ಕಾಂಗ್ರೆಸ್ ಪಕ್ಷ ಎಸ್.ಡಿ.ಪಿ.ಐ., ಪಿಎಫ್ಐ ಕಪಿಮುಷ್ಟಿಯಲ್ಲಿದೆ: ಬೊಮ್ಮಾಯಿ ಆರೋಪ
ಹುಬ್ಬಳ್ಳಿ, ಮೇ 4: ಕಾಂಗ್ರೆಸ್ ಪಕ್ಷವು ಎಸ್.ಡಿ.ಪಿ.ಐ ಹಾಗೂ ಪಿಎಫ್ಐ ಕಪಿಮುಷ್ಟಿಯಲ್ಲಿದ್ದು, ಅದರಿಂದ ಹೊರಬರಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ಬರುವ ರೀತಿಯಲ್ಲಿ ಕಾಂಗ್ರೆಸ್ ವರ್ತಿಸುತ್ತಿದೆ. ಅವರ ಒತ್ತಡಕ್ಕೆ ಮಣಿಯುತ್ತಿದ್ದಾರೆ. ನಾವು ಎಸ್.ಡಿ.ಪಿ.ಐ, ಪಿಎಫ್ಐ ವಿರುದ್ಧ ಮಾತನಾಡಿದರೆ ಕಾಂಗ್ರೆಸ್ ನಾಯಕರಿಗೆ ತಳಮಳ ಶುರುವಾಗುತ್ತದೆ. ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದರು.
ಪಿ.ಎಫ್.ಐ. ನ ಇನ್ನೊಂದು ರೂಪ ಎಸ್.ಡಿ.ಪಿ.ಐ.ಎಸ್.ಡಿ.ಪಿ.ಐ ಬೆಂಬಲವನ್ನು ಕಾಂಗ್ರೆಸ್ ಬಹಿರಂಗವಾಗಿ ಕೇಳಿತ್ತು. ಆದರೆ ಅವರು ಕೊಡುವುದಿಲ್ಲ ಎಂದಿದ್ದಾರೆ. ಕಾಂಗ್ರೆಸ್ ನ ಕಾಲದಲ್ಲಿ ಎಸ್.ಡಿ.ಪಿ.ಐ., ಪಿ.ಎಫ್.ಐ ಪ್ರಬಲವಾಗಿ ಬೆಳೆದಿದ್ದವು. ಬಾಲವೇ ದೇಹವನ್ನು ಅಲುಗಾಡಿಸುವ ಸ್ಥಿತಿ ಇದೆ.ಎಸ್.ಡಿ.ಪಿ.ಐ ಪಕ್ಷವು ಬಿಜೆಪಿಯ ಬಿ. ಟೀಂ ಅಲ್ಲ. ಬಿ ಟೀಂ ಆಗಿದ್ದರೆ ನಾವು ಪಿ.ಎಫ್.ಐ ಬ್ಯಾನ್ ಮಾಡ್ತಿದ್ದೆವಾ..? ಕಾಂಗ್ರೆಸ್ ನವರು ತಾವು ಮಾಡಿದ ತಪ್ಪನ್ನು ಮುಚ್ಚಲು ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎಂದರು.
ಬಜರಂಗ ದಳಕ್ಕೆ ಆಂಜನೇಯನಿಗೆ ಏನು ಸಂಬಂಧ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿ, ರಾಮನಿಗೂ ಹನುಮನಿಗೂ ಏನು ಸಂಬಂಧ ಇದೆಯೋ ಅದೇ ಸಂಬಂಧ. ಆಂಜನೇಯನಿಗೂ ಬಜರಂಗ ದಳಕ್ಕಿದೆ. ಇದನ್ನು ಕಾಂಗ್ರೆಸ್ ನವರು ಅರ್ಥ ಮಾಡಿಕೊಳ್ಳಬೇಕು ಎಂದರು.
ಸೋನಿಯಾಗಾಂಧಿ ಹುಬ್ಬಳ್ಳಿ ಭೇಟಿ ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿ ಸೋನಿಯಾ ಗಾಂಧಿ ಬರಲಿ, ನಾವು ಕಾಂಗ್ರೆಸ್ ನಾಯಕರ ರೀತಿ ಅಳೋಲ್ಲ. ಮೋದಿ, ಅಮಿತ್ ಶಾ ಯಾಕೆ ಬಂದರು ಎಂದು ಕಾಂಗ್ರೆಸ್ ನವರು ಕೇಳಿದಂತೆ ನಾವು ಕೇಳುವುದಿಲ್ಲ ಎಂದು ಹೇಳಿದರು.