ಬಬಲೇಶ್ವರದಲ್ಲಿ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲರಿಂದ ಗೂಂಡಾಗಿರಿ: ಕಾಂಗ್ರೆಸ್ ಆರೋಪ
'ವಿಜುಗೌಡರಿಗೆ ಟಿಕೆಟ್ ಘೋಷಣೆಯಾದಾಗ ಅವರ ಮಗ ಗುಂಡು ಹಾರಿಸಿ ಸಂಭ್ರಮಿಸಿದ್ದ'
ವಿಜಯಪುರ, ಮೇ 4: ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ ಗೂಂಡಾಗಿರಿ ಮಾಡುತ್ತಿದ್ದಾರೆ. ವಿಜುಗೌಡರಿಗೆ ಬಿಜೆಪಿ ಟಿಕೆಟ್ ಘೋಷಣೆಯಾದಾಗ ಅವರ ಪುತ್ರ ಸಮರ್ಥ ಗೌಡ ಗುಂಡು ಹಾರಿಸಿ ಸಂಭ್ರಮಿಸಿದ್ದರು ಎಂದು ಕೆಪಿಸಿಸಿ ಪ್ರಚಾರ ಸಮಿತಿ ವಕ್ತಾರ ಸಂಗಮೇಶ ಬಬಲೇಶ್ವರ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ ಹೇಳಿದ್ದಾರೆ.
ವಿಜಯಪುರ ನಗರದಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಸಮರ್ಥ ಗುಂಡು ಹಾರಿಸುತ್ತಿರುವ ವೀಡಿಯೊ ದೃಶ್ಯಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
ವಿಜುಗೌಡ ಅವರ ಗೂಂಡಾಗಿರಿ ಇಂದು ನಿನ್ನೆಯದ್ದಲ್ಲ. 80ರಿಂದ 90ರ ದಶಕದಲ್ಲಿ ಎಪಿಎಂಸಿ ಚುನಾವಣೆಯಲ್ಲೂ ಗುಂಡು ಹಾರಿಸಿ, ಜನರನ್ನು ಬೆದರಿಸುತ್ತಿದ್ದರು. ಈಗಲೂ ಗುಂಡು ಹಾರಿಸುವ ಸಂಸ್ಕೃತಿ ಮುಂದುವರಿದಿದೆ. ಜನರನ್ನು ಬೆದರಿಸಿ, ಹತೋಟಿಯಲ್ಲಿಟ್ಟು ಕೆಲಸಗಳನ್ನು ಬಿಜೆಪಿ ಅಭ್ಯರ್ಥಿ ಮಾಡುತ್ತಿದ್ದಾರೆ ಎಂದರು.
ಜನರನ್ನು ಬೆದರಿಸುವ ಈ ಗೂಂಡಾ ಪ್ರವೃತ್ತಿ ಬಬಲೇಶ್ವರದಲ್ಲಿ ಮಾತ್ರವಲ್ಲ, ರಾಜ್ಯಾದ್ಯಂತ ಬಿಜೆಪಿ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ಮುಖಂಡ ಸಂಗಮೇಶ ಬಬಲೇಶ್ವರ ಮಾತನಾಡಿ, ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಎಂ.ಬಿ.ಪಾಟೀಲ್ ಅವರ ಅಭಿವೃದ್ಧಿ ಮತ್ತು ಮೊಸಳೆ ಕಣ್ಣೀರು ನಡುವೆ ಸ್ಪರ್ಧೆ ಏರ್ಪಟ್ಟಿದೆ. ವಿಜುಗೌಡ ಪಾಟೀಲ ಇದೀಗ ಮೊಸಳೆ ಕಣ್ಣೀರು ಹಾಕಿ ಮತ ಯಾಚನೆಗೆ ಮುಂದಾಗಿದ್ದಾರೆ. ಇವರ ಈ ಗೂಂಡಾ ಪ್ರವೃತ್ತಿಗೆ ಜನತೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು ಎಂದು ಒತ್ತಾಯಿಸಿದರು.