇದ್ದಾರೆ. ಕೇಂದ್ರದಲ್ಲೂ 30ಲಕ್ಷ ಸರಕಾರಿ ಹುದ್ದೆ ಖಾಲಿ ಇವೆ. ನಾವು ಬಂದ ತಕ್ಷಣ ಹುದ್ದೆಗಳನ್ನು ತುಂಬುತ್ತೇವೆ ಎಂದರು.

ಕಾಂಗ್ರೆಸ್ ಘೋಷಿಸಿರುವ ಐದು ಗ್ಯಾರಂಟಿಗಳನ್ನು ಮೊದಲ ಸಂಪುಟದಲ್ಲಿ ಜಾರಿ ಮಾಡಲಾಗುವುದು ಎಂದು ನಾನು ಈಗಾಗಲೇ ಪಕ್ಷದ ರಾಜ್ಯದ ನಾಯಕರಿಗೆ ಆದೇಶಿಸಿದ್ದೇನೆ. ಇದು ಬೋಗಸ್ ಗ್ಯಾರಂಟಿ ಅಲ್ಲ. ಇದು ಮೋದಿ ಗ್ಯಾರಂಟಿ ಅಲ್ಲ, ಇದು ಶಾ ಗ್ಯಾರಂಟಿ ಅಲ್ಲ. ಇದು ಪಕ್ಕಾ ರಾಜ್ಯದ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಎಂದು ಖರ್ಗೆ ತಿಳಿಸಿದರು.

ರಾಜ್ಯ ಬಿಜೆಪಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಮೋದಿ ಅವರೇ ಲಂಚ ಪಡೆಯುತ್ತಿರುವವರ ಜೊತೆಗೆ ಓಡಾಡುತ್ತಿದ್ದಾರೆ, ಹೊಗಳುತ್ತಿದ್ದಾರೆ. ‘ನಾ ಖಾವೂಂಗ, ನಾ ಖಾನೇದೂಂಗಾ’ ಎನ್ನುವ ನರೇಂದ್ರ ಮೋದಿ ಕರ್ನಾಟಕದಲ್ಲಿ ಮಾತ್ರ ಖಾನೇವಾಲಾಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಖರ್ಗೆ ಟೀಕಿಸಿದರು.

ದೇಶದ ಪ್ರಧಾನಿ ಮೋದಿಗೆ ಕಲಬುರಗಿ ಮೇಲೆ ಬಹಳ ಪ್ರೀತಿ. ಒಂದು ಜಿಲ್ಲೆಯ ಚುನಾವಣೆಗೋಸ್ಕರ ಮೂರ್ನಾಲ್ಕು ಬಾರಿ ಬಂದಿದ್ದಾರೆಂದರೆ ರಾಜ್ಯದ ಜನತೆಯ ಒಲವು ಕಾಂಗ್ರೆಸ್ ಪಕ್ಷಕ್ಕೆ ಇದೆ ಎಂದರ್ಥ. ಅದಕ್ಕಾಗಿ ಅವರು ಜಿಲ್ಲೆಗೆ ನಿಮ್ಮ ಮನವನ್ನು ಕೆಡಿಸುವುದಕ್ಕೆ ಬಂದಿದ್ದಾರೆ. ಆದರೆ ಅವರಿಗೆ ಗೊತ್ತಿಲ್ಲ ಇಲ್ಲಿಯ ಜನ ಬುದ್ಧಿವಂತರು ನಂಬಿದ ತತ್ವದ ಮೇಲೆ ಮತ ಹಾಕುತ್ತಾರೆ ಎಂದು ಖರ್ಗೆ ತಿಳಿಸಿದರು.

ಬಿಜೆಪಿ ಅವರಿಗೆ ದೊಡ್ಡ ಯೋಜನೆಗಳನ್ನು ತಂದು ಗೊತ್ತಿಲ್ಲ. ಧರ್ಮ ಧರ್ಮದೊಂದಿಗೆ ಬಡ ಜನರೊಳಗಡೆ ಅವರು ಜಗಳ ಹಚ್ಚುತ್ತಿದ್ದಾರೆ. ಮಾತು ಎತ್ತಿದ್ದರೆ ಹಿಂದೂ ಮುಸಲ್ಮಾನ ಎಂದು ಹೇಳುವ ಮೂಲಕ ಸಾಮರಸ್ಯವನ್ನು ಕೆಡವಿ ಮತ ದ್ರುವೀಕರಣ ಮಾಡಲು ನಿಂತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲಿ, ಇಂತಹ ಸಮಾಜದ್ರೋಹ ಕೆಲಸ ಮಾಡುವ ಶಕ್ತಿಗಳಿಗೆ ಎಲ್ಲ ವಿಚ್ಛೀದ್ರಕಾರಿ ಶಕ್ತಿಗಳಿಗೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಡಬಲ್ ಎಂಜಿನ್ ಸರಕಾರದ ಎಲ್ಲ ಎಂಜಿನ್‍ಗಳು ವಿಫಲವಾಗಿದೆ. ಜನ ಬೆಂಬಲವಿದ್ದಲ್ಲಿ ಮಾತ್ರ ಬೊಮ್ಮಾಯಿ ಮುಖ್ಯಮಂತ್ರಿಯಾಗಲು ಸಾಧ್ಯ. ಇಲ್ಲಿು ಅಮಿತ್ ಶಾ ಮತ್ತು ಮೋದಿ ಅವರು ಬಂದು ಮುಖ್ಯಮಂತ್ರಿಯಾಗುತ್ತಾರಾ, ನಮ್ಮ ಜನ ಏನೂ ಮಾಡದ ಮೋದಿಯವರ ಬಿಜೆಪಿಗೆ ತಕ್ಕ ಪಾಠ ಕಲಿಸಿ. ಅವರನ್ನು ಧಿಕ್ಕರಿಸುತ್ತಾರೆ ಎಂದು ಖರ್ಗೆ ತಿಳಿಸಿದರು.

Similar News